Site icon Suddi Belthangady

ಬೆಳಾಲು: ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ತೆನೆಹಬ್ಬ

ಬೆಳಾಲು: ಇಲ್ಲಿಯ ಅನಂತೋಡಿ ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಸೆ.17ರಂದು ಅನಂತ ಚತುರ್ದಶಿ (ನೋಂಪು)ಪ್ರಯುಕ್ತ ವಿಶೇಷ ಪೂಜೆ, ತೆನೆಹಬ್ಬ, ರಾತ್ರಿ ರಂಗಪೂಜೆ, ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಉಜಿರೆ ಲಕ್ಷ್ಮೀ ಇಂಡಸ್ಟ್ರಿ ಕನಸಿನ ಮನೆ ಕೆ.ಮೋಹನ್ ಕುಮಾರ್ ಇವರು ಆಗಮಿಸಿ ಮಾತನಾಡಿ ಅ.20ರಂದು ಅನಂತೋಡಿ ದೇವಸ್ಥಾನದ ಸಮೀಪ ಇರುವ ಧರ್ಮಸ್ಥಳದ ಗದ್ದೆಯಲ್ಲಿ ಭತ್ತದ ನಾಟಿ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಇದರಿಂದ ಮುಂದಿನ ಜನಾಂಗಕ್ಕೆ ಭತ್ತ, ನಾವು ಊಟ ಮಾಡುವ ಅಕ್ಕಿಯ ಉತ್ಪನ್ನದ ಕುರಿತು ಅರಿವು ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ದೇವಸ್ಥಾನದ ವತಿಯಿಂದ ಇವರನ್ನು ಗೌರವಿಸಲಾಯಿತು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ನೋಟರಿ ವಕೀಲ ಶ್ರೀನಿವಾಸ ಗೌಡ,ಆಡಳಿತ ಮೊತ್ತೇಸರ ಜೀವಂದರ ಕುಮಾರ್ ಜೈನ್ ಬೆಳಾಲು ಗುತ್ತು,ಅಸ್ರಣ್ಣ ಗಿರೀಶ್ ಬಾರಿತ್ತಾಯ, ವ್ಯವಸ್ಥಾಪನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ದುರ್ಗಾ ಪ್ರಸಾದ್ ಕೆರ್ಮುಣ್ಣಾಯ, ಉಪಾಧ್ಯಕ್ಷೆ ಮಮತಾ ದಿನೇಶ್ ಪೂಜಾರಿ, ಕಾರ್ಯದರ್ಶಿ ಸತೀಶ್ ಎಳ್ಳುಗದ್ದೆ, ಶ್ರೀ ಅನಂತೇಶ್ವರ ಭಜನಾ ಮಂಡಳಿ, ಶ್ರೀ ಅನಂತ ಪದ್ಮನಾಭ ಮಹಿಳಾ ಸೇವಾ ಸಮಿತಿ ಪದಾಧಿಕಾರಿಗಳು, ಹದಿನಾಲ್ಕು ಬೈಲುವಾರು ಸಮಿತಿಯ ಪ್ರದಾನ ಸಂಚಾಲಕರು, ಸಂಚಾಲಕರು, ಅರ್ಚಕ ವೃಂದ, ಸಿಬ್ಬಂದಿ ವರ್ಗ ಹಾಗೂ ವಲಯದವರು ಸೇರಿದಂತೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ ಗೌಡ ಕಾರ್ಯಕ್ರಮ ನಿರೂಪಿಸಿದರು.

ಬೆಳಿಗ್ಗೆ ಶ್ರೀ ದೇವರಿಗೆ ಪಂಚಾಮೃತ ಅಭಿಷೇಕ, ಪವಮಾನ ಕಲತಾಭಿಷೇಕ ಕಲ್ಲೋಕ್ತ ಪೂಜೆ, ತೆನೆ ತಂದು ಪೂಜೆ, ಬಲಿವಾಡು ಸೇವೆ, ಮಹಾ ಪೂಜೆ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಕನಸಿನ ಮನೆ ಕೆ.ಮೋಹನ್ ಕುಮಾರ್ ರವರು ಅನ್ನದಾನದ ಪ್ರಾಯೋಜಕತ್ವ ವಹಿಸಿದ್ದರು.

ರಾತ್ರಿ ದೇವರಿಗೆ ರಂಗಪೂಜೆ, ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Exit mobile version