Site icon Suddi Belthangady

ಅಧ್ಯಕ್ಷರೂ ಇಲ್ಲ.. ಪಂಚಾಯತ್ ಅಭಿವೃದ್ಧಿ ಅಧಿಕಾರಿಯೂ ಇಲ್ಲ..ಗ್ರಾಮಸ್ಥರ ತಾಳ್ಮೆ ಪರೀಕ್ಷಿಸುತ್ತಿದೆ ಕಣಿಯೂರು ಗ್ರಾ.ಪಂ.

ಪದ್ಮುಂಜ: ಖಾಯಂ ಅಧ್ಯಕ್ಷರೂ ಇಲ್ಲದೆ ಖಾಯಂ ಪಂಚಾಯತ್ ಅಭಿವೃದ್ಧಿ ಅಧಿಕಾರಿಯೂ ಇಲ್ಲದೆ ಕಣಿಯೂರು ಗ್ರಾಮ ಪಂಚಾಯತ್‌ನ ಆಡಳಿತ ವ್ಯವಸ್ಥೆ ಗ್ರಾಮಸ್ಥರ ತಾಳ್ಮೆಯನ್ನು ಪರೀಕ್ಷಿಸುವಂತಿದೆ. ಕಣಿಯೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿದ್ದ ಪೂರ್ಣಿಮಾರವರು ಏಕಾಏಕಿಯಾಗಿ ವರ್ಗಾವಣೆಗೊಂಡು ತೆರಳಿ ಹತ್ತು ತಿಂಗಳು ಕಳೆದರೂ ಇದುವರೆಗೆ ಇಲ್ಲಿಗೆ ಖಾಯಂ ಪಿಡಿಓ ನೇಮಕ ಆಗಿಲ್ಲ. ಬದಲು ಕಳಿಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂತೋಷ್ ಪಾಟೇಲ್ ಹೆಚ್ಚುವರಿಯಾಗಿ ಕಣಿಯೂರು ಗ್ರಾಮ ಪಂಚಾಯತ್ ಪಿಡಿಓ ಆಗಿ ಪ್ರಭಾರ ನೆಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಅವರು ವಾರದಲ್ಲಿ ಒಂದೆರಡು ದಿನ ಬರುತ್ತಿದ್ದರು. ಬಳಿಕ ಎರಡು ಪಂಚಾಯತ್‌ಗಳಲ್ಲಿ ಕಾರ್ಯ ನಿರ್ವಹಿಸಲು ಕಷ್ಟವಾಗುತ್ತದೆ ಎಂದು ಅವರು ಇಲ್ಲಿಂದ ನಿರ್ಗಮಿಸಿದ್ದರು. ಅವರಿಂದ ತೆರವಾದ ಸ್ಥಾನಕ್ಕೆ ಮತ್ತೆ ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ನೇಮಕವಾಗಿತ್ತು. ೧೫ ದಿನಗಳ ಹಿಂದೆ ಕಲ್ಮಂಜ ಗ್ರಾಮ ಪಂಚಾಯತ್ ಪಿಡಿಓ ಗೀತಾರವರನ್ನು ಇಲ್ಲಿಗೆ ನೇಮಕ ಮಾಡಲಾಗಿತ್ತು. ಇದೀಗ ಮತ್ತೆ ಅವರ ನೇಮಕವನ್ನು ರದ್ದು ಮಾಡಿ ಆದೇಶ ನೀಡಲಾಗಿದ್ದು ಪುನಃ ಕಳಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂತೋಷ್ ಪಾಟೇಲ್‌ರವರನ್ನು ಪ್ರಭಾರವಾಗಿ ನೇಮಕ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಓರ್ವ ಅಧಿಕಾರಿಯನ್ನು ಬದಲಾಯಿಸಿ ಮತ್ತೊಬ್ಬ ಅಧಿಕಾರಿಯನ್ನು ತಾತ್ಕಾಲಿಕ ನೇಮಕ ಮಾಡಿದರೆ ತಾಂತ್ರಿಕವಾಗಿ ಬಹಳಷ್ಟು ತೊಂದರೆಯಾಗುತ್ತದೆ. ಅಧಿಕಾರಿಯ ಬೆರಳಚ್ಚು ವರ್ಗಾವಣೆಯಾಗಿ ಬರಬೇಕಾದರೆ ಹದಿನೈದು ದಿನಗಳಿಂದ ಒಂದು ತಿಂಗಳವರೆಗೆ ಸಮಯ ಬೇಕಾಗುತ್ತದೆ. ಅದುವರೆಗೂ ಜನರ ಯಾವುದೇ ಕೆಲಸಗಳು ನಡೆಯುವುದಿಲ್ಲ. ಒಂದು ತಿಂಗಳೊಳಗೆ ಮತ್ತೊಮ್ಮೆ ಅಧಿಕಾರಿ ವರ್ಗಾವಣೆಯಾದರೆ ಬೆರಳಚ್ಚು ವರ್ಗಾವಣೆಯಾಗಿ ಬರಲು ಮತ್ತೊಂದು ತಿಂಗಳು ಕಾಯಬೇಕು. ಹೀಗಾಗಿ ಜನರು ಅಗತ್ಯ ಕೆಲಸಗಳಿಗಾಗಿ ಅಲೆದಾಡುವಂತಾಗಿದೆ. ಮಾತ್ರವಲ್ಲದೆ ವಾರ್ಡ್‌ಸಭೆ, ಗ್ರಾಮಸಭೆ ನಡೆಯದೆ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚೆ ನಡೆಯದಂತಾಗಿದೆ. ಇದೆಲ್ಲದರ ಮಧ್ಯೆ ಪಂಚಾಯತ್‌ನ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ತೊಂದರೆಯಾಗುತ್ತಿರುವುದರಿಂದ ಜನರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕಾಗಿ ಗ್ರಾಮ ಪಂಚಾಯತ್ ಅಧ್ಯಕ್ಷ ಯಶವಂತರವರು ಕೆಲವು ದಿನಗಳ ಹಿಂದೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಹಾಗಾಗಿ ಪ್ರಭಾರ ನೆಲೆಯಲ್ಲಿ ಉಪಾಧ್ಯಕ್ಷೆ ಜಾನಕಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಖಾಯಂ ಅಧ್ಯಕ್ಷರೂ ಇಲ್ಲದೆ ಖಾಯಂ ಪಿಡಿಓ ಕೂಡ ಇಲ್ಲದೆ ಕಣಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಜನರಿಗೆ ತೊಂದರೆಯಾಗುತ್ತಿದೆ. ಸಂಬಂಧಪಟ್ಟವರು ಇತ್ತ ಚಿತ್ತ ಹರಿಸಿ ಸಮಸ್ಯೆ ಪರಿಹರಿಸಬೇಕು ಎಂದು ಗ್ರಾಮಸ್ಥರು ಆಗ್ರಹ ವ್ಯಕ್ತವಾಗಿದೆ.

Exit mobile version