ಬೆಳ್ತಂಗಡಿ: ಪುದುವೆಟ್ಟು ಗ್ರಾಮದ ನಡ್ಯೇಲ್ ಬೈಲಿನಲ್ಲಿ ಕಾಡಾನೆ ಹಾವಳಿ ಮುಂದುವರಿದಿದೆ. ಸೆ.9ರಂದು ತಡರಾತ್ರಿ ಗದ್ದೆ, ತೋಟಗಳಿಗೆ ನುಗ್ಗಿರುವ ಎರಡು ಕಾಡಾನೆಗಳು, ಅಪಾರ ಪ್ರಮಾಣದಲ್ಲಿ ಕೃಷಿಯನ್ನು ಹಾನಿ ಮಾಡಿವೆ. ಆನೆಗಳನ್ನು ಇಲ್ಲಿಂದ ದೂರದ ಕಾಡಿನತ್ತ ಓಡಿಸುವಂತೆ ಸ್ಥಳೀಯರು ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಬೀರ್ನಾಲಿ ಚಂದಪ್ಪ ಗೌಡ, ಲಿಂಗಪ್ಪ ಸಾಲಿಯಾನ್ ಕೂಡ್ಯೆ, ಆನಂದ ಗೌಡ ಹೊಸಮನೆ, ನಾರಾಯಣ ಗೌಡ ಗುತ್ತು, ಪಟ್ಲ ದೇಜಪ್ಪ ಗೌಡ, ಮುಂಡಾಜೆಕೋಡಿ ಕುಂಜಿರ ಗೌಡ ಮತ್ತಿತರರ ತೋಟ, ಗದ್ದೆಗಳಿಗೆ ಪ್ರವೇಶಿಸಿರುವ ಆನೆಗಳು, ಸುಮಾರು 8 ತೆಂಗಿನ ಮರಗಳು, 10ರಷ್ಟು ಅಡಿಕೆ ಮರ, 10ಕ್ಕೂ ಅಧಿಕ ಬಾಳೆಗಿಡಗಳನ್ನು ನಾಶ ಮಾಡಿವೆ. ಹಲವು ಕಡೆ ಭತ್ತದ ಗದ್ದೆಗಳಲ್ಲಿ ಓಡಾಡಿದ್ದು, ಭತ್ತದ ಪೈರು ಕೆಸರು ಸೇರಿದೆ.
ಕೆರೆಯಲ್ಲಿ ಹೊರಳಾಡಿದ ಆನೆಗಳು: ನೀರು ತುಂಬಿದ ಕೆರೆಗೆ ಇಳಿದಿರುವ ಆನೆಗಳು, ಹತ್ತಲಾರದೆ ಒದ್ದಾಡಿರುವುದು ಕಂಡುಬಂದಿದೆ. ಇದರಿಂದಾಗಿ ಕೆರೆಯ ಅಂಚು ಜರಿದಿದ್ದು, ಸುತ್ತಲೂ ಕೆಸರುಮಯವಾಗಿದೆ.
ಕಾದು ಕುಳಿತಿದ್ದ ಇಲಾಖೆಯವರು: ಉಪವಲಯ ಅರಣ್ಯಾಧಿಕಾರಿ ರವಿಚಂದ್ರ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ರಾತ್ರಿ 9.30ರಿಂದ 1 ಗಂಟೆಯವರೆಗೂ ಸ್ಥಳದಲ್ಲೇ ಇದ್ದು, ಪರಿವೀಕ್ಷಣೆ ನಡೆಸಿದ್ದರು. ರಾತ್ರಿ ಸುಮಾರು 2 ಗಂಟೆಗೆ ಆನೆಗಳು ತೋಟಕ್ಕೆ ನುಗ್ಗಿವೆ. ಈ ವೇಳೆ ಸ್ಥಳೀಯರು ಓಡಿಸುವ ಪ್ರಯತ್ನ ಮಾಡಿದರೂ, ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಿವೆಯೇ ಹೊರತು ಕಾಡಿನತ್ತ ತೆರಳಿಲ್ಲ. ಮುಂಜಾನೆ 5 ಗಂಟೆಯವರೆಗೂ ತೋಟಗಳಲ್ಲೇ ಸುತ್ತಾಡುತ್ತಿದ್ದವು ಎಂದು ಸ್ಥಳೀಯರು ತಿಳಿಸಿದ್ದಾರೆ.
ಗ್ರಾಪಂ, ಇಲಾಖೆ ಪರಿಶೀಲನೆ: ಸೆ.10ರಂದು ಬೆಳಗ್ಗೆ ಉಪವಲಯ ಅರಣ್ಯಾಧಿಕಾರಿ ರವಿಚಂದ್ರ, ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ, ನಿಕಟಪೂರ್ವ ಅಧ್ಯಕ್ಷ ಯಶವಂತ ಗೌಡ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರಾದ ಲಿಂಗಪ್ಪ ಸಾಲಿಯಾನ್, ನಾರಾಯಣ ಗೌಡ ನಡ್ಯೇಲು, ದಿನೇಶ್ ಗುತ್ತು, ಯೋಗೀಶ್ ನೆಕ್ಕಿಲಾಡಿ, ಹರೀಶ್ ಪಟ್ಲ, ಪರಮೇಶ್ವರ್, ಹರೀಶ್ ಹೊಸಮನೆ, ಚಂದ್ರಶೇಖರ ಮುಂಡಾಜೆಕೋಡಿ, ಅಣ್ಣಿಗೌಡ ಮುಂಡಾಜೆಕೋಡಿ, ನಾರಾಯಣ ಗೌಡ ಮುಂಡಾಜೆಕೋಡಿ, ವಸಂತ ಗೌಡ, ಹರೀಶ್ ಮುಂಡಾಜೆಕೋಡಿ, ಹರೀಶ್ ಹೊಸಮನೆ ಮತ್ತಿತರರು ಇದ್ದರು.