ಬೆಳ್ತಂಗಡಿ: ಯಕ್ಷಗಾನದ ಖ್ಯಾತ ಭಾಗವತರಾಗಿರುವ ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿಯ ಹೊಸ್ತೋಟ ನಿವಾಸಿ ದಿನೇಶ್ ಅಮ್ಮಣ್ಣಾಯರವರಿಗೆ ಯಕ್ಷಗಾನ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರಕಟವಾಗಿದೆ. ಯಕ್ಷಗಾನ ರಂಗದಲ್ಲಿ ವಿಶೇಷ ಸಾಧನೆ ಮಾಡಿದ ಐವರು ಕಲಾವಿದರಿಗೆ ೨೦೨೩ನೇ ಸಾಲಿನ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ನೀಡಲಾಗುತ್ತಿದ್ದು ಇದರಲ್ಲಿ ದಿನೇಶ್ ಅಮ್ಮಣ್ಣಾಯ ಅವರು ಒಳಗೊಂಡಿದ್ದಾರೆ. ಪ್ರಶಸ್ತಿ ೫೦ ಸಾವಿರ ರೂ.ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ. ನವೆಂಬರ್ ೨ನೇ ವಾರದಲ್ಲಿ ಮಂಗಳೂರು ಪುರಭವನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ತೆಂಕುತಿಟ್ಟಿನ ಅಗ್ರಮಾನ್ಯ ಭಾಗವತರಲ್ಲಿ ಒಬ್ಬರಾಗಿರುವ ಮತ್ತು ತಮ್ಮ ವಿಶಿಷ್ಟ ಕಂಠ ಸಿರಿಯ ಮೂಲಕ ಯಕ್ಷಾಭಿಮಾನಿಗಳಿಂದ ರಾಗನಿಧಿ ಎಂಬ ನೆಗಳ್ತೆಗೆ ಪಾತ್ರರಾಗಿರುವ ದಿನೇಶ್ ಅಮ್ಮಣ್ಣಾಯ ಅವರು ನಾರಾಯಣ ಅಮ್ಮಣ್ಣಾಯ-ಕಾವೇರಿಯಮ್ಮ ದಂಪತಿಯ ಪುತ್ರರಾಗಿ ೧೯೫೯ರ ಸೆ.೧೧ರಂದು ಜನಿಸಿದರು. ದಿನೇಶ್ ಅಮ್ಮಣ್ಣಾಯರಿಗೆ ಬಾಲ್ಯದಲ್ಲಿಯೇ ಕಲೆಯ ನಂಟು ಅವರ ಮನೆ ವಾತಾವರಣದಿಂದಲೇ ಸಿಕ್ಕಿತ್ತು. ಪ್ರಾರಂಭದಲ್ಲಿ ಮದ್ದಳೆಗಾರರಾಗಿ ಗುರುತಿಸಿಕೊಂಡು ಹಿಮ್ಮೇಳವನ್ನಲಂಕರಿಸಿದ ಅಮ್ಮಣ್ಣಾಯರು ಬಳಿಕ ತಮ್ಮ ದೊಡ್ಡಪ್ಪನವರ ಒತ್ತಾಸೆಯಂತೆ ಭಾಗವತಿಕೆಯತ್ತ ಒಲವು ಬೆಳೆಸಿಕೊಂಡರು. ಭಾಗವತರಾಗಿ ದಿ. ಶ್ರೀಧರ ಭಂಡಾರಿಯವರ ಪುತ್ತೂರು ಮೇಳದ ಮೂಲಕ ರಂಗವನ್ನೇರಿದ ಇವರ ಭಾಗವತಿಕೆಯ ಜೈತ್ರಯಾತ್ರೆ ನಿರಂತರ ನಾಲ್ಕೂವರೆ ದಶಕಗಳ ಕಾಲ ಮುಂದುವರೆಯಿತು. ದಾಮೋದರ ಮಂಡೆಚ್ಚರ ಶಿಷ್ಯನೆಂದೇ ಯಕ್ಷ ವಲಯದಲ್ಲಿ ಗುರುತಿಸಲ್ಪಟ್ಟಿರುವ ದಿನೇಶ್ ಅಮ್ಮಣ್ಣಾಯರು ಒಂದು ರೀತಿಯಲ್ಲಿ ಯಕ್ಷರಂಗದ ಸವ್ಯಸಾಚಿಯೆಂದರೆ ತಪ್ಪಾಗಲಾರದು. ಪುತ್ತೂರು, ಕರ್ನಾಟಕ, ಕದ್ರಿ, ಕುಂಟಾರು ಹಾಗೂ ಎಡನೀರು ಮೇಳಗಳಲ್ಲಿ ಕಲಾಸೇವೆ ಮಾಡಿರುವ ಅಮ್ಮಣ್ಣಾಯರು ಕರ್ನಾಟಕ ಮೇಳವೊಂದರಲ್ಲೇ ಸುದೀರ್ಘ ಕಲಾಪಯಣ ನಡೆಸಿರುವ ಹೆಗ್ಗಳಿಕೆ ಹೊಂದಿದ್ದಾರೆ. ತಂದೆ ಮೃದಂಗ ವಾದಕ, ಚಿಕ್ಕಪ್ಪ ಅರ್ಥಧಾರಿ, ಅಕ್ಕ ಸಂಗೀತ ವಿದುಷಿ. ಇವರು, ತುಳು ಪ್ರಸಂಗಗಳಲ್ಲೂ ಹಾಡುಗಾರಿಕೆ ನಡೆಸಿ ಜನಮನ ರಂಜಿಸಿದ್ದಾರೆ. ಸುಮಧುರ ಕಂಠದ ಭಾಗವತಿಕೆಯಿಂದ ಅಭಿಮಾನಿಗಳ ಪ್ರೀತಿಗೆ ಭಾಜನರಾಗಿದ್ದಾರೆ. ಇದೀಗ ವೃತ್ತಿಪರ ತಿರುಗಾಟದಿಂದ ನಿವೃತ್ತಿ ಪಡೆದುಕೊಂಡಿರುವ ದಿನೇಶ್ ಅಮ್ಮಣ್ಣಾಯರು ಹವ್ಯಾಸಿ ಭಾಗವತರಾಗಿ ವಿವಿಧ ಕಡೆಗಳಲ್ಲಿ ಯಕ್ಷಪ್ರಿಯರಿಗೆ ತಮ್ಮ ಗಾನರಸಾಮೃತವನ್ನು ಉಣಬಡಿಸುತ್ತಿದ್ದಾರೆ. ಬೆಳ್ತಂಗಡಿ ತಾಲೂಕಿನ ಹೊಸ್ತೋಟದಲ್ಲಿ ನೆಲೆಸಿರುವ ದಿನೇಶ್ ಅಮ್ಮಣ್ಣಾಯರು ಪತ್ನಿ ಸುಧಾ ಅಮ್ಮಣ್ಣಾಯ ಮತ್ತು ಇಬ್ಬರು ಪುತ್ರಿಯರೊಂದಿಗೆ ಸಂತೃಪ್ತ ಜೀವನ ನಡೆಸುತ್ತಿದ್ದಾರೆ.