Site icon Suddi Belthangady

ಸಿಯೋನ್ ಆಶ್ರಮ: ಮಾನಸಿಕ ಅಸ್ವಸ್ಥತೆಯಿಂದ ಚೇತರಿಸಿಕೊಂಡು ಮನೆ ಸೇರಿದ ಸಂದೀಪ್ ಪರಹೈ

ನೆರಿಯ: ಪುತ್ತೂರು ನಗರದಲ್ಲಿ ಮಾನಸಿಕ ಅಸ್ವಸ್ಥತೆಯಿಂದ ಬೀದಿಯಲ್ಲಿ ತಿರುಗಾಡುತ್ತಾ, ಸಾರ್ವಜನಿಕರಿಗೆ ತೊಂದರೆಯನ್ನು ಕೊಡುತ್ತಿದ್ದ ಸುಮಾರು 26ವರ್ಷ ಪ್ರಾಯದ ಸಂದೀಪ್ ಪರಹೈ ಎಂಬಾತನನ್ನು ಪುತ್ತೂರು ನಗರ ಠಾಣಾ ವ್ಯಾಪ್ತಿಯ ಎಎಸ್ಐ ಪುಟ್ಟಸ್ವಾಮಪ್ಪ ಮತ್ತು ಪೋಲಿಸ್ ನಾಗೇಂದ್ರರವರು ಚಿಕಿತ್ಸೆಯ ನಿಮಿತ್ತ ಸಿಯೋನ್ ಮಾನಸಿಕ ಆರೋಗ್ಯ ಮತ್ತು ಪುನರ್ವಸತಿ ಕೇಂದ್ರಕ್ಕೆ ಜು.15ರಂದು ಕರೆತಂದು ದಾಖಲು ಮಾಡಿಕೊಳ್ಳಲಾಯಿತು.

ಆಶ್ರಮಕ್ಕೆ ದಾಖಲಾಗುವಾಗ ಅವರ ಮಾನಸಿಕ ಸ್ಥಿತಿಯು ತುಂಬಾ ಹದಗೆಟ್ಟಿತ್ತು, ದೈಹಿಕವಾಗಿಯೂ ಕ್ಷೀಣಿಸಿದ್ದರು. ಸದ್ರಿ ವ್ಯಕ್ತಿಗೆ ಅವರ ಯಾವುದೇ ಮಾಹಿತಿಯ ಅರಿವಿರಲಿಲ್ಲ. ಸಿಯೋನ್ ಆಶ್ರಮದಲ್ಲಿ ಅವರಿಗೆ ಸೂಕ್ತ ಚಿಕಿತ್ಸೆ ಮತ್ತು ನಿರಂತರ ಸಮಾಲೋಚನೆಯನ್ನು ನೀಡಲಾಯಿತು. ಸಿಯೋನ್ ಆಶ್ರಮದಲ್ಲಿ ನಡೆಯುವ ಎಲ್ಲಾ ಚಟುವಟಿಕೆಯಲ್ಲಿ ಹಾಗೂ ಮನರಂಜನಾ ಕಾರ್ಯಕ್ರಮದಲ್ಲಿ ತೊಡಗಿಸಿ, ಅವರು ದೈಹಿಕವಾಗಿಯೂ, ಮಾನಸಿಕವಾಗಿಯೂ ಶೀಘ್ರದಲ್ಲಿ ಚೇತರಿಸಿಕೊಂಡರು.

ಸಿಯೋನ್ ಆಶ್ರಮದಲ್ಲಿ ಮನೋವೈದ್ಯರ ಸೂಕ್ತ ಚಿಕಿತ್ಸೆ ಮತ್ತು ನಿರಂತರ ಸಮಾಲೋಚನೆಯ ಫಲವಾಗಿ ಅವರ ಊರು ಜಾರ್ಖಂಡ್ ರಾಜ್ಯದ ಲತೇಹಾರ್ ಜಿಲ್ಲೆಯ ಚಿಪಡೋಹರ್ ಮತ್ತು ತಂದೆ ನನಕು ಪರಹೈ ಹಾಗೂ ಅವರ ದೂರವಾಣಿ ಸಂಖ್ಯೆ ತಿಳಿಸಿದ್ದು, ಆ ಪ್ರಕಾರ ಸಂದೀಪ್ ರವರ ತಂದೆಯಾದ ನನಕು ಪರಹೈರವರಿಗೆ ಸಿಯೋನ್ ಆಶ್ರಮದ ಮನೋವೈದ್ಯರಾದ ಡಾ.ಅನಿಲ್ ಕಾಕುಂಜೆಯವರು ದೂರವಾಣಿ ಮೂಲಕ ಸಂಪರ್ಕಿಸಿ, ಅವರ ಮಾನಸಿಕ ರೋಗದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಮಗನನ್ನು ಕಳೆದುಕೊಂಡು ದುಃಖದಲ್ಲಿದ್ದ ಕುಟುಂಬಕ್ಕೆ ಮರುಭೂಮಿಯಲ್ಲಿ ಓಯಸಿಸ್ ಸಿಕ್ಕಷ್ಟು ಸಂತೋಷವಾಯಿತು. ತಕ್ಷಣವೇ ಸಿಯೋನ್ ಆಶ್ರಮಕ್ಕೆ ಭೇಟಿ ನೀಡುವುದಾಗಿ ತಿಳಿಸಿದರು.

ಸೆ.26ರಂದು ಸಿಯೋನ್ ಆಶ್ರಮಕ್ಕೆ ಭೇಟಿ ನೀಡಿ ತಮ್ಮ ಮಗನಾದ ಸಂದೀಪ್ ಇಲ್ಲಿ ಸುರಕ್ಷಿತ ಹಾಗೂ ಖುಷಿಯಾಗಿರುವುದನ್ನು ಕಂಡು ಭಾವುಕರಾದರು. ಸಂದೀಪ್ ನ ಮುಂದಿನ ಚಿಕಿತ್ಸಾ ಕ್ರಮಗಳ ಬಗ್ಗೆ ಇವನ ಮನೆಯವರಿಗೆ ಮಾಹಿತಿಯನ್ನು ನೀಡಿ, ಈತನನ್ನು ಸಿಯೋನ್ ಆಶ್ರಮದ ಮ್ಯಾನೇಜಿಂಗ್ ಟ್ರಸ್ಟೀ ಡಾ.ಯು.ಸಿ.ಪೌಲೋಸ್, ಟ್ರಸ್ಟೀ ಸದಸ್ಯೆ ಮೇರಿ ಯು.ಪಿ.ಯವರು, ಸಂಸ್ಥೆಯ ಆಡಳಿತ ಮಂಡಳಿಯವರು, ಆಶ್ರಮದ ಸಿಬ್ಬಂದಿವರ್ಗದವರು, ಆಶ್ರಮದ ನಿವಾಸಿಗಳು ಇವರಿಗೆ ಶುಭ ಹಾರೈಸಿ, ತಮ್ಮ ಮನೆಗೆ ಸಂತೋಷದಿಂದ ಕಳುಹಿಸಿಕೊಟ್ಟರು. ಹಾಗೆಯೇ ತನ್ನ ಕುಟುಂಬವನ್ನು ಹಲವು ವರ್ಷಗಳ ನಂತರ ಕಂಡ ಸಂದೀಪ್ ಹರ್ಷಗೊಂಡು ಕುಟುಂಬದವರೊಂದಿಗೆ ತುಂಬಾ ಸಂತೋ ಷದಿಂದ ಮನೆಗೆ ತೆರಳಿದರು.

Exit mobile version