ಬೆಳ್ತಂಗಡಿ: ಚಾರಣಿಗರ ಸ್ವರ್ಗ ಗಡಾಯಿಕಲ್ಲು ಏರಲು ಹೇರಿದ್ದ ನಿಬಂಧವನ್ನು ಹಿಂಪಡೆಯಲಾಗಿದ್ದು ಇದೀಗ ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗಿದೆ. ಸಮುದ್ರ ಮಟ್ಟದಿಂದ ೧೭೮೮ ಅಡಿ ಎತ್ತರದಲ್ಲಿರುವ ಈ ಕೋಟೆಯ ತುದಿ ತಲುಪಬೇಕಾದರೆ ಸುಮಾರು ೨೮೦೦ಕ್ಕೂ ಅಧಿಕ ಕಡಿದಾದ ಮೆಟ್ಟಿಲುಗಳನ್ನು ಏರಬೇಕು. ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಗಡಾಯಿ ಕಲ್ಲನ್ನು ಸಂರಕ್ಷಿತ ಸ್ಮಾರಕ ಎಂದು ಘೋಷಿಸಿದೆ. ನಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಗಡಾಯಿಕಲ್ಲು ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಸುಪರ್ದಿಯಲ್ಲಿದೆ.
ಅನೇಕ ಪಳೆಯುಳಿಕೆ ಹೊಂದಿರುವ ಗಡಾಯಿ ಕಲ್ಲು ಮುಕ್ಕಾಲು ಭಾಗ ಏರಿದ ಬಳಿಕ ಕಮಾನು ಗೋಚರಿಸುತ್ತದೆ. ಶಿಥಿಲಾವಸ್ಥೆಯಲ್ಲಿರುವ ಅದರ ಅಕ್ಕಪಕ್ಕ ಕೆಲವೊಮ್ಮೆ ತ್ಯಾಜ್ಯವೂ ಕಂಡು ಬರುತ್ತದೆ. ಮುಂದೆ ಸಾಗಿದಾಗ ಫಿರಂಗಿ, ಬಂಡೆಗಳ ನಡುವಿನಿಂದ ಹರಿಯುವ ನೀರು ಭಾಗಶಃ ಧ್ವಂಸವಾಗಿರುವ ಶಸ್ತ್ರಾಸ್ತ್ರ ಕೊಠಡಿ, ಕೆರೆ ಇತ್ಯಾದಿ ಕಾಣಿಸುತ್ತದೆ.
ನಿಸರ್ಗ ಸೌಂದರ್ಯವನ್ನು ಆಸ್ವಾದಿಸುತ್ತ ಚಾರಣ ನಡೆಸುವ ಗಡಾಯಿಕಲ್ಲು ಹಲವಾರು ಎಕರೆ ಜಾಗವನ್ನು ಹೊಂದಿದ್ದು ಚಾರಣ ನಡೆಸಿ ಬರುವ ಪ್ರವಾಸಿಗರ ಮನಸ್ಸಿಗೆ ಮುದ ನೀಡುತ್ತಿದೆ.
ನಿಷೇಧ ಹೇರಲಾಗಿತ್ತು: ಕಳೆದ ಬೇಸಿಗೆಯಿಂದ ಗಡಾಯಿಕಲ್ಲು ಪ್ರವೇಶಕ್ಕೆ ಸಾರ್ವಜನಿಕರಿಗೆ ನಿಷೇಧ ಹೇರಲಾಗಿದ್ದು ಅದು ಸೆ. ೨೦ರವರೆಗೆ ಮುಂದುವರಿದಿತ್ತು ಗಡಾಯಿಕಲ್ಲು ಸುತ್ತಮುತ್ತ ಸಾಕಷ್ಟು ಅರಣ್ಯ ಪ್ರದೇಶವಿದ್ದು ಬೇಸಿಗೆ ಕಾಲದಲ್ಲಿ ಕಾಡ್ಗಿಚ್ಚಿನ ಭಯ ಇರುವುದರಿಂದ ಹಾಗೂ ಮಳೆಗಾಲದಲ್ಲಿ ಇಲ್ಲಿನ ಜಾರುವ ಬಂಡೆ, ಮೆಟ್ಟಿಲು, ಕಲ್ಲುಗಳಿಂದ ಅಪಾಯ ಉಂಟಾಗಬಾರದು ಎಂಬ ಉzಶದಿಂದ ಸಂಬಂಧಪಟ್ಟ ಇಲಾಖೆ ಪ್ರವೇಶಕ್ಕೆ ನಿಷೇಧ ಹೇರಿತ್ತು. ಇತ್ತೀಚೆಗೆ ಜಲಪಾತ ಪ್ರವೇಶಕ್ಕೆ ಅವಕಾಶ ನೀಡಿದ ಸಮಯವೂ ಮುಂಜಾಗ್ರತಾ ಕ್ರಮವಾಗಿ ಗಡಾಯಿಕಲ್ಲು ಪ್ರವೇಶ ನಿಷೇಧ ಮುಂದುವರಿದಿದತ್ತು. ಇದೀಗ ಮಳೆ ಕಡಿಮೆಯಾಗಿ ಬಂಡೆ ಒಣಗಿರುವ ಕಾರಣ ಅವಕಾಶ ಕಲ್ಪಿಸಲಾಗಿದೆ.
ಪ್ರಸ್ತುತ ನೀಡಿರುವ ಅವಕಾಶ ಡಿಸೆಂಬರ್ ತನಕ ಮುಂದುವರಿಯುವ ಸಾಧ್ಯತೆ ಇದೆ. ಡಿಸೆಂಬರ್ ಬಳಿಕ ಕಾಡ್ಗಿಚ್ಚಿನ ಮುಂಜಾಗ್ರತೆಗಾಗಿ ಮತ್ತೆ ನಿಷೇಧ ಮುಂದುವರಿಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಗಡಾಯಿಕಲ್ಲು ಇಲ್ಲಿದೆ: ಬೆಳ್ತಂಗಡಿ ತಾಲೂಕು ಕೇಂದ್ರದಿಂದ ಒಂದು ಕಿ.ಮೀ. ದೂರದಲ್ಲಿರುವ ಲಾಯಿಲ ಎಂಬಲ್ಲಿಂದ ಕಿಲ್ಲೂರು ಮಾರ್ಗದಲ್ಲಿ ೫ ಕಿ.ಮೀ. ಸಾಗಿದರೆ ಮಂಜೊಟ್ಟಿ ಎನ್ನುವ ಊರು ಸಿಗುತ್ತದೆ. ಅಲ್ಲಿಂದ ಮೂರು ಕಿ.ಮೀ. ಹಾದಿ ಕ್ರಮಿಸಿದರೆ ಗಡಾಯಿಕಲ್ಲಿನ ಬುಡಕ್ಕೆ ತಲುಪಬಹುದು. ಮಂಜೊಟ್ಟಿ ತನಕ ಬಸ್ ವ್ಯವಸ್ಥೆ ಇದೆ. ಸ್ವಂತ ವಾಹನಗಳಿಗೆ ಕೋಟೆಯ ಸಮೀಪ ಪಾರ್ಕಿಂಗ್ ವ್ಯವಸ್ಥೆ ಇದೆ. ಗೂಗಲ್ ಮ್ಯಾಪ್‌ನಲ್ಲಿ ದಾರಿಯ ಹೆಚ್ಚಿನ ವಿವರಗಳು ಲಭ್ಯವಿದೆ. ಗಡಾಯಿಕಲ್ಲಿಗೆ ಜಮಲಾಬಾದ್ ನರಸಿಂಹ ಘಡ ಎಂಬ ಹೆಸರೂ ಇದೆ. ದೊಡ್ಡವರಿಗೆ ೫೦ರೂ. ಮತ್ತು ಮಕ್ಕಳಿಗೆ ೨೫ ರೂ. ಟಿಕೆಟ್ ದರ ಇದೆ. ಪರಿಸರದ ಅರಣ್ಯದಲ್ಲಿರುವ ಪ್ರಾಣಿಗಳಿಗೆ ತೊಂದರೆ ಉಂಟು ಮಾಡುವಂತಹ ಪ್ರಕ್ರಿಯೆ ನಡೆಸಬಾರದು,ಪರಿಸರ ಸ್ವಚ್ಛತೆ ಕಾಪಾಡಲು ಚಾರಣಿಗರು ಆದ್ಯತೆ ನೀಡಬೇಕು, ಇಲಾಖೆ ವಿಧಿಸಿದ ಶರತ್ತುಗಳನ್ನು ಮೀರಿ ವರ್ತಿಸಬಾರದು, ಅನಪೇಕ್ಷಿತ ಚಟುವಟಿಕೆ ನಡೆಸುವುದು ಕಂಡು ಬಂದಲ್ಲಿ ಅಂತವರ ವಿರುದ್ಧ ಇಲಾಖೆ ವತಿಯಿಂದ ಕಠಿಣ ಕ್ರಮ ಕೈಗೊಳ್ಳಲಾಗುವುದು, ಸಂಪೂರ್ಣ ಪ್ಲಾಸ್ಟಿಕ್ ನಿಷೇಧಿತ ಪ್ರದೇಶ ಎಂದು ಇಲ್ಲಿ ಸೂಚಿಸಲಾಗಿದೆ.