ಬೆಳ್ತಂಗಡಿ: ಮರಾಟಿ ನಾಯ್ಕ್ ಸಮುದಾಯದ ಜನರ ವೈವಾಹಿಕ ಜೀವನಕ್ಕೆ ಸೇತುವೆ ಕಲ್ಪಿಸುವ ನಿಟ್ಟಿನಲ್ಲಿ ನವೆಂಬರ್ ತಿಂಗಳ 24ನೇ ತಾರೀಖಿನಂದು ಗುರುವಾಯನಕೆರೆ ಹವ್ಯಕ ಭವನದಲ್ಲಿ ವಧುವರರ
ಸಮಾವೇಶ ನಡೆಸಲಿದ್ದು ಅದರ ಅರ್ಜಿ ನಮೂನೆ ಬಿಡುಗಡೆಗೊಳಿಸಿದ ಬೆಳ್ತಂಗಡಿ ತಾಲೂಕು ಮರಾಟಿ ಸಮಾಜ ಸೇವಾ ಸಂಘ ಇದರ ಅಧ್ಯಕ್ಷ ಸತೀಶ್ ಹೆಚ್.ಎಲ್. ಮಾತನಾಡಿ, ಯೋಗ್ಯ ಸಂಗಾತಿಯ ನಿರೀಕ್ಷೆಯಲ್ಲಿರುವವರಿಗೆ ಸಹಾಯವಾಗಲು ವಧುವರರ ಸಮಾವೇಶ ಆಯೋಜಿಸಿದ್ದು, ಪ್ರಪಂಚದ ಯಾವುದೇ ಮೂಲೆಯಲ್ಲಿ ವಾಸಿಸುತ್ತಿರುವ ಮರಾಟಿ ನಾಯ್ಕ್ ಸಮುದಾಯದ ವಧುವರರು ಸಂಘ
ಬಿಡುಗಡೆಗೊಳಿಸಿದ ಅರ್ಜಿ ನಮೂನೆಯಲ್ಲಿ ನವೆಂಬರ್ 17ರೊಳಗಾಗಿ ಸಂಘದ ವಿಳಾಸಕ್ಕೆ ತಲುಪಿಸಬೇಕೆಂದು ತಿಳಿಸಿದರು.
ಅವರು ಸೆಪ್ಟೆಂಬರ್ 29ರಂದು ಕಲ್ಲೇರಿಯಲ್ಲಿರುವ ಸಂಘದ ಪದಾಧಿಕಾರಿ ಶ್ರೀನಿವಾಸ ನಾಯ್ಕರವರ ಮನೆಯಲ್ಲಿ ನಡೆದ ತಾಲೂಕು ಮರಾಟಿ ಸಮಾಜ ಸೇವಾ ಸಂಘ ಬೆಳ್ತಂಗಡಿ ಇದರ ಸೆಪ್ಟೆಂಬರ್ ತಿಂಗಳ ಮಾಸಿಕ ಸಭೆಯಲ್ಲಿ ಮಾತನಾಡಿದರು. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಗಣೇಶ್ ಬಿ.ಎಲ್ ಮತ್ತು ಮಂಜುನಾಥ ನಾಯ್ಕರವರನ್ನು ಸನ್ಮಾನಿಸಲಾಗುವುದು.
ಬೆಳ್ತಂಗಡಿ ತಾಲೂಕು ವ್ಯಾಪ್ತಿಯಲ್ಲಿ ನಿವಾಸಿಗಳಾಗಿರುವ 2023-24ನೇ ಸಾಲಿನಲ್ಲಿ ಎಸ್‌ಎಸ್‌ಎಲ್ ಸಿ, ಪಿಯುಸಿ ಯಲ್ಲಿ ಶೇಕಡ 90ಕ್ಕಿಂತ ಅಧಿಕ ಅಂಕ ಪಡೆದ ಸ್ವಜಾತಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಅಂತಹ ಅರ್ಹ ವಿದ್ಯಾರ್ಥಿಗಳು ತಾವು ವಿದ್ಯಾಭ್ಯಾಸ ಪಡೆದಿರುವ ಶಾಲಾ/ಕಾಲೇಜಿನ ಮುಖ್ಯೋಪಾಧ್ಯಾಯರು /ಪ್ರಾಂಶುಪಾಲರಿಂದ ದೃಢೀಕರಿಸಿದ ಅಂಕಪಟ್ಟಿಯೊಂದಿಗೆ ಸಂಘದ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕೆಂದು ತಿಳಿಸಿದರು.
ಸಭೆಯಲ್ಲಿ ಸಂಘದ ಗೌರವಾಧ್ಯಕ್ಷ ಕೊರಗಪ್ಪ ನಾಯ್ಕ, ಪ್ರಧಾನ ಕಾರ್ಯದರ್ಶಿ ತಾರಾನಾಥ ನಾಯ್ಕ, ಪದಾಧಿಕಾರಿಗಳಾದ ಪ್ರಸಾದ್ ನಾಯ್ಕ, ಹರೀಶ್ ನಾಯ್ಕ ಪೇರಾಜೆ, ಸುರೇಶ್ ಹೆಚ್.ಎಲ್.. ಪವಿತ್ರಾ ಲೋಕೇಶ್, ಶ್ರೀನಿವಾಸ್ ನಾಯ್ಕ, ರಾಘವೇಂದ್ರ ನಾಯ್ಕ, ಬಾಸ್ಕರ ನಾಯ್ಕ, ರಜನೀಶ್ ನಾಯ್ಕ, ಗೌರವ ಸಲಹೆಗಾರ ಕುಮಾರಯ್ಯ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
ಶ್ರೀನಿವಾಸ ನಾಯ್ಕ ಸ್ವಾಗತಿಸಿ, ರಾಘವೇಂದ್ರ ನಾಯ್ಕ ವಂದಿಸಿದರು.