Site icon Suddi Belthangady

ನಿವೃತ್ತ ಮುಖ್ಯ ಶಿಕ್ಷಕ ಬೆಳಾಲಿನ ಬಾಲಕೃಷ್ಣ ಬಡೆಕ್ಕಿಲಾಯರ ಕೊಲೆರಾಘವೇಂದ್ರ ಕೆದಿಲಾಯ, ಮುರಳಿಕೃಷ್ಣ ಸಬ್‌ಜೈಲ್‌ಗೆ

ಬೆಳ್ತಂಗಡಿ: ಬೆಳಾಲು ಗ್ರಾಮದ ಎಸ್.ಪಿ.ಬಿ. ಕಂಪೌಂಡ್ ನಿವಾಸಿಯಾಗಿದ್ದ ನಿವೃತ್ತ ಮುಖ್ಯ ಶಿಕ್ಷಕ ಎಸ್.ಪಿ.ಬಾಲಕೃಷ್ಣ ಬಡೆಕ್ಕಿಲ್ಲಾಯ (೮೩ವ)ರವರನ್ನು ಆ.೨೦ರಂದು ಮಧ್ಯಾಹ್ನ ಅವರ ಮನೆಯಲ್ಲಿ ಬರ್ಬರವಾಗಿ ಕೊಲೆ ಮಾಡಿದ ಆರೋಪಡಿ ಧರ್ಮಸ್ಥಳ ಠಾಣಾ ಪೊಲೀಸರಿಂದ ಆ.೨೪ರಂದು ಬಂಧಿತರಾಗಿದ್ದ ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾ ಬದಿಯಡ್ಕ ವಡಂಬಳೆಯ ರಾಘವೇಂದ್ರ ಕೆದಿಲಾಯ(೫೩ವ) ಮತ್ತು ಮುರಳಿಕೃಷ್ಣ(೨೦ವ)ರವರ ಪೊಲೀಸ್ ಕಸ್ಟಡಿ ಅವಧಿ ಆ.೩೧ರಂದು ಕೊನೆಗೊಂಡಿದ್ದು ಬಂಧಿತರನ್ನು ಮಂಗಳೂರಿನ ಸಬ್‌ಜೈಲ್‌ಗೆ ಕಳುಹಿಸಲಾಗಿದೆ. ಕೊಲೆಗೀಡಾದ ಬಾಲಕೃಷ್ಣ ಬಡೆಕ್ಕಿಲಾಯ ಅವರ ಮಗಳು ವಿಜಯಲಕ್ಷ್ಮಿ ಅವರ ಗಂಡ ರಾಘವೇಂದ್ರ ಕೆದಿಲಾಯ ಮತ್ತು ಮಗ ಮುರಳೀಕೃಷ್ಣ ಅವರು ಆಸ್ತಿ ಹಾಗೂ ಚಿನ್ನಾಭರಣದ ಆಸೆಗಾಗಿ ಕೃತ್ಯ ಎಸಗಿರುವುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದ್ದು ಪೊಲೀಸ್ ಕಸ್ಟಡಿಯ ಅವಧಿಯಲ್ಲಿ ಇನ್ನಷ್ಟು ಸಾಕ್ಷ್ಯ ಸಂಗ್ರಹ ಮಾಡಲಾಗಿದೆ.
ಆರೋಪಿಗಳು ಮಂಗಳೂರು ಸಬ್ ಜೈಲ್‌ಗೆ: ನಿವೃತ್ತ ಮುಖ್ಯ ಶಿಕ್ಷಕ ಎಸ್.ಪಿ.ಬಾಲಕೃಷ್ಣ ಬಡೆಕ್ಕಿಲ್ಲಾಯ ಅವರು ಆ.೨೦ರಂದು ಮಧ್ಯಾಹ್ನದ ಬಳಿಕ ಬೆಳಾಲು ಗ್ರಾಮದಲ್ಲಿರುವ ತಮ್ಮ ಎಸ್.ಪಿ.ಬಿ. ಕಂಪೌಂಡ್‌ನ ಮನೆಯ ಅಡುಗೆ ಕೋಣೆಯಲ್ಲಿದ್ದಾಗ ಮಾರಕಾಸ್ತ್ರಗಳಿಂದ ದಾಳಿ ಮಾಡಲಾಗಿತ್ತು. ಈ ವೇಳೆ ದಾಳಿಯಿಂದ ತಪ್ಪಿಸಿಕೊಳ್ಳಲು ಮನೆಯ ಅಂಗಳಕ್ಕೆ ಓಡಿ ಬಂದಿದ್ದ ಅವರ ಕುತ್ತಿಗೆ, ಕೈಗೆ, ತಲೆಗೆ ದಾಳಿ ಮಾಡಿದ್ದರಿಂದ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಈ ಘಟನೆಗೆ ಸಂಬಂಧಿಸಿ ಅವರ ಕಿರಿಯ ಮಗ ಪುತ್ತೂರಿನಲ್ಲಿ ರಿಲಯನ್ಸ್ ಸಮೂಹ ಸಂಸ್ಥೆಯಲ್ಲಿ ಸಿಬ್ಬಂದಿಯಾಗಿರುವ ಸುರೇಶ್ ಭಟ್ ನೀಡಿದ ದೂರಿನಂತೆ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಧರ್ಮಸ್ಥಳ ಠಾಣಾ ಪೊಲೀಸರು ಆಸ್ತಿ ಮತ್ತು ಚಿನ್ನಕ್ಕಾಗಿ ಕೊಲೆ ಮಾಡುವ ಯೋಜನೆ ರೂಪಿಸಿ ಬಂದು ಬರ್ಬರವಾಗಿ ಹತ್ಯೆ ಮಾಡಿ ಬಂದ ಸ್ಕೂಟರ್‌ನಲ್ಲಿ ಪರಾರಿಯಾಗಿದ್ದ ರಾಘವೇಂದ್ರ ಕೆದಿಲಾಯ ಮತ್ತು ಆತನ ಪುತ್ರ ಮುರಳಿಕೃಷ್ಣನನ್ನು ಬಂಧಿಸಿದ್ದರು. ಬಾಲಕೃಷ್ಣ ಬಡೆಕ್ಕಿಲ್ಲಾಯ ಅವರ ಜಾಗ ಮತ್ತು ಮೂರು ವರ್ಷದ ಹಿಂದೆ ಮೃತಪಟ್ಟಿದ್ದ ಅವರ ಪತ್ನಿ, ನಿವೃತ್ತ ಶಿಕ್ಷಕಿ ಯು.ಲೀಲಾ ಅವರ ಚಿನ್ನವನ್ನು ಮಗಳು ವಿಜಯಲಕ್ಷ್ಮಿಗೆ ಪಾಲು ನೀಡದೆ ಅದನ್ನು ಬ್ಯಾಂಕ್ ಲಾಕರ್‌ನಲ್ಲಿ ಇಟ್ಟಿದ್ದ ಕಾರಣದಿಂದ ಬಾಲಕೃಷ್ಣ ಬಡೆಕ್ಕಿಲ್ಲಾಯರ ಅಳಿಯ ಮತ್ತು ಮೊಮ್ಮಗ ಕೋಪದಲ್ಲಿ ಕೊಲೆ ಮಾಡಲು ಯೋಜಿಸಿ ತಂದೆ ಮತ್ತು ಮಗ ಕಾಸರಗೋಡಿನ ತಮ್ಮ ಮನೆಯಿಂದ ಮಾರಕಾಸ್ತ್ರದೊಂದಿಗೆ ಹೊರಟು ಬಂದಿದ್ದರು. ರಾಘವೇಂದ್ರ ಕೆದಿಲಾಯ ಪತ್ನಿ ವಿಜಯಲಕ್ಷ್ಮಿ ಅವರ ಸ್ಕೂಟರ್‌ನಲ್ಲಿ ಬಂದಿದ್ದರೆ ಮುರಳೀಕೃಷ್ಣ ತನ್ನ ಬೈಕ್‌ನಲ್ಲಿ ಮಂಗಳೂರಿಗೆ ಬಂದಿದ್ದ. ಮಂಗಳೂರಿನಲ್ಲಿ ಬೈಕ್ ನಿಲ್ಲಿಸಿ ಅಲ್ಲಿಂದ ಒಂದೇ ಸ್ಕೂಟರಿನಲ್ಲಿ ಅಪ್ಪ ಮತ್ತು ಮಗ ಬೆಳಾಲಿಗೆ ಬಂದು ಬಾಲಕೃಷ್ಣ ಬಡೆಕ್ಕಿಲ್ಲಾಯರವರನ್ನು ಬಲಿ ಪಡೆದಿದ್ದಾರೆ ಎಂದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ. ಅಲ್ಲದೆ ಪೊಲೀಸ್ ಕಸ್ಟಡಿಯ ಅವಧಿಯಲ್ಲಿ ಈ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ ೬೨ರಂತೆ ಕಲಂ ೧೦೩ ಬಿಎನ್‌ಎಸ್‌ನಡಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಹಂತಕರಿಂದ ಕೊಲೆ ಕೃತ್ಯದ ಸಂಪೂರ್ಣ ಮಾಹಿತಿ ಪಡೆದ ನಂತರ ಆ. ೨೪ರಂದು ಸಂಜೆ ಬೆಳ್ತಂಗಡಿಯ ನ್ಯಾಯಾಧೀಶರ ಎದುರು ಬಂಧಿತರನ್ನು ಹಾಜರುಪಡಿಸಿದ್ದರು. ಈ ವೇಳೆ ನ್ಯಾಯಾಧೀಶರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಆ.೨೭ರಂದು ಮತ್ತೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಬಂಧಿತರನ್ನು ಹಾಜರುಪಡಿಸಲಾಗಿದ್ದು ಆ.೩೧ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಕಸ್ಟಡಿ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಆ.೩೧ರಂದು ಸಂಜೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ಬಳಿಕ ಆರೋಪಿಗಳನ್ನು ಮಂಗಳೂರು ಸಬ್ ಜೈಲ್‌ಗೆ ರವಾನಿಸಲಾಗಿದೆ.

ಆರೋಪಿಗಳ ಮನೆಯಲ್ಲಿ ಮಹಜರು-ಸಾಕ್ಷ್ಯ ಸಂಗ್ರಹ ಬೈಕ್, ಬಟ್ಟೆ, ಕತ್ತಿ ವಶಪಡಿಸಿಕೊಂಡ ಪೊಲೀಸರು
ನಿವೃತ್ತ ಮುಖ್ಯ ಶಿಕ್ಷಕ ಬಾಲಕೃಷ್ಣ ಬಡೆಕ್ಕಿಲ್ಲಾಯರವರ ಹತ್ಯೆಗೆ ಆರೋಪಿಗಳು ಬಳಸಿದ್ದ ಬೈಕ್, ಬಟ್ಟೆ ಮತ್ತು ಕತ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನಾ ಸ್ಥಳದಲ್ಲಿ ಮತ್ತು ಕೊಲೆ ಕೃತ್ಯ ಎಸಗಿದ ಬಳಿಕ ಆರೋಪಿಗಳು ತಂಗಿದ್ದ ಅವರ ಕಾಸರಗೋಡು ಮನೆಯಲ್ಲಿ ಪ್ರಕರಣದ ತನಿಖಾಧಿಕಾರಿಯಾಗಿರುವ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ನೇತೃತ್ವದಲ್ಲಿ ಮಹಜರು ನಡೆಸಲಾಗಿದೆ. ಸಮಗ್ರ ತನಿಖೆ ನಡೆಸಿ ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿದ ಬಳಿಕ ಆರೋಪಿಗಳಾದ ರಾಘವೇಂದ್ರ ಕೆದಿಲಾಯ ಮತ್ತು ಆತನ ಮಗ ಮುರಳಿಕೃಷ್ಣನನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ಮಂಗಳೂರು ಉಪಕಾರಾಗೃಹಕ್ಕೆ ಕಳುಹಿಸಲಾಗಿದೆ.

Exit mobile version