Site icon Suddi Belthangady

ಉಜಿರೆ: ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿಗಳೊಂದಿಗೆ ಸಂವಾದ- ಸಂಶೋಧನೆಗಳಿಂದ ವಿದ್ಯಾರ್ಥಿಗಳಿಗೆ ಭವಿಷ್ಯ: ಡಾ.ರವೀಂದ್ರ ವಿಕ್ರಮ್ ಸಿಂಗ್

ಉಜಿರೆ: ರಸಾಯನಶಾಸ್ತ್ರ ಕ್ಷೇತ್ರದಲ್ಲಿ ತೀವ್ರಗತಿಯಲ್ಲಿ ಸಾಗುತ್ತಿರುವ ಸಂಶೋಧನೆಗಳು ವಿಶ್ವ ಆರೋಗ್ಯ ರಂಗದಲ್ಲಿ ಪರಿಣಾಮಕಾರಿ ಬದಲಾವಣೆಗಳನ್ನು ತರಲಿವೆ ಎಂದು ಬೆಂಗಳೂರಿನ ಸಿಗ್ಮಾ ಆಲ್ಡ್ರಿಚ್ ಕಂಪೆನಿಯ ತಾಂತ್ರಿಕ ಮತ್ತು ಸಂಶೋಧನಾ ವಿಭಾಗದ ನಿರ್ದೇಶಕ, ಮುಖ್ಯಸ್ಥ ಡಾ.ರವೀಂದ್ರ ವಿಕ್ರಮ್ ಸಿಂಗ್ ಹೇಳಿದರು.

ಉಜಿರೆ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿಗಳೊಂದಿಗಿನ ಸಂವಾದದಲ್ಲಿ ಮಾತನಾಡಿದರು.

ಕೋವಿಡ್ ನಂತರದ ದಿನಗಳಲ್ಲಿ ಔಷಧ ಕ್ಷೇತ್ರದಲ್ಲಿ ನಿರಂತರವಾಗಿ ಪ್ರಯೋಗಗಳು ನಡೆಯುತ್ತಿವೆ. ವಿದ್ಯಾರ್ಥಿಗಳು ಇಲ್ಲಿ ಲಭ್ಯವಿರುವ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡರೆ ಉದ್ಯೋಗ ಮಾರುಕಟ್ಟೆಯಲ್ಲಿ ಸ್ಥಾನ ಭದ್ರ ಪಡಿಸಿಕೊಳ್ಳಬಹುದು. ಸಂಶೋಧನಾ ಕ್ಷೇತ್ರ, ವೈದ್ಯಕೀಯ, ಶಿಕ್ಷಣ ಮತ್ತು ವೈಜ್ಞಾನಿಕ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ಭವಿಷ್ಯವಿದೆ ಎಂದರು.

ರಸಾಯನಶಾಸ್ತ್ರವು ಮನುಕುಲಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದು, ವಿಶ್ವವನ್ನು ಕಾಡಿರುವ ಹಲವು ರೋಗಗಳಿಗೆ ಔಷಧಿ ಕಂಡುಹಿಡಿಯುವಲ್ಲಿ ವಿಜ್ಞಾನಿಗಳ ಪಾತ್ರ ಮಹತ್ವದ್ದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಸ್ನಾತಕೊತ್ತರ ಕೇಂದ್ರದ ಡೀನ್ ಡಾ.ವಿಶ್ವನಾಥ ಪಿ., ವಿಭಾಗದ ಕಾಂಕೆಮ್ ಕಾರ್ಯದರ್ಶಿ ಡಾ.ನವೀನ್ ಕುಮಾರ್ ಮತ್ತು ಜಂಟಿ ಕಾರ್ಯದರ್ಶಿ ಡಾ.ಸುಜಯ್ ಎಂ.ಎo. ಉಪಸ್ಥಿತರಿದ್ದರು.

Exit mobile version