Site icon Suddi Belthangady

ಹೊಸ್ತೋಟ ಶಾಲೆಗೆ ಕ್ರೀಡಾ ಉಪಕರಣಗಳ ಹಸ್ತಾಂತರ

ಅರಸಿನಮಕ್ಕಿ: ಇಲ್ಲಿನ ಹೊಸ್ತೋಟದ ದ.ಕ.ಜಿ.ಪಂ.ಕಿರಿಯ ಪ್ರಾಥಮಿಕ ಶಾಲೆಗೆ ಅರಸಿನಮಕ್ಕಿ ಮೂಲದ ಪ್ರಸ್ತುತ ಬೆಂಗಳೂರಿನಲ್ಲಿ ಉನ್ನತ ಉದ್ಯೋಗದಲ್ಲಿರುವ ಮಿಥುನ್ ಕಾರಂತ್ ರವರು ಸುಮಾರು 15 ಸಾವಿರ ರೂ. ವೆಚ್ಚದಲ್ಲಿ ಒದಗಿಸಿದ ಕ್ರೀಡಾ ಸಲಕರಣೆಗಳನ್ನು ಸೆ.6ರಂದು ಶಾಲೆಗೆ ಹಸ್ತಾಂತರಿಸಲಾಯಿತು.

ಮಿಥುನ್ ಕಾರಂತ್ರವರ ಹೆತ್ತವರಾದ ತಾ.ಪಂ. ಮಾಜಿ ಸದಸ್ಯರಾದ ಮಂಜುಳಾ ಕಾರಂತ್ – ರಾಜರಾಮ ಕಾರಂತ್ ದಂಪತಿ ಶಾಲೆಯ ಮುಖ್ಯೋಪಾಧ್ಯಾಯರಾದ ಮಾಲತಿಯವರಿಗೆ ಹಸ್ತಾಂತರಿಸಿದರು.ನಂತರ ಮಾತನಾಡಿದ ಮಂಜುಳಾ ಕಾರಂತ್ ರವರು ಗ್ರಾಮೀಣ ಶಾಲೆಯಾದರೂ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸವನ್ನು ನೀಡಿ ಸರ್ವಾಂಗೀಣ ಬೆಳವಣಿಗೆಗೆ ಒತ್ತು ನೀಡಿರುವ ಹೊಸ್ತೋಟ ಶಾಲೆಗೆ ಕ್ರೀಡಾ ಸಾಮಗ್ರಿ ಒದಗಿಸಲು ಹರ್ಷವಾಗುತ್ತಿದೆ. ಮಕ್ಕಳು ಇದರ ಸದುಪಯೋಗಪಡಿಸಿಕೊಂಡು ಉತ್ತಮವಾಗಿ ಕಲಿತು ಶಾಲೆಗೆ ಕೀರ್ತಿ ತರಬೇಕೆಂದರು.

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಮುರಳೀಧರ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿ ಊರಿನ, ಶಾಲೆಯ ಬಗ್ಗೆ ಅಭಿಮಾನ ಹೊಂದಿ ಅಭಿವೃದ್ಧಿಗೆ ಕೈಜೋಡಿಸುವ ಮೂಲಕ ಮಿಥುನ್ರವರು ಮಾದರಿಯಾಗಿದ್ದಾರೆ ಎಂದರು. ಸಮಾರಂಭದಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀಕರ ಭಿಡೆ ವೇದಿಕೆಯಲ್ಲಿದ್ದರು. ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿ ಸಂಘದ ಗಣೇಶ್ ಹೊಸ್ತೋಟ, ಎಸ್ ಡಿ ಎಂ ಸಿ ಸದಸ್ಯರಾದ ಗಣೇಶ್ ಪಲಸ್ತಡ್ಕ, ನೀತಾ ರಾಧೇಶ್, ವೃಷಾಂಕ್ ಖಾಡಿಲ್ಕರ್, ಅಂಗನವಾಡಿ ಕಾರ್ಯಕರ್ತೆ ಭಾರತಿ ಶೆಟ್ಟಿಗಾರ್ ಮೊದಲಾದವರು ಉಪಸ್ಥಿತರಿದ್ದರು.

ಶಾಲಾ ಮುಖ್ಯೋಪಾಧ್ಯಾಯಿನಿ ಮಾಲತಿಯವರು ಸ್ವಾಗತಿಸಿ, ಪ್ರಸ್ತಾವನೆಗೈದರು. ಸಹಶಿಕ್ಷಕಿ ಜಯಂತಿ ವಂದಿಸಿದರು.

Exit mobile version