ಉಜಿರೆ: ಕರಾವಳಿಯಾದ್ಯಂತ ಆಚರಿಸುವ ಕನ್ಯಾ ಮರಿಯಮ್ಮ ಜನ್ಮದಿನ (ಮೊಂತಿ ಫೆಸ್ತ್), ತೆನೆ ಹಬ್ಬ(ಕುರಲ್ ಪರ್ಬ) ಬಹಳ ಸಂಭ್ರಮದಿಂದ ಸೆ.8ರಂದು ಬೆಳ್ತಂಗಡಿ ತಾಲೂಕಿನಾದ್ಯಂತ ಆಚರಿಸಲಾಯಿತು.
ಆ.30ರಿಂದ ನವ ದಿನಗಳ ನೊವೇನಾ ಪ್ರಾರಂಭಗೊಂಡಿದ್ದು ಸೆ.8ರಂದು ಹಬ್ಬ ಆಚರಿಸಲಾಯಿತು.ಮಕ್ಕಳು ಸಹಿತ ಹಿರಿಯರೂ ಸೇರಿ ಕನ್ಯಾ ಮರಿಯಮ್ಮಳಿಗೆ ಹೂ ಅರ್ಪಿಸಿ ಪ್ರಾರ್ಥನಾ ವಿಧಿ ನಡೆಯಿತು.
ಉಜಿರೆ ಸಂತ ಅಂತೋನಿ ಚರ್ಚ್ ನಲ್ಲಿ ವ.ಫಾ.ಅಬೆಲ್ ಲೋಬೊರವರು ಭತ್ತದ ತೆನೆಯನ್ನು ಆಶೀರ್ವದಿಸಿದರು.ನಂತರ ಭವ್ಯ ಮೆರವಣಿಗೆಯಲ್ಲಿ ಕನ್ಯಾ ಮರಿಯಮ್ಮಳ ದಿವ್ಯ ವೇದಿಕೆ ಹಾಗೂ ಭತ್ತದ ತೆನೆ ಚರ್ಚ್ ಗೆ ತರಲಾಯಿತು.ದಿವ್ಯ ಬಲಿ ಪೂಜೆ ನೆರವೇರಿಸಿದರು.ದಯಾಳ್ ಭಾಗ್ ಆಶ್ರಮದ ಧರ್ಮ ಗುರು ವ.ಫಾ.ಪ್ರಕಾಶ್ ಕುಲಾಸೊ ಹಬ್ಬದ ಸಂದೇಶ್ ನೀಡಿದರು.ಅನುಗ್ರಹ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವ.ಫಾ.ವಿಜಯ್ ಲೋಬೊ,ಫಾ. ವಲೇರಿಯನ್ ಸಿಕ್ವೇರಾ ಬಲಿ ಪೂಜೆಯಲ್ಲಿ ಪಾಲ್ಗೊಂಡರು.9 ದಿನ ನೊವೆನಾದಲ್ಲಿ ಸಹಕರಿಸಿ ಆರ್ಥಿಕ ನೆರವು ನೀಡಿದ ದಾನಿಗಳಿಗೆ ಮೇಣದ ಬತ್ತಿ ವಿತರಿಸಲಾಯಿತು.
ಚರ್ಚ್ ವೆಬ್ ಸೈಟ್ ಬಿಡುಗಡೆ: ಇದೇ ಸಂದರ್ಭದಲ್ಲಿ ಗ್ರೆಗ್ ಮೆಲ್ಸ್ಟಾರ್ ನಿರ್ವಹಿಸಿದ ಚರ್ಚ್ ವೆಬ್ ಸೈಟ್ ಪಾಲನಾ ಮಂಡಳಿ ಉಪಾಧ್ಯಕ್ಷ ಆಂಟೋನಿ ಫೆರ್ನಾಂಡಿಸ್, ಕಾರ್ಯದರ್ಶಿ ಲಿಗೋರಿ ವಾಸ್ ಬಿಡುಗಡೆಗೊಳಿಸಿದರು. ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಚರ್ಚ್ ಗೆ ಸಂಬಂಧ ಪಟ್ಟ ಮಕ್ಕಳಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿ ದಿ.ಟೀನಾ ಮೆಮೋರಿಯಲ್ ಪ್ರಶಸ್ತಿಗೆ ಆಯ್ಕೆಯಾದ ಅನುಷಾ ರೊಡ್ರಿಗಸ್ ಇವರಿಗೆ ದಿ.ಟೀನಾ ರವರ ತಂದೆ ಜೋರ್ಜ್ ಮ್ಯಾಥ್ಯು ರವರು ಪ್ರಶಸ್ತಿ ಮೊತ್ತ ವಿತರಿಸಿದರು.ಆಗಮಿಸಿದ ಭಕ್ತಾದಿಗಳಿಗೆ ತೆನೆ (ಕುರಲ್), ಕಬ್ಬು, ಮತ್ತು ಫಲಾಹಾರದ ವ್ಯವಸ್ಥೆ ಮಾಡಲಾಗಿತ್ತು. ಪಾಲನಾ ಮಂಡಳಿ ಉಪಾಧ್ಯಕ್ಷ ಆಂಟೋನಿ ಫೆರ್ನಾಂಡಿಸ್, ಹಾಗೂ ವಾಳೆಯ ಗುರಿಕಾರರು, ಪಾಲನಾ ಮಂಡಳಿ ಸದಸ್ಯರು, ಆರ್ಥಿಕ ಮಂಡಳಿ ಸದಸ್ಯರು ಸಹಕರಿಸಿದರು.