Site icon Suddi Belthangady

ಬೆಳಾಲಿನಲ್ಲಿ 1867ನೇ ಮದ್ಯವರ್ಜನ ಶಿಬಿರದಲ್ಲಿ ಡಾ.ಹೆಗ್ಗಡೆ ಆಶೀರ್ವಚನ

ಬೆಳಾಲು: ದುಶ್ಚಟ ಮನುಷ್ಯನ ಪಂಚೇಂದ್ರಿಯಗಳ ಮೂಲಕ ಸ್ಪರ್ಶೇಂದ್ರಿಯಕ್ಕೆ ಅಂಟಿಕೊಳ್ಳುತ್ತದೆ. ಚಟಗಳು ಕೆಟ್ಟ ಕರ್ಮಗಳಿಗೆ, ಹೀನ ಕೆಲಸವನ್ನು ಮಾಡಲು ಪ್ರಚೋದಿಸುತ್ತದೆ. ಇದು ವ್ಯಕ್ತಿತ್ವದ ನಾಶಕ್ಕೆ ಕಾರಣವಾಗುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ನುಡಿದರು.

ಬೆಳಾಲು ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿಯ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್, ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನ ಕೇಂದ್ರ ಲಾಯಿಲ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ವತಿಯಿಂದ ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರ, ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನ, ಬೆಳ್ತಂಗಡಿ ರೋಟರಿ ಕ್ಲಬ್, ಪ್ರಗತಿ ಬಂಧು, ಉಜಿರೆ ಸ್ವ ಸಹಾಯ ಸಂಘಗಳ ಒಕ್ಕೂಟ, ನವಜೀವನ ಸಮಿತಿಗಳು ಇವರ ಸಹಕಾರದೊಂದಿಗೆ ಬೆಳಾಲು ನವಜೀವನ ಸಮಿತಿ ಸದಸ್ಯರ 25ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಬೆಳಾಲು ಶ್ರೀ ಧ.ಮಂ.ಪ್ರೌಢ ಶಾಲೆಯಲ್ಲಿ ಅ.4ರಿಂದ 11ರವರೆಗೆ ನಡೆಯುತ್ತಿರುವ 1867ನೇ ಮದ್ಯವರ್ಜನ ಶಿಬಿರಕ್ಕೆ ಅ.8ರಂದು ಭೇಟಿ ನೀಡಿ ಆಶೀರ್ವದಿಸಿದರು.

ಮನೆಯಲ್ಲಿ ಹೆತ್ತವರು ದುಶ್ಚಟಕ್ಕೆ ತುತ್ತಾದರೆ ಅದುವೇ ಕುಟುಂಬಕ್ಕೆ ಶಾಪವಾಗಿ ಪರಿಣಮಿಸುತ್ತದೆ. ಜೀವನದಲ್ಲಿ ಪರಿವರ್ತನೆ ಎಂಬುದು ಜಗದ ನಿಯಮ ಹಾಗಾಗಿ ದುಶ್ಚಟಕ್ಕೆ ತುತ್ತಾದವರು ಶಿಬಿರದ ಮೂಲಕ ನವಜೀವನ ಕಂಡುಕೊಳ್ಳುತ್ತಾರೆ. ಚುಚ್ಚುಮದ್ದಿಲ್ಲದೆ, ಆಣೆ ಮಾಡಿಸದೆ ಶಿಬಿರದ ಮೂಲಕ ಮನಸ್ಸಿನ ಪರಿವರ್ತನೆ ಮಾಡಲಾಗುತ್ತದೆ. ಶಿಬಿರದಲ್ಲಿ ಪಾಲ್ಗೊಂಡವರು ಮನಸ್ಸು ಚಂಚಲಗೊಳಿಸದೆ ಮುಂದುವರೆಯಿರಿ. ಇದರ ಫಲ ಕುಟುಂಬಕ್ಕೆ, ಸಮಾಜಕ್ಕೆ ಸಿಗಲಿ ಎಂದು ಹರಸಿದರು.

ಶ್ರೀ ಕ್ಷೇ.ಧ.ಗ್ರಾ.ಯೋ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್., ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ವಸಂತ್ ಸಾಲ್ಯಾನ್ ಕಾಪಿನಡ್ಕ, ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ, ಗ್ರಾಮಾಭಿವೃದ್ಧಿ ಯೋಜನೆ ಉಡುಪಿ ಪ್ರಾದೇಶಿಕ ನಿರ್ದೇಶಕ ದುಗ್ಗೇ ಗೌಡ, ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್, ಬೆಳಾಲು ಗ್ರಾ.ಪಂ. ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್, ಮದ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿ ಗೌರವಾಧ್ಯಕ್ಷ ಜತ್ತನ್ನ ಗೌಡ, ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಕಾಸಿಂ ಮಲ್ಲಿಗೆ ಮನೆ, ವೇದಿಕೆ ಮಾಜಿ ಅಧ್ಯಕ್ಷರಾದ ವೆಂಕಟ್ರಾಯ ಅಡೂರು, ಶಾರದಾ ರೈ, ತಿಮ್ಮಪ್ಪ ಗೌಡ ಬೆಳಾಲು, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಕೇಂದ್ರ ಸಮಿತಿ ಅಧ್ಯಕ್ಷ ಸೀತಾರಾಂ ಆರ್., ಗಂಡಿಬಾಗಿಲು ಸಿಯೋನ್ ಆಶ್ರಮದ ಆಡಳಿತ ಟ್ರಸ್ಟಿ ಯು.ಸಿ.ಪೌಲೋಸ್ ಉಪಸ್ಥಿತರಿದ್ದರು.

ಶಿಬಿರಾಧಿಕಾರಿ ದೇವಿಪ್ರಸಾದ್ ಶಿಬಿರದ ಶಿಬಿರಾರ್ಥಿಗಳ ವಿವರ ನೀಡಿದರು ವ್ಯಸನ ಮುಕ್ತರಾದ ಶಿಬಿರಾರ್ಥಿ ಆದಂಖಾನ್, ಗಣೇಶ್ ಗೌಡ ಅನಿಸಿಕೆ ವ್ಯಕ್ತಪಡಿಸಿದರು.76 ಶಿಬಿರಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡರು.

ಅಧ್ಯಕ್ಷತೆ ವಹಿಸಿದ್ದ ಬೆಳಾಲು 1867ನೇ ಮದ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನೋಟರಿ ವಕೀಲ ಶ್ರೀನಿವಾಸ ಗೌಡ ಸ್ವಾಗತಿಸಿದರು.ಗ್ರಾಮಾಭಿವೃದ್ಧಿ ಯೋಜನೆಯ ಬೆಳ್ತಂಗಡಿ ಯೋಜನಾಧಿಕಾರಿ ಸುರೇಂದ್ರ ಕುಮಾರ್ ವಂದಿಸಿದರು. ಯೋಜನೆಯ ಕೃಷಿ ಅಧಿಕಾರಿ ರಾಮ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಪ್ರಗತಿ ಬಂಧು ಕೇಂದ್ರ ಒಕ್ಕೂಟ, ಬೆಳಾಲು ಒಕ್ಕೂಟಗಳಿಂದ, ನವಜೀವನ ಸಮಿತಿ ಸದಸ್ಯರು ಹೆಗ್ಗಡೆಯವರನ್ನು ಗೌರವಿಸಿದರು.

ಗ್ರಾಮದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಊರವರು, ಭಜನಾ ಮಂಡಳಿಗಳ ಸದಸ್ಯರು, ಶೌರ್ಯ ವಿಪತ್ತು ಘಟಕದ ಸದಸ್ಯರು, ನವಜೀವನ ಸಮಿತಿ ಸದಸ್ಯರು, ವ್ಯವಸ್ಥಾಪನಾ ಸಮಿತಿ ಸದಸ್ಯರು, ಯೋಜನೆಯ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು ಹಾಜರಿದ್ದು ಸಹಕರಿಸಿದರು.

Exit mobile version