ಬೆಳ್ತಂಗಡಿ: ಸುದ್ದಿ ಬಿಡುಗಡೆ ಪತ್ರಿಕೆ ಬೆಳ್ತಂಗಡಿ ಮತ್ತು ಪತ್ರಿಕೋದ್ಯಮ ವಿಭಾಗ ಎಸ್‌ಡಿಎಂ ಕಾಲೇಜು ಉಜಿರೆ ಇದರ ನೇತೃತ್ವದಲ್ಲಿ ರೋಟರಿ ಕ್ಲಬ್ ಬೆಳ್ತಂಗಡಿ, ವಿವಿಧ ಸಂಘ ಸಂಸ್ಥೆಗಳ ಸಹಯೋಗ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ದ.ಕ. ಮಂಗಳೂರು ಮತ್ತು ಬೆಳ್ತಂಗಡಿಯ ಪತ್ರಕರ್ತರ ಹಾಗೂ ಮಾಧ್ಯಮದವರ ಸಹಕಾರದೊಂದಿಗೆ ಉಜಿರೆ ಎಸ್‌ಡಿಎಂ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಸೆಮಿನಾರ್ ಸಭಾಂಗಣದಲ್ಲಿ ಅಕ್ಟೋಬರ್ 4ರಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಪತ್ರಿಕಾ ಕಾರ್ಯಾಗಾರ ನಡೆಯಲಿದೆ.
ಗ್ರಾಮೀಣ ಪತ್ರಿಕೋದ್ಯಮದ ಅವಕಾಶಗಳು, ಗ್ರಾಮೀಣ ವರದಿಗಾರರು ಎದುರಿಸುವ ಸಮಸ್ಯೆಗಳು, ಅಭಿವೃದ್ಧಿ ಪತ್ರಿಕೋದ್ಯಮ ಮತ್ತು ಪಾಸಿಟಿವ್ ಹಾಗೂ ನೆಗೆಟಿವ್ ಪತ್ರಿಕೋದ್ಯಮದ ಕುರಿತು ಕಾರ್ಯಾಗಾರದಲ್ಲಿ ಚರ್ಚೆ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಲಿದೆ. ಎಸ್‌ಡಿಎಂ ಕಾಲೇಜು ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಪಾಲ್ಗೊಳ್ಳಲಿದ್ದಾರೆ.
ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ ಮತ್ತು ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮ ಭಾಗವಹಿಸಲಿದ್ದಾರೆ. ಸಂವಾದ ಗೋಷ್ಠಿಯನ್ನು ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷರಾದ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಮಂಡಳಿ ಸದಸ್ಯ ಪಿ.ಬಿ. ಹರೀಶ್ ರೈ, ಹಿರಿಯ ಪತ್ರಕರ್ತರಾದ ಅಂಕಣಗಾರ ಜಿತೇಂದ್ರ ಕುಂದೇಶ್ವರ, ಪುತ್ತೂರು ಅಂಬಿಕಾ ವಿದ್ಯಾಲಯದ ಪ್ರಾಂಶುಪಾಲರಾದ ಲೇಖಕ ರಾಕೇಶ್ ಕುಮಾರ್ ಕಮ್ಮಾಜೆ ಮತ್ತು ಎಸ್.ಡಿ.ಎಂ.ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಶೈಲೇಶ್ ಕುಮಾರ್ ನಡೆಸಿಕೊಡಲಿದ್ದಾರೆ. ಕಾರ್ಯಾಗಾರದಲ್ಲಿ ಜಿಲ್ಲೆಯ ವಿವಿಧ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಎಸ್.ಡಿ.ಎಂ. ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ ಹೆಗ್ಡೆ, ಬೆಳ್ತಂಗಡಿ ಸುದ್ದಿ ಬಿಡುಗಡೆ ಪತ್ರಿಕೆಯ ಸಿಇಓ ಸಿಂಚನಾ ಊರುಬೈಲು ಮತ್ತು ಸುದ್ದಿ ಬಿಡುಗಡೆ ಸಂಪಾದಕ ಸಂತೋಷ್ ಕುಮಾರ್ ಶಾಂತಿನಗರ ತಿಳಿಸಿದ್ದಾರೆ.