ಬೆಳ್ತಂಗಡಿ: ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ವತಿಯಿಂದ ಸೆ.6ರಿಂದ 8ರವರೆಗೆ ಉಜಿರೆಯ ಕುಂಜರ್ಪ ವಠಾರದಲ್ಲಿರುವ ಶ್ರೀ ಕ್ಷೇತ್ರ ತಿಮರೋಡಿಯಲ್ಲಿ 27ನೇ ವರ್ಷದ ಸಾಮೂಹಿಕ ಗೌರಿ ಪೂಜೆ ಮತ್ತು ಶ್ರೀ ಗಣೇಶೋತ್ಸವ ಬ್ರಹ್ಮಶ್ರೀ ಶಿರೋಮಣಿ ಕೆ.ಎಸ್.ನಿತ್ಯಾನಂದ ಗುರುಗಳ ಮಾರ್ಗದರ್ಶನದಲ್ಲಿ ನೆರವೇರಿತು.
6ರಂದು ಬೆಳಗ್ಗೆ 10.30ಕ್ಕೆ ಸಾಮೂಹಿಕ ಗೌರಿ ಪೂಜೆ ಪ್ರಾರಂಭವಾಗಲಿದ್ದು, ಮಧ್ಯಾಹ್ನ ಮಹಾಪೂಜೆ ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ. 7ರಂದು ಬೆಳಗ್ಗೆ 8ಕ್ಕೆ ಗಣಪತಿ ಮೂರ್ತಿ ಪ್ರತಿಷ್ಠೆ, ಬಳಿಕ ಗಣಹೋಮ, ತಾಲೂಕಿನ ವಿವಿಧ ಭಜನಾ ಮಂಡಳಿಗಳಿಂದ ಭಜನೆ, ಮಧ್ಯಾಹ್ನ 1 ಗಂಟೆಗೆ ಡ್ರೀಮ್ ಝೋನ್ ಡ್ಯಾನ್ಸ್ ಕ್ವೀವ್ ತಂಡದಿಂದ ನೃತ್ಯ ವೈವಿಧ್ಯ, ಸಂಜೆ 4ರಿಂದ ಭಜನೆ, 6 ಗಂಟೆಗೆ ಮಹಾಪೂಜೆ, ಸಾಮ ಪಾರಾಯಣ, ರಾತ್ರಿ 8ರಿಂದ ಬಿತ್ತ್‌ಲ್ದ ಉಳ್ಳಾಲ್ದಿ ಅಪ್ಪೆ ಭಗವತಿ ನಾಟಕ ಪ್ರದರ್ಶನಗೊಳ್ಳಲಿದೆ. 8ರಂದು ಬೆಳಗ್ಗೆ 9ಕ್ಕೆ 1008 ಕಾಯಿಗಳ ಮೂಡು ಗಣಪತಿ ಸೇವೆ, 10ಕ್ಕೆ ಸುಮಾ ಎಲ್.ಎನ್.ಶಾಸ್ತ್ರಿಯವರಿಂದ ಸಾಮವೇದ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, 1.30ಕ್ಕೆ ಭಕ್ತಿ ರಸಮಂಜರಿ, ಭಾಗವತರ ಸ್ವರ ಅನುಕರಣೆ, ನೃತ್ಯ ವೈಭವ, 3ರಿಂದ ಭಜನೆ, ಸಂಜೆ 6ಕ್ಕೆ ಮಹಾಪೂಜೆ, 6.30ಕ್ಕೆ ಶೋಭಾಯಾತ್ರೆ ಆರಂಭವಾಗಲಿದೆ. ರಾತ್ರಿ 8ಕ್ಕೆ ಭಕ್ತಿ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
8ರಂದು ಬೆಳಗ್ಗೆ 10.30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಬೀಡು, ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟಣ್ಣವರ್, ಸುಮಾ ಎಲ್.ಎನ್. ಶಾಸ್ತ್ರಿ, ಗಣೇಶೋತ್ಸವ ಸಮಿತಿಯ ಅಧ್ಯಕ್ಷ ರಮೇಶ್ ನಾಯ್ಕ್ ನಡಿಬೆಟ್ಟು ಉಪಸ್ಥಿತರಿರುವರು.