ಧರ್ಮಸ್ಥಳ: ಸುಭಾಷ್ ಯಾದವ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ನಮ್ಮ ತೋಟ ನಮ್ಮ ತರಕಾರಿ ಯೋಜನೆಯಡಿಯಲ್ಲಿ ಸಂಘದ ರೈತ ಸದಸ್ಯರಿಗೆ ಉಚಿತ ತರಕಾರಿ ಬೀಜ ವಿತರಣಾ ಕಾರ್ಯಕ್ರಮ ಸೆ. 21ರಂದು ಸಂಘದ ಅಟಲ್‌ಜೀ ಸಭಾಭವನದಲ್ಲಿ ನಡೆಯಿತು.
ಶಾಸಕ ಹರೀಶ್ ಪೂಂಜ ತರಕಾರಿ ಬೀಜ ವಿತರಿಸಿ ಮಾತನಾಡಿ “ನಮ್ಮ ತೋಟ ನಮ್ಮ ತರಕಾರಿ” ಎಂಬ ಹೊಸ ಪರಿಕಲ್ಪನೆಯೊಂದಿಗೆ ನಮ್ಮ ರೈತ ಸದಸ್ಯರ ಆರೋಗ್ಯದ ಕಡೆ ಒಂದು ಹೆಜ್ಜೆಯಾಗಿದ್ದು ಧರ್ಮಸ್ಥಳ ಸಹಕಾರ ಸಂಘ ರಾಜ್ಯದಲ್ಲಿಯೇ ಪ್ರಥಮವಾಗಿ ಈ ಕಾರ್ಯಕ್ರಮ ಮಾಡಿದೆ ಇತ್ತೀಚಿನ ದಿನಗಳಲ್ಲಿ ನಮ್ಮ ಜಿಲ್ಲೆಯಲ್ಲಿ ಅತೀ ಹೆಚ್ಚಿನ ಜನರಲ್ಲಿ ಕ್ಯಾನ್ಸರ್ ಎಂಬ ಮಾರಕ ರೋಗ ಪತ್ತೆಯಾಗುತ್ತಿದೆ ಇದಕ್ಕೆ ಕಾರಣ ಹುಡುಕಿದಾಗ ನಾವು ದಿನನಿತ್ಯ ತಿನ್ನುವ ವಿಷಕಾರಿ ಅಂಶದಿಂದ ಕೂಡಿದ ತರಕಾರಿಯ ಸೇವನೆ ಇದರಿಂದ ಸಣ್ಣ ಸಣ್ಣ ಮಕ್ಕಳು ಕೂಡ ಈ ಕ್ಯಾನ್ಸರ್ ಎಂಬ ಮಾರಿಗೆ ಬಲಿಯಾಗುತ್ತಿದ್ದಾರೆ. ಹೀಗಾಗಿ ನಮ್ಮ ಸಂಘದ ರೈತ ಸದಸ್ಯರು ತಮ್ಮ ಮನೆಯಲ್ಲೇ ತರಕಾರಿ ಬೆಳೆದು ಅದನ್ನೇ ಸೇವಿಸಬೇಕೆಂಬ ಧೈಯದೊಂದಿಗೆ ನಮ್ಮ ಸದಸ್ಯರರು ತಮ್ಮ ಮನೆಯಲ್ಲೇ ತರಕಾರಿ ಬೆಳೆದು ಅದನ್ನೆ ಉಪಯೋಗಿಸಬೇಕಾಗಿ ಈ ಯೋಜನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪ್ರೀತಮ್ ಡಿ. ವಹಿಸಿದ್ದರು. ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ರೂಪೇಶ್ ಮಲ್ಲರ್ ಮಾಡಿ ಮಾಹಿತಿ ನೀಡಿದರು. ಸಂಘದ ಉಪಾಧ್ಯಕ್ಷ ಅಜಿತ್ ಕುಮಾರ್ ಜೈನ್, ನಿರ್ದೇಶಕರುಗಳಾದ ಉಮಾನಾಥ್, ಶೀನ ಧನಲಕ್ಷ್ಮೀ ಜನಾರ್ದನ, ಪ್ರಸನ್ನ, ಚಂದ್ರಶೇಖರ್, ವಿಕ್ರಮ್ ಗೌಡ, ತಂಗಚ್ಚನ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಶಿಧರ್ ಉಪಸ್ಥಿತರಿದ್ದರು.
ನಿರ್ದೇಶಕ ನೀಲಕಂಠ ಶೆಟ್ಟಿ ಸ್ವಾಗತಿಸಿ ನಿರ್ದೇಶಕಿ ಶಾಂಭವಿ ರೈ ವಂದಿಸಿದರು. ಎ.ಎಸ್.ಲೋಕೇಶ್ ಶೆಟ್ಟಿ ನಿರೂಪಿಸಿದರು. ಸಿಬ್ಬಂದಿಗಳು ಸಹಕರಿಸಿದರು. ಸುಮಾರು 500 ಮಂದಿ ಸದಸ್ಯರಿಗೆ ತರಕಾರಿ ಬೀಜ ವಿತರಿಸಲಾಯಿತು.