Site icon Suddi Belthangady

ತಾಲೂಕಿನ ನಾಲ್ವರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಗರಿ

ಬೆಳ್ತಂಗಡಿ ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಾಲ್ವರು ಶಿಕ್ಷಕರಿಗೆ ಈ ಬಾರಿಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗಳು ಲಭಿಸಿವೆ. ರಾಜ್ಯಮಟ್ಟದ ವಿಶೇಷ ಶಿಕ್ಷಕ ಪ್ರಶಸ್ತಿಗೆ ಗುರುವಾಯನಕೆರೆ ಸರಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ವಿ.ಕೆ.ವಿಟ್ಲ ಭಾಜನರಾಗಿದ್ದು, ಸೆ.೫ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಹುಣ್ಸೆಕಟ್ಟೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಕರಿಯಪ್ಪ ಎ.ಕೆ, ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಸವಣಾಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮಂಜುನಾಥ ಜಿ., ಪ್ರೌಢಶಾಲೆ ವಿಭಾಗದಲ್ಲಿ ನಡ ಸರಕಾರಿ ಪ್ರೌಢ ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಮೋಹನಬಾಬು ಡಿ. ಆಯ್ಕೆಯಾಗಿದ್ದಾರೆ. ದ.ಕ. ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಬಂಟ್ವಾಳದ ಬಂಟರ ಭವನದಲ್ಲಿ ಬೆಳಗ್ಗೆ ೯ ಗಂಟೆಗೆ ನಡೆಯಲಿದ್ದು, ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ವಿ.ಕೆ.ವಿಟ್ಲರಿಗೆ ರಾಜ್ಯ ಶಿಕ್ಷಕ ಪ್ರಶಸ್ತಿ
ಗುರುವಾಯನಕೆರೆ ಸರಕಾರಿ ಪ್ರೌಢಶಾಲಾ ಚಿತ್ರಕಲಾ ಶಿಕ್ಷಕ, ವಿ.ಕೆ.ವಿಟ್ಲ ಎಂದೇ ಪ್ರಸಿದ್ಧರಾಗಿರುವ ವಿಶ್ವನಾಥ ಕೆ.ವಿಟ್ಲ ರಾಜ್ಯ ಸರಕಾರ ನೀಡುವ ರಾಜ್ಯ ಮಟ್ಟದ ವಿಶೇಷ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮೂಲತಃ ಬಂಟ್ವಾಳ ತಾಲೂಕಿನ ವಿಟ್ಲದವರಾದ ಅವರು ಪ್ರಸ್ತುತ ಉಜಿರೆ ನಿವಾಸಿ. ಚಂದಳಿಕೆ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ವಿಟ್ಲದ ವಿಠಲ ಪ.ಪೂ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದಿದ್ದರು. ಕೃಷಿ ಕೂಲಿ ಮಾಡುತ್ತಾ ಬಡತನದಲ್ಲಿಯೇ ಜೀವನ ಸಾಗಿಸುತ್ತಿದ್ದ ರೈತಾಪಿ ಕುಟುಂಬದಿಂದ ಬಂದಿರುವ ವಿ.ಕೆ.ವಿಟ್ಲರಲ್ಲಿ ಕಲಾ ಸ್ಫೂರ್ತಿ ಹೊರ ಹೊಮ್ಮಿಸಿದವರು ಚಿತ್ರಕಲಾ ಶಿಕ್ಷಕ ಸುರೇಶ ಹಂದಾಡಿ. ಬಳಿಕ ವಿಟ್ಲರವರ ಸೃಜನಶೀಲ ಕಲ್ಪನೆಗೆ ಸೂಕ್ತ ತರಬೇತಿ ನೀಡಿ ಪರಿಪೂರ್ಣತೆಯ ಹಂತಕ್ಕೆ ತಿದ್ದಿ ತೀಡಿದ್ದು ಮಂಗಳೂರಿನ ಮಹಾಲಸ ಕಲಾವಿದ್ಯಾಲಯ. ಸುಬ್ರಹ್ಮಣ್ಯಶ್ವೇರ ಪ್ರೌಢ ಶಾಲೆ ಬಿಳಿನೆಲೆ, ಉಜಿರೆ ಎಸ್‌ಡಿಎಂನಲ್ಲಿ ಡಾ||ವೀರೇಂದ್ರ ಹೆಗ್ಗಡೆಯವರ ಸಾಮಿಪ್ಯದಲ್ಲಿ ಕಲಾ ಸೇವೆ, ಬೋಧಕರಾಗಿ ಸೇವೆ ಸಲ್ಲಿಸಿದ್ದು, ಕಲಾ ಪ್ರಕಾರಗಳಾದ ಶಿಲ್ಪಕಲೆ ಗೋಡೆ ಬರಹ ಗೌರಿ/ಗಣೇಶ ವಿಗ್ರಹಗಳು ಅವರನ್ನು ಇನ್ನಷ್ಟು ಪಕ್ವಗೊಳಿಸಿದವು. ಕೃತಕ ರಾಸಾಯನಿಕ ಬಣ್ಣಗಳು ಮತ್ತು ಪರಿಸರಕ್ಕೆ ಹಾನಿಕಾರಕ ವಸ್ತುಗಳಿಂದ ಕಲಾವಸ್ತುಗಳನ್ನು ಬಳಸದೆ, ಸಹಜ ಬಣ್ಣ/ಮಣ್ಣುಗಳಿಂದಲೇ ಗಣೇಶ, ಶಾರದೆ, ಗೌರಿ ಮೂರ್ತಿಗಳನ್ನು ರಚಿಸುತ್ತಾರೆ. ಕಲಾಪೋಷಕರು, ಕಲಾ ಕಾರ್ಯಕ್ರಮಗಳ ಸಂಘಟಕರೂ ಆಗಿರುವ ಇವರು ೧೦೦ಕ್ಕೂ ಹೆಚ್ಚು ಬೇಸಿಗೆ ಶಿಬಿರ, ಕಲಾ ಶಿಬಿರ, ಉಚಿತ ಚಿತ್ರಕಲಾ ತರಬೇತಿಗಳನ್ನು ನಡೆಸಿದ್ದಾರೆ. ಶಾಲಾ ಪಠ್ಯಪುಸ್ತಕ ಪ್ರಾಧಿಕಾರದಲ್ಲಿ ೮ನೇ ತರಗತಿಯ ಪ್ರಥಮ ಭಾಷೆ ಕನ್ನಡ ಪಠ್ಯಪುಸ್ತಕ ಸಮಿತಿ ಸದಸ್ಯನಾಗಿಯೂ ಕೆಲಸ ನಿರ್ವಹಿಸಿದ್ದಾರೆ. ಧರ್ಮಸ್ಥಳದ ಶಾಂತಿವನ ಟ್ರಸ್ಟ್‌ನ ಜ್ಞಾನಾಧಾರಿತ, ಮೌಲ್ಯಾಧಾರಿತ ಪುಸ್ತಕಗಳ ಪರಿಕಲ್ಪನೆ, ಚಿತ್ರ ವಿನ್ಯಾಸಗಳಲ್ಲಿ ವಿ.ಕೆ.ವಿಟ್ಲ ಕೊಡುಗೆ ಅಪಾರ. ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸಹಿತ ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಉಜಿರೆಯ ಮಲ್ಲಿಗೆ ಮನೆಯಲ್ಲಿ ಪತ್ನಿ ಆಶಾಕಿರಣ ಹಾಗೂ ಪುತ್ರಿ ಚಿತಾ ಅವರೊಂದಿಗೆ ನೆಲೆಸಿದ್ದಾರೆ.

ನೋವು ಮರೆಸುವ ಕಲೆ:
ನನಗೆ ತುಂಬಾ ಸಂತೋಷವಾಗುತ್ತಿದೆ. ನನ್ನ ಬೆಳವಣಿಗೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ||ಡಿ.ವೀರೇಂದ್ರ ಹೆಗ್ಗಡೆ, ಹೇಮಾವತಿ ಹೆಗ್ಗಡೆ, ಡಿ.ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಪ್ರೋತ್ಸಾಹ ಅಪಾರ. ಶಿಕ್ಷಕ ಸುರೇಶ್ ಹಂದಾಡಿಯವರಿಂದ ಕಲಿತಿzನೆ. ಗುರುವಾಯನಕೆರೆ ಶಾಲೆಯ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಸಹಕಾರ ನೀಡಿದ್ದಾರೆ. ಆರೋಗ್ಯ ಸಮಸ್ಯೆ, ನೋವುಗಳನ್ನು ಚಿತ್ರ, ಬಣ್ಣಗಳು, ಕಲೆಗಳು ಮರೆಸುತ್ತವೆ.

ಹುಣ್ಸೆಕಟ್ಟೆ ಶಾಲೆಯ ಮುಖ್ಯಶಿಕ್ಷಕ ಕರಿಯಪ್ಪರಿಗೆ ಜಿಲ್ಲಾಮಟ್ಟದ ಪ್ರಶಸ್ತಿ:
ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿರುವ ಹುಣ್ಸೆಕಟ್ಟೆ ಸ.ಕಿ.ಪ್ರಾ. ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಕರಿಯಪ್ಪ ಎ.ಕೆ. ಮೂಲತಃ ದಾವಣಗೆರೆಯ ಜೀನಹಳ್ಳಿಯವರು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಹುಟ್ಟೂರಿನಲ್ಲಿ ಪೂರೈಸಿದ ಇವರು ಹಿರೆಕೇರೂರಿನಲ್ಲಿ ಪದವಿ ಪೂರ್ವ ಶಿಕ್ಷಣ, ಬೆಂಗಳೂರಿನ ಜಯನಗರ ಬಿಇಎಸ್‌ಟಿಟಿಐ ಕಾಲೇಜಿನಲ್ಲಿ ಬಿ.ಎಡ್ ತರಬೇತಿ, ದೂರ ಶಿಕ್ಷಣದಲ್ಲಿ ಕನ್ನಡ ಪದವಿ ಪಡೆದಿದ್ದಾರೆ. ೨೦೦೮ರಲ್ಲಿ ವೃತ್ತಿ ಜೀವನ ಪ್ರಾರಂಭಿಸಿದ್ದು, ಬೆಳ್ತಂಗಡಿ ಉಣ್ಣಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರು ವರ್ಷ ಸೇವೆ ಸಲ್ಲಿಸಿ ಹುಣ್ಸೆಕಟ್ಟೆ ಶಾಲೆಯಲ್ಲಿ ೧೪ ವರ್ಷದಿಂದ ಕರ್ತವ್ಯದಲ್ಲಿದ್ದಾರೆ. ಪ್ರಸ್ತುತ ಬೆಳ್ತಂಗಡಿಯ ಚರ್ಚ್ ರೋಡ್ ಬಳಿ ಪತ್ನಿ ಕವಿತಾ ಎ.ಕೆ. ಹಾಗೂ ಮಕ್ಕಳಾದ ಸೃಷ್ಟಿ ಕೆ.ಎಸ್. ಹಾಗೂ ಐಸಿರಿ ಜೆ.ಕೆ. ಅವರೊಂದಿಗೆ ನೆಲೆಸಿದ್ದಾರೆ.
ಸವಣಾಲು ಶಾಲೆ ಮುಖ್ಯಶಿಕ್ಷಕ ಮಂಜುನಾಥರಿಗೆ ಜಿಲ್ಲಾ ಪ್ರಶಸ್ತಿ: ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿರುವ ಸವಣಾಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮಂಜುನಾಥ ಜಿ. ಮೂಲತಃ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ದಿಬ್ಬದ ಹಳ್ಳಿಯವರು. ಪ್ರೌಢ ಶಾಲಾ ಶಿಕ್ಷಣವನ್ನು ಹುಟ್ಟೂರಿನಲ್ಲಿ ಪೂರೈಸಿದ ಇವರು, ಕೊಟ್ಟೂರಿನಲ್ಲಿ ಪದವಿ ಪೂರ್ವ ಶಿಕ್ಷಣ, ಕೊಟ್ಟೂರೇಶ್ವರ ಮಹಾವಿದ್ಯಾಲಯದಲ್ಲಿ ಶಿಕ್ಷರ ತರಬೇತಿ, ಕಲಬುರಗಿ ವಿ.ವಿ.ಯಲ್ಲಿ ಪದವಿ ಶಿಕ್ಷಣ ಪಡೆದಿದ್ದಾರೆ. ೧೯೯೫ರಲ್ಲಿ ಸವಣಾಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವೃತ್ತಿ ಜೀವನ ಪ್ರಾರಂಭಿಸಿದ್ದು, ಸತತ ೩೦ ವರ್ಷದಿಂದ ಇದೇ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ೫ ವರ್ಷದಿಂದ ಶಾಲಾ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದಾನಿಗಳ ಸಹಕಾರದಿಂದ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್, ಶುದ್ಧ ಕುಡಿಯುವ ನೀರು, ಪೀಠೋಪಕರಣ ಮತ್ತು ಕಲಿಕೋಪಕರಣಗಳ ವ್ಯವಸ್ಥೆ ಮಾಡಿರುವುದು ಮಂಜುನಾಥರ ಹಿರಿಮೆ. ಪತ್ನಿ ರೇಖಾರೊಂದಿಗೆ ಕುತ್ಯಾರಿನಲ್ಲಿ ನೆಲೆಸಿದ್ದು, ಮಕ್ಕಳಾದ ಅಂಬಿಕಾ ಜಿ.ಎಂ., ಆಶಾಲತಾ ಜಿ.ಎಂ. ಹಾಗೂ ಅನಿಲ್ ಕುಮಾರ್ ಜಿ.ಎಂ. ಉನ್ನತ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿದ್ದಾರೆ.
ನಡ ಪ್ರೌಢ ಶಾಲೆಯ ಮೋಹನಬಾಬು ಜಿಲ್ಲಾಮಟ್ಟದ ಶಿಕ್ಷಕ ಪ್ರಶಸ್ತಿಗೆ ಆಯ್ಕೆ: ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿರುವ ನಡ ಸರಕಾರಿ ಪ್ರೌಢ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಮೋಹನಬಾಬು ಡಿ. ಮೂಲತಃ ಹಾಸನದ ಮೊಸಳೆಹೊಸಳ್ಳಿಯವರು. ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ, ಹಾಸನದಲ್ಲಿ ಉನ್ನತ ವಿದ್ಯಾಭ್ಯಾಸ, ಹಾಸನದ ಕೆ.ಎಂ.ಎಚ್.ಎಸ್ ವಿದ್ಯಾಸಂಸ್ಥೆಯಲ್ಲಿ ಬಿ.ಎಡ್. ತರಬೇತಿ ಪಡೆದರು. ೨೦೦೪ ಜ.೩೦ರಂದು ನಡ ಸರಕಾರಿ ಪ್ರೌಢ ಶಾಲೆಯಲ್ಲಿ ಹಿಂದಿ ಭಾಷಾ ಸಹಶಿಕ್ಷಕರಾಗಿ ಕರ್ತವ್ಯಕ್ಕೆ ಹಾಜರಾಗಿದ್ದು, ಸತತ ೨೦ ವರ್ಷದಿಂದ ಅದೇ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲವು ತಿಂಗಳಿನಿಂದ ಪ್ರಭಾರ ಮುಖ್ಯಶಿಕ್ಷಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ೨೦೧೯ರಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಥಮ ಬಾರಿಗೆ ಹಿಂದಿ ಭಾಷಾ ಸ್ಮಾರ್ಟ್ ಕ್ಲಾಸ್‌ನ್ನು ದಾನಿಗಳ ಸಹಕಾರದೊಂದಿಗೆ ೮ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿದ ಹಿರಿಮೆ ಇವರದು. ಪ್ರಸ್ತುತ ಲಾಯಿಲದಲ್ಲಿ ಪತ್ನಿ ಜಿಪಿಟಿ ಶಿಕ್ಷಕಿಯಾಗಿರುವ ಕೋಕಿಲಾ ಹಾಗೂ ಮಕ್ಕಳಾದ ಮಾನ್ವಿ ಮತ್ತು ಭಾನ್ವಿ ಅವರೊಂದಿಗೆ ನೆಲೆಸಿದ್ದಾರೆ.

ಶಿವರಾಮ ಗೌಡರಿಗೆ ಚಿಕ್ಕಮಗಳೂರಿನ
ಅತ್ಯುತ್ತಮ ಶಿಕ್ಷಕ ಪ್ರಶಸ್ತಿ- ಉಜಿರೆ ಗ್ರಾಮದ ಮಾಚಾರು ಪರಂಗಾಜೆ ದಿ.ಬಾಬು ಗೌಡ ಮತ್ತು ದಿ.ರುಕ್ಮಿಣಿ ದಂಪತಿಯ ಪುತ್ರ, ಮೂಡಿಗೆರೆ ತಾಲೂಕು ಕೊಟ್ಟಿಗೆಹಾರ ಸರಕಾರಿ ಪ್ರೌಢ ಶಾಲೆಯಲ್ಲಿ ಗಣಿತ ಶಿಕ್ಷಕರಾಗಿರುವ ಪಿ.ಶಿವರಾಮ ಗೌಡ ಪರಂಗಾಜೆ ೨೦೨೪-೨೫ನೇ ಸಾಲಿನ ಚಿಕ್ಕಮಗಳೂರು ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬದನಾಜೆ ಮತ್ತು ಉಜಿರೆ ಶ್ರೀ ಧ.ಮಂ. ಶಾಲೆಯಲ್ಲಿ, ಪ್ರೌಢ, ಪದವಿ ಪೂರ್ವ, ಪದವಿ ಶಿಕ್ಷಣವನ್ನು ಉಜಿರೆ ಶ್ರೀ ಧ.ಮಂ. ಕಾಲೇಜಿನಲ್ಲಿ ಪೂರೈಸಿ, ಚಿಕ್ಕಮಗಳೂರಿನ ಎಂ.ಎಲ್. ಎಂ.ಎನ್.ಮಹಾವಿದ್ಯಾಲಯದಲ್ಲಿ ಬಿಎಡ್, ಕುವೆಂಪು ಮಹಾ ವಿದ್ಯಾಲಯದಲ್ಲಿ ಎಂ.ಎಸ್. ಮುಗಿಸಿ ೧೯೯೯ರಿಂದ ೨೦೦೩ರವರೆಗೆ ಬೆಳ್ತಂಗಡಿ ವಾಣಿ ಶಿಕ್ಷಣ ಸಂಸ್ಥೆಯಲ್ಲಿ ಗಣಿತ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಮೂಡಿಗೆರೆ ಹಿರೇಬೈಲ್ ಸರಕಾರಿ ಪ್ರೌಢ ಶಾಲೆಯಲ್ಲಿ, ೨೦೧೦ರಿಂದ ಮೂಡಿಗೆರೆ ಸರಕಾರಿ ಪ.ಪೂ.ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ೧೪ ವರ್ಷ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಕೊಟ್ಟಿಗೆಹಾರ ಸರಕಾರಿ ಪ್ರೌಢ ಶಾಲೆಯಲ್ಲಿ ಗಣಿತ ಶಿಕ್ಷಕರಾಗಿದ್ದಾರೆ. ೧೧ ವರ್ಷ ಮುಖ್ಯಶಿಕ್ಷಕರಾಗಿ ಜವಾಬ್ದಾರಿ, ೨ ವರ್ಷ ಕ್ಲಸ್ಟರ್ ಸಹಾಯಕ ಶಿಕ್ಷಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿರುವುದು ಹಿರಿಮೆ.

Exit mobile version