Site icon Suddi Belthangady

ಪುದುವೆಟ್ಟು: ಮಾನಭಂಗಕ್ಕೆ ಯತ್ನಿಸಿದ ಅಪರಿಚಿತ ಯುವಕ- ಮನೆಯಲ್ಲಿ ಯಾರೂ ಇಲ್ಲ ಎಂದು ಹೇಳಿದ್ದನ್ನು ಕೇಳಿಸಿಕೊಂಡು ಮನೆಗೆ ನುಗ್ಗಿದ ಆಗಂತುಕ

ಬೆಳ್ತಂಗಡಿ: ಮಹಿಳೆಯರು ತಮ್ಮ ಮಾತಿನ ನಡುವೆ ಮನೆಯಲ್ಲಿ ಯಾರೂ ಇಲ್ಲ ಎಂದು ಹೇಳಿದ್ದನ್ನು ಕೇಳಿಸಿಕೊಂಡ ಅಪರಿಚಿತ ಯುವಕನೊಬ್ಬ ಹಿಂಬಾಲಿಸಿ ಮಾನಭಂಗಕ್ಕೆ ಯತ್ನಿಸಿದ ಘಟನೆ ಸೆ.6ರಂದು ಪುದುವೆಟ್ಟು ಗ್ರಾಮದಲ್ಲಿ ನಡೆದಿದೆ.ಪರವೂರಿನಿಂದ ಇತ್ತೀಚೆಗಷ್ಟೇ ಪುದುವೆಟ್ಟಿಗೆ ಬಂದಿದ್ದ ದಂಪತಿ ಜಾಗ ಖರೀದಿಸಿ ನೆಲೆಸಿದ್ದರು. ಪತಿ ಕೆಲಸಕ್ಕೆ ತೆರಳಿದ್ದು, ಮಾವನೂ ಕೆಲಸಕ್ಕೆ ಹೋಗಿದ್ದರು. ಪುತ್ರಿ ಶಾಲೆಗೆ ಹೋಗುತ್ತಿದ್ದಾಳೆ. ಸೆ.6ರಂದು ಬೆಳಗ್ಗೆ ಮಗುವನ್ನು ಶಾಲೆಗೆ ಬಿಟ್ಟು ಮರಳುವಾಗ ತಮ್ಮ ಪರಿಚಯದವರಲ್ಲಿ ಮಾತನಾಡುವಾಗ, ಮನೆಯಲ್ಲಿ ಯಾರೂ ಇಲ್ಲ, ಅಕ್ಕಪಕ್ಕದಲ್ಲೂ ಹತ್ತಿರದಲ್ಲಿ ಬೇರೆ ಮನೆಗಳಿಲ್ಲ, ಹೆದರಿಕೆಯಾಗುತ್ತದೆ ಎಂಬಿತ್ಯಾದಿ ಲೋಕಾಭಿರಾಮ ಮಾತುಗಳನ್ನಾಡಿ ಮನೆಗೆ ತೆರಳಿದ್ದರು.

ಧೈರ್ಯ ಪ್ರದರ್ಶಿಸಿದ ಮಹಿಳೆ: ಮಹಿಳೆ ಮಾತನಾಡಿದ್ದನ್ನು ಕೇಳಿಸಿಕೊಂಡಿದ್ದ ಯುವಕನೊಬ್ಬ ಹಿಂಬಾಲಿಸಿದ್ದ. ಇದನ್ನು ಗಂಭೀರವಾಗಿ ಪರಿಗಣಿಸದೆ ಮಹಿಳೆ ಮನೆಗೆ ತೆರಳಿದ್ದರು. ಯುವಕ ಅಂಗಳಕ್ಕೂ ಬಂದಿದ್ದು, ವಿಚಾರಿಸಿದಾಗ ಸ್ಪಷ್ಟ ಉತ್ತರ ನೀಡಿರಲಿಲ್ಲ. ನಂತರ ಮನೆಯೊಳಗೆ ದಿಢೀರನೆ ನುಗ್ಗಿ ಬಾಗಿಲಿನ ಚಿಲಕ ಹಾಕಿ ಮಾನಭಂಗಕ್ಕೆ ಮುಂದಾಗಿದ್ದ. ತಕ್ಷಣ ಧೈರ್ಯ ಪ್ರದರ್ಶಿಸಿದ ಮಹಿಳೆ ಯುವಕನಿಗೆ ಮಹಿಳೆ ಬಲವಾಗಿ ಒದ್ದಿದ್ದು, ಆತ ಬೀಳುತ್ತಿದ್ದಂತೆ ಬಾಗಿಲಿನ ಚಿಲಕ ತೆಗೆದು ಹೊರಗೆ ಓಡಿ ತಪ್ಪಿಸಿಕೊಂಡಿದ್ದಾರೆ. ಅತ್ತ ಯುವಕ ಏನೂ ಆಗಿಲ್ಲವೆಂಬಂತೆ ತನ್ನ ಮನೆಗೆ ಹೋಗಿದ್ದ.

ಪೊಲೀಸರಿಗೆ ಘಟನೆಯ ಮಾಹಿತಿ: ಆತಂಕಗೊಂಡ ಮಹಿಳೆ ಸುತ್ತಮುತ್ತಲಿನವರಿಗೆ ಘಟನೆಯ ಕುರಿತು ವಿವರಿಸಿದ್ದಾರೆ. ಬಳಿಕ ಆಕೆ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಸುತ್ತಮುತ್ತಲಿನವರು ಸೇರಿ ಉಜಿರೆಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಧರ್ಮಸ್ಥಳ ಪೊಲೀಸ್ ಠಾಣೆಗೂ ಘಟನೆ ಕುರಿತು ಮಾಹಿತಿ ನೀಡಿದ್ದಾರೆ. ಆದರೆ, ಅಪರಿಚಿತನ ಹೆಸರು, ಮನೆ ಸಹಿತ ಯಾವುದೇ ಮಾಹಿತಿ ಗೊತ್ತಿರಲಿಲ್ಲ. ಆತನ ಚಹರೆ, ಒಂದು ಕಾಲು ನೋವು ಹೊಂದಿರುವುದನ್ನು ತಿಳಿಸಿದ ಬಳಿಕ ಊರಿನವರು ಗುರುತಿಸಿದ್ದು, ಮನೆಗೆ ತೆರಳಿದ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆತ ಬಾಡಿಗೆ ಮನೆಯಲ್ಲಿದ್ದು, ಹೊರಗಿನ ಊರಿನವನು ಎಂದು ತಿಳಿದುಬಂದಿದೆ.

Exit mobile version