ಕುವೆಟ್ಟು: ಬೆಳ್ತಂಗಡಿ ತಾಲೂಕಿನ ಹಲವೆಡೆ ಹುಚ್ವುನಾಯಿಗಳ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆ, ಮುಂಜಾಗ್ರತ ಕ್ರಮವಾಗಿ ಕುವೆಟ್ಟು ಗ್ರಾಮದಲ್ಲಿ ಉಚಿತ ಹುಚ್ಚುನಾಯಿ ರೋಗ ನಿರೋಧಕ ಲಸಿಕೆಯನ್ನು ನಾಯಿಗಳಿಗೆ ಚುಚ್ಚಲಾಯಿತು. ಬೆಳ್ತಂಗಡಿಯ ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಹಾಗೂ ಲಯನ್ಸ್ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ಕುವೆಟ್ಟು ಗ್ರಾಮ ಪಂಚಾಯತ್ ಹುಚ್ಚು ನಾಯಿ ರೋಗ ನಿರೋಧಕ ಲಸಿಕಾ ಶಿಬಿರವನ್ನು ಸೆ.20ರಂದು ಆಯೋಜಿಸಲಾಗಿತ್ತು.
ಕುವೆಟ್ಟು ಗ್ರಾಮ ಪಂಚಾಯತ್ ವಠಾರದಲ್ಲಿ ಪಶು ಸಂಗೋಪನಾ ಇಲಾಖೆಯ ಪಶು ವೈದ್ಯರಾದ ಡಾ. ರವಿ ಗ್ರಾಮದ ನಾಯಿಗಳಿಗೆ ಲಸಿಕೆ ನೀಡುವ ಮೂಲಕ, ಶಿಬಿರದ ಉದ್ಘಾಟನೆ ಮಾಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂ ಅಧ್ಯಕ್ಷೆ ಭಾರತಿ ಶೆಟ್ಟಿ, ಉಪಾಧ್ಯಕ್ಷ ಗಣೇಶ್ ಕೆ., ಪಿಡಿಒ ಇಮ್ತಿಯಾಝ್, ಲಯನ್ಸ್ ಕ್ಲಬ್ ಅಧ್ಯಕ್ಷ ದೇವಿದಾಸ್ ಶೆಟ್ಟಿ ಸೇರಿದಂತೆ ಪಂಚಾಯತ್ ಸಿಬ್ಬಂದಿಗಳು, ಲಯನ್ಸ್ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.
ಎರಡು ತಂಡಗಳಲ್ಲಿ ನಡೆದ ಹುಚ್ಚು ನಾಯಿ ರೋಗ ನಿರೋಧಕ ಲಸಿಕಾ ಶಿಬಿರದಲ್ಲಿ, ಕುವೆಟ್ಟಿನ ಹವ್ಯಕ ಭವನ, ಶಕ್ತಿನಗರ ಅಂಗನವಾಡಿ, ಬಂಡಿಮಠ ಮೈದಾನ, ವರಕಬೆ ನಾಣ್ಯಪ್ಪರವರ ಅಂಗಡಿ, ಪಣೆಜಾಲು ಶ್ರೀ ಸ್ಟಾರ್ ಯುವಕ ಮಂಡಲ, ಮೈರಾಳಿಕೆ ಹಾಲಿನ ಡೈರಿ, ಓಡಿಲ್ನಾಳ ಶಾಲೆ, ಸೇರಿದಂತೆ ಹಲವೆಡೆ ನಾಯಿಗಳಿಗೆ ಲಸಿಕೆಯನ್ನು ಹಾಕಲಾಯಿತು.