Site icon Suddi Belthangady

ಉಪ್ಪಿನಂಗಡಿ ಉಪ ವಲಯ ಅರಣ್ಯಾಧಿಕಾರಿಗಳಾದ ಕಮಲ ಹಾಗೂ ಪ್ರಶಾಂತ್ ರವರಿಗೆ ಮುಖ್ಯಮಂತ್ರಿ ಪದಕ ಪುರಸ್ಕಾರ

ಪುತ್ತೂರು: ಉಪ ವಲಯ ಅರಣ್ಯಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಉಪ್ಪಿನಂಗಡಿ ವಲಯದ ಪ್ರತಾಂತ್ ಹಾಗೂ ಕು.ಕಮಲರವರು ಅರಣ್ಯ ರಕ್ಷಣೆ, ಒತ್ತುವರಿ ತೆರವು ಕಾರ್ಯಗಳಲ್ಲಿ ಅಮೋಘ ಸಾಧನೆ ಮಾಡಿರುವುದಕ್ಕೆ 2022-23ನೇ ಸಾಲಿನ ಮುಖ್ಯಮಂತ್ರಿ ಪದಕ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯರವರು ಪ್ರಶಾಂತ್‌ ಹಾಗೂ ಕು.ಕಮಲರವರಿಗೆ ಪದಕವನ್ನು ಹಸ್ತಾಂತರಿಸಿ ಅಭಿನಂದಿಸಿ ಶುಭ ಹಾರೈಸಿದರು.

ಮೂಲತಃ ಉಜಿರೆ ನಿವಾಸಿ ಕು.ಕಮಲರವರು 2005ರಲ್ಲಿ ನೇರ ನೇಮಕಾತಿ ಮೂಲಕ ಬೆಳ್ತಂಗಡಿ ವಲಯದ ಅರಣ್ಯ ವೀಕ್ಷಕರಾಗಿ ನೇಮಕಗೊಂಡು ಬಳಿಕ ಅರಣ್ಯ ರಕ್ಷಕರಾಗಿ ಪದೋನ್ನತಿಗೊಂಡು ಬೆಳ್ತಂಗಡಿ ವಲಯದ ಚಿಬಿದ್ರಿ ತೋಟತ್ತಡಿ, ನೆರಿಯಾ, ಪುದುವೆಟ್ಟು ಇಲ್ಲಿ ಕರ್ತವ್ಯ ನಿರ್ವಹಿಸಿದ್ದರು. 2020ರಲ್ಲಿ ಉಪವಲಯ ಅರಣ್ಯಾಧಿಕಾರಿಯಾಗಿ ಪದೋನ್ನತಿ ಹೊಂದಿ ಉಪ್ಪಿನಂಗಡಿ ವಲಯದ ಶಿಬಾಜೆ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸಿ ಬಳಿಕ ಅಲ್ಲಿಂದ ಮಂಗಳೂರಿನ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಕಛೇರಿಗೆ ವರ್ಗಾವಣೆಗೊಂಡರು. ಪ್ರಸ್ತುತ ಕಮಲರವರು ವಿಶೇಷ ಕರ್ತವ್ಯ ನಿಮಿತ್ತ ಬೆಳ್ತಂಗಡಿ ವಲಯಕ್ಕೆ ನಿಯೋಜನೆಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಬೈಂದೂರು ಗ್ರಾಮದ ಮರವಂತೆ ನಿವಾಸಿಯಾಗಿರುವ ಪ್ರಶಾಂತ್‌ ರವರು 2008ರಲ್ಲಿ ಉಡುಪಿ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯಲ್ಲಿ ಕಾನ್‌ಸ್ಟೇಬಲ್ ಆಗಿ ಕರ್ತವ್ಯಕ್ಕೆ ಸೇರಿದ್ದರು. 2010ರಲ್ಲಿ ಅರಣ್ಯ ಇಲಾಖೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಯಾಗಿ ಕಲಬುರ್ಗಿ ಜಿಲ್ಲೆಯ ಜೇವರ್ಗಿ ನ ಅರಣ್ಯ ವಲಯಕ್ಕೆ ನೇಮಕಗೊಂಡು ನಂತರ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಕುದುರೆಮುಖ ವನ್ಯಜೀವಿನಿಲಯ, ಮೂಡಬಿದ್ರೆ ವಲಯದಲ್ಲಿ ಕರ್ತವ್ಯ ನಿರ್ವಹಿಸಿರುತ್ತಾರೆ. 2015, ಡಿಸೆಂಬರ್ ನಲ್ಲಿ ಉಪ್ಪಿನಂಗಡಿ ವಲಯದ ಕಳೆಂಜ ಶಾಖೆಗೆ ವರ್ಗಾವಣೆಗೊಂಡು ಸತತ 8ವರ್ಷ ಕರ್ತವ್ಯ ನಿರ್ವಹಿಸಿ, 2024ರ ಜುಲೈ 11ರಂದು ವರ್ಗಾವಣೆಗೊಂಡು ಪ್ರಸ್ತುತ ಮಂಗಳೂರು ಅರಣ್ಯ ಸಂಚಾರಿ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Exit mobile version