Site icon Suddi Belthangady

ರಣಾಂಗಣವಾದ ಶಿರ್ಲಾಲು ಗ್ರಾಮಸಭೆ- ದೇವಸ್ಥಾನದ ಹಣ ದುರ್ಬಳಕೆ ವಿಚಾರದಲ್ಲಿ ಹೊಡೆದಾಟ

ಬೆಳ್ತಂಗಡಿ: ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಸಂಗ್ರಹವಾದ ಹಣ ದುರುಪಯೋಗ ಆರೋಪದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಸೆ.3ರಂದು ಶಿರ್ಲಾಲು ಗ್ರಾಮಸಭೆಯಲ್ಲಿ ಹೊಡೆದಾಟ ನಡೆದಿದೆ.

ಶಿರ್ಲಾಲು ಗ್ರಾಮ ಪಂಚಾಯತ್‌ನ 2024-25ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆ ಪಂಚಾಯತ್ ಸಭಾಂಗಣದಲ್ಲಿ ಅಧ್ಯಕ್ಷೆ ಉಷಾ ಎಂ. ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಿತು. ಮಾರ್ಗದರ್ಶಿ ಅಧಿಕಾರಿ ಹೇಮಲತಾ ಸಭೆಯನ್ನು ಮುನ್ನಡೆಸಿದರು.

ಗ್ರಾಮಸ್ಥ ಕುಶಾಲಪ್ಪ ಎಂಬವರು ಕಳೆದ ಗ್ರಾಮಸಭೆಯ ವಿಚಾರ ಮುಂದಿಟ್ಟುಕೊಂಡು ಚರ್ಚೆಗೆ ಮುಂದಾಗಿದ್ದು, ಈ ವೇಳೆ ಗ್ರಾಮಸ್ಥರು ಆಕ್ಷೇಪಿಸಿದ್ದರು. ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದು, ದೇವಸ್ಥಾನದ ಹಣದ ವಿಚಾರ ಚರ್ಚೆಗೆ ಬಂತು. ಈ ಸಂದರ್ಭ ಮಾತಿಗೆ ಮಾತು ಬೆಳೆದು, ಹೊಯ್ಕೈ ನಡೆದಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಹೊಡೆದಾಟವೂ ನಡೆಯಿತು. ಪೊಲೀಸರ ಮಧ್ಯಪ್ರವೇಶ ಬಳಿಕ ಪರಿಸ್ಥಿತಿ ಹತೋಟಿಗೆ ಬಂತು. ಕೆಲವು ಕಾರ್ಯಕರ್ತರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ದೇವಸ್ಥಾನದ ಹಣ ಮುಟ್ಟಿಲ್ಲ: ಶಿರ್ಲಾಲು ದೇವಸ್ಥಾನದ ಬ್ರಹ್ಮಕಲಶೋತ್ಸವದ ಹಣ ಹೊಡೆದಿದ್ದಾರೆ ಎಂದು ಕುಶಾಲಪ್ಪ ಗೌಡರ ಮೇಲೆ ಹಲವರು ಪದೇಪದೆ ಆರೋಪಿಸಿದರು. ಈ ವೇಳೆ ಸ್ಪಷ್ಟನೆ ನೀಡಿದ ಕುಶಾಲಪ್ಪ ಗೌಡ ಸಮರ್ಥನೆ ನೀಡಲು ಮುಂದಾದರು. ನಾನು ದೇವಸ್ಥಾನದ ಒಂದೇ ಒಂದು ರೂಪಾಯಿ ಲಪಟಾಯಿಸಿಲ್ಲ. 12 ಲಕ್ಷ ರೂ. ಹಣವನ್ನು ದೇವಸ್ಥಾನದ ಖಾತೆಗೆ ಜಮಾ ಮಾಡಿದ್ದೇನೆ. ಬ್ರಹ್ಮಕಲಶೋತ್ಸವ ಸಮಿತಿಯು ನೀಡಿರುವ ಖಾತೆಗೇ ಹಣ ಹಾಕಿದ್ದೇನೆ. ಇದರಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದರು.

Exit mobile version