Site icon Suddi Belthangady

ಕೆದಂಬಾಡಿ ರಾಮಯ್ಯ ಗೌಡರ ಸ್ಮಾರಕ ಸಮಿತಿಯ ಪರಿಶ್ರಮದಿಂದ ಬಾವುಟಗುಡ್ಡೆಯಲ್ಲಿ ಅತೀ ಎತ್ತರದ ದ್ವಜಸ್ಥಂಭಕ್ಕೆ ಶಿಲಾನ್ಯಾಸ

ಬೆಳ್ತಂಗಡಿ: ಸ್ಮಾರ್ಟ್ ಸಿಟಿಯಿಂದ ನಿರ್ಮಾಣವಾಗುತ್ತಿರುವ ದ.ಕ.ಜಿಲ್ಲೆಯ ಅತ್ಯಂತ ಎತ್ತರದ ಧ್ವಜಸ್ತಂಭಕ್ಕೆ ಸೆ.15ರಂದು ನಗರದ ಬಾವುಟಗುಡ್ಡೆಯಲ್ಲಿ ಶಿಲಾನ್ಯಾಸ ನೆರವೇರಿತು.

1837ರಲ್ಲಿ ಮಂಗಳೂರನ್ನು ಕೇಂದ್ರ ಸ್ಥಾನವನ್ನಾಗಿ ಮಾಡಿ ಆಡಳಿತ ನಡೆಸುತ್ತಿದ್ದ ಬ್ರಿಟೀಷರನ್ನು ಕೆದಂಬಾಡಿ ರಾಮಯ್ಯ ಗೌಡ ಎಂಬವರು ವೀರ ರೈತರನ್ನು ಸಂಘಟಿಸಿ ಹೋರಾಟ ಮಾಡಿದರು. ಹೋರಾಟದಲ್ಲಿ ಯಶಸ್ಸು ಪಡೆದ ಅವರು ನಗರದ ಬಾವುಟಗುಡ್ಡೆಯಲ್ಲಿ ಬ್ರಿಟಿಷ್ ಧ್ವಜವನ್ನು ಇಳಿಸಿ ನಮ್ಮ ನೆಲ ಸ್ವಾತಂತ್ರ್ಯವಾಗಿದೆ ಎಂದು ಘೋಷಿಸಿ ಸುಮಾರು 12 ದಿವಸಗಳವರೆಗೆ ಬಾವುಟವನ್ನು ಹಾರಿಸಿದ್ದರು.

ಈ ಹಿನ್ನೆಲೆಯಲ್ಲಿ ಬಾವುಟಗುಡ್ಡೆಯ ಇತಿಹಾಸವನ್ನು ಶಾಶ್ವತಗೊಳಿಸುವ ಸಲುವಾಗಿ ಧ್ವಜಸ್ತಂಭವನ್ನು ನಿರ್ಮಿಸಲು ಸ್ವಾತ್ರಂತ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿಯ ಅಧ್ಯಕ್ಷ ಕಿರಣ್ ಬುಡ್ಡೆಗುತ್ತು ಅವರು ಎಂಎಲ್‌ಸಿ ಮಂಜುನಾಥ ಭಂಡಾರಿಯವರಿಗೆ ಮನವಿ ಸಲ್ಲಿಸಿದ್ದರು. ಅದರಂತೆ ಮಂಜುನಾಥ ಭಂಡಾರಿಯವರು ರಾಜ್ಯ ಸರ್ಕಾರದೊಂದಿಗೆ ಮಾತನಾಡಿ ಸ್ಮಾರ್ಟ್ ಸಿಟಿ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಅತಿ ಎತ್ತರವಾದ ಧ್ವಜಸ್ತಂಭ ನಿರ್ಮಿಸುವಂತೆ ಮಾಡಿದ್ದರು.

ಅದರಂತೆ ಸೆ.15ರಂದು ಬಾವುಟಗುಡ್ಡೆಯಲ್ಲಿ ಧ್ವಜಸ್ತಂಭ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿದೆ. ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷ ಎಂಎಲ್‌ಸಿ ಮಂಜುನಾಥ ಭಂಡಾರಿ, ಶಾಸಕ ವೇದವಾಸ್ ಕಾಮತ್, ಮೇಯರ್ ಸುಧೀರ್ ಶೆಟ್ಟಿ, ಮನಪಾ ವಿರೋಧ ಪಕ್ಷದ ನಾಯಕರಾದ ಪ್ರವೀಣ್ ಚಂದ್ರ ಆಳ್ವ, ಮಾಜಿ ಎಂಎಲ್‌ಸಿ ಕೆ ಹರೀಶ್ ಕುಮಾರ್ ಹಾಗು ಮನಪಾ ಸದಸ್ಯರುಗಳು ಉಪಸ್ಥಿತರಿದ್ದರು.

Exit mobile version