ಬೆಳ್ತಂಗಡಿ: ವಿದ್ಯೆಯ ಜತೆಗೆ ಕೌಶಲ ಬೆಳೆಸಿಕೊಳ್ಳಬೇಕು. ಜತೆಗೆ ನಾಗರಿಕ ಪ್ರಜ್ಞೆಯನ್ನೂ ಮೈಗೂಡಿಸಿಕೊಳ್ಳಬೇಕು ಎಂದು ಉಜಿರೆ ಎಸ್ ಡಿ ಎಂ ಕಾಲೇಜಿನ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಲಕ್ಷ್ಮೀನಾರಾಯಣ ಕೆ.ಎಸ್. ಹೇಳಿದರು. ಬೆಳ್ತಂಗಡಿ ತಾಲೂಕಿನ ಚಿಬಿದ್ರೆ ಗ್ರಾಮದ ಪೆರಿಯಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮುಂಡಾಜೆ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು.
ಪ್ರಸ್ತುತ ಕಾಲಘಟ್ಟ ಕೌಶಲಗಳ ಯುಗವಾಗಿರುವುದರಿಂದ ನಮ್ಮ ಸಾಧನೆಗೆ ಕೌಶಲಗಳೇ ಅಗತ್ಯವಾಗಿ ಬೇಕಾಗಿವೆ. ಈ ಕಾರಣದಿಂದ ವಿವಿಧ ಕ್ಷೇತ್ರಗಳ ಕುರಿತ ಕೌಶಲ, ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದರು.
ಎನ್ ಎಸ್ ಎಸ್ ಸ್ವಯಂ ಸೇವಕರು ಸೈನಿಕರ ರೀತಿ ಕೆಲಸ ಮಾಡುವುದರಿಂದ ಅವರು ದೇಶದ ಆಸ್ತಿ. ಶಿಬಿರದಲ್ಲಿ ಶಿಕ್ಷಣದ ಜತೆಗೆ ಜೀವನ ಶಿಕ್ಷಣವೂ ಸಿಗುತ್ತದೆ. ಸಮಸ್ಯೆಗಳನ್ನು ನಿವಾರಣೆ ಮಾಡುವ ಕೌಶಲವೂ ಲಭಿಸುತ್ತದೆ. ಶಿಬಿರವು ಪ್ರತಿಕ್ರಿಯಿಸುವ ಜತೆಗೆ ಸ್ಪಂದಿಸುವ ಮನೋಭಾವವನ್ನೂ ಕಲಿಸಿಕೊಡುತ್ತದೆ ಎಂದರು. ಸೇವೆ ಮಾಡುವುದರಲ್ಲಿ ಆರ್ಥಿಕ ಲಾಭ ಇಲ್ಲ. ಪದವಿ ಸಿಗುವುದಿಲ್ಲ. ಆದರೆ, ಇಲ್ಲಿ ಸಿಗುವ ಅನುಭವ, ನಿಃಸ್ವಾರ್ಥ ಮನೋಭಾವ ಎಲ್ಲೂ ಸಿಗುವುದಿಲ್ಲ. ಅಲ್ಲದೆ, ಬೇರೆಯವರಿಗೆ ನೆರವಾಗುವ ಮೂಲಕ ಸಂಭ್ರಮಿಸಬಹುದು ಎಂದರು. ಗ್ರಾಮದ ಉದ್ಧಾರಕ್ಕೆ ನೆರವಾಗಬೇಕು. ಈ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು. ಈ ನಿಟ್ಟಿನಲ್ಲಿ ಜವಾಬ್ದಾರಿ ವಹಿಸಿಕೊಳ್ಳಬೇಕು. ಜಬಾಬ್ದಾರಿತ ನಾಗರಿಕರಾಗಿ ಸೂಕ್ಷ್ಮತೆ ಹಾಗೂ ಸಂವೇದನಾಶೀಲರಾಗಬೇಕು. ಶ್ರಮಪಟ್ಟು ಕಾರ್ಯನಿರ್ವಹಿಸಿದರೆ ನಮ್ಮ ಏಳಿಗೆ ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಂಡಾಜೆ ವಿವೇಕಾನಂದ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ವಿನಯಚಂದ್ರ ಮಾತನಾಡಿ, ಸಮಾಜದ ಸ್ವಾಸ್ಥ್ಯಕ್ಕೆ ಶ್ರಮಿಸಿ ಸಮಾಜಕ್ಕೆ ಕೊಡುಗೆ ನೀಡಬೇಕು. ಸಂಸ್ಕಾರ ಬೆಳೆಸಿಕೊಂಡು ಸಮಾಜದ ಪರಿವರ್ತನೆಯ ವಾಹಕರಾಗಬೇಕು ಎಂದು ಸಲಹೆ ನೀಡಿದರು. ಸಾಮರಸ್ಯದ ಜೀವನ ನಡೆಸಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಪ್ಲಾಸ್ಟಿಕ್ ಬಳಕೆ ನಿರ್ಮೂಲನೆ ಮಾಡಿ, ಸ್ವದೇಶಿ ವಸ್ತುಗಳಿಗೆ ಆದ್ಯತೆ ನೀಡಬೇಕು. ರಾಷ್ಟ್ರೀಯ ವಿಚಾರಗಳಿಗೆ ಒತ್ತು ನೀಡಬೇಕು ಎಂದು ಅವರು ಸಲಹೆ ನೀಡಿದರು.
ಶಿಬಿರಾಧಿಕಾರಿ ನಮಿತಾ ಕೆ.ಆರ್. ವರದಿ ವಾಚಿಸಿದರು. ವಾರ್ಷಿಕ ವಿಶೇಷ ಶಿಬಿರದ ನಿರ್ವಹಣಾ ಸಮಿತಿ ಗೌರವ ಸಲಹೆಗಾರ ರಾಘವ ಗೌಡ ಕುಡುಮಡ್ಕ, ಸಮಿತಿ ಅಧ್ಯಕ್ಷ ಹಾಗೂ ಪೆರಿಯಡ್ಕ ಸರ್ಕಾರಿ ಶಾಲೆ ಎಸ್.ಡಿ.ಎಂ.ಸಿ. ಅಧ್ಯಕ್ಷ ಸೋಮನಾಥ ಗೌಡ ಭಾಗವಹಿಸಿದ್ದರು.
ನಾಟಿ ವೈದ್ಯ ಮೂಡ್ಜಾಲು ರಾಮಣ್ಣ ಗೌಡ, ಶಿಬಿರಾಧಿಕಾರಿ ನಮಿತಾ ಕೆ.ಆರ್., ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ತಿರುಮಲೇಶ್ ಎಂ., ಪವನ್ ಎಂ., ಯತೀಂದ್ರ ಪೆರಿಯಡ್ಕ, ಉಪನ್ಯಾಸಕರಾದ ಸುಭಾಸ್ ಚಂದ್ರ ಜೈನ್, ವಸಂತಿ, ಕೃಷ್ಣಕಿರಣ್ ಕೆ., ವಿದ್ಯಾರಾವ್, ಪುರುಷೋತ್ತಮ ಶೆಟ್ಟಿ, ಪದ್ಮನಾಭ ಬಿ.ಕೆ. ಅವರನ್ನು ಸನ್ಮಾನಿಸಲಾಯಿತು.
ಅಡುಗೆ ತಯಾರಿಸಿದ ಪಾಂಡಿರಾಜ್ ಜೈನ್, ರವಿರಾಜ್ ಜೈನ್ ಬಳೆಂಜ ಅವರನ್ನು ಗೌರವಿಸಲಾಯಿತು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಉಪನ್ಯಾಸಕ ಪುರುಷೋತ್ತಮ ಶೆಟ್ಟಿ ಸ್ವಾಗತಿಸಿದರು. ಸೋಮನಾಥ ಗೌಡ ಮಾಕಳ ವಂದಿಸಿದರು. ಉಪನ್ಯಾಸಕ ಸುಭಾಸ್ ಚಂದ್ರ ಜೈನ್ ಕಾರ್ಯಕ್ರಮ ನಿರೂಪಿಸಿದರು.