ಕಾಶಿಪಟ್ಣ: ಸ.ಹಿ.ಪ್ರಾ. ಶಾಲೆಯ ಕೋಣೆಗಳ ಮೇಲ್ಛಾವಣಿ ಸೆ.1ರಂದು ರಾತ್ರಿ ಸುರಿದ ಭಾರಿ ಮಳೆಗೆ ಕುಸಿದಿದ್ದು ಇದರ ದುರಸ್ತಿ ಕಾರ್ಯ ಮತ್ತು 4 ಹೊಸ ತರಗತಿಗಳನ್ನು ಮಂಜೂರುಗೊಳಿಸುವಂತೆ ಶಾಸಕ ಹರೀಶ್ ಪೂಂಜ ಹಾಗೂ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವಾರಂ ರವರಿಗೆ ಶಾಲಾ ಅಧ್ಯಕ್ಷರು, ಮುಖ್ಯೋಪಾಧ್ಯಾಯರು ಮನವಿಯನ್ನು ಸಲ್ಲಿಸಿದರು.
ಕಾಶಿಪಟ್ಣ ಸ.ಹಿ.ಪ್ರಾ. ಶಾಲೆಯು 1951ರಲ್ಲಿ ಸ್ಥಾಪನೆಯಾಗಿದ್ದು 2025-26ನೇ ಸಾಲಿಗೆ 75 ವರ್ಷಗಳು ಪೂರೈಸಿರುತ್ತದೆ. ಪ್ರಸುತ್ತ ಶೈಕ್ಷಣಿಕ ವರ್ಷದಲ್ಲಿ 162 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಶಾಲೆಯ 4 ತರಗತಿಗಳನ್ನು ನಡೆಸುತ್ತಿರುವ ತರಗತಿ ಕೋಣೆಗಳ ಛಾವಣಿ ಸೆ.1ರಂದು ರಾತ್ರಿ ಕುಸಿದಿರುತ್ತದೆ. ಕುಸಿದಿರುವ ತರಗತಿ ಕೋಣೆಗಳಲ್ಲಿ ತರಗತಿಗಳನ್ನು ನಡೆಸಲು ಅಸಾಧ್ಯವಾಗಿರುತ್ತದೆ. ಆದುದರಿಂದ ಸದ್ರಿ ಶಾಲೆಯ 4 ತರಗತಿ ಕೋಣೆಗಳ ಛಾವಣಿ ದುರಸ್ತಿ ಮಾಡಬೇಕಾಗಿರುವುದರಿಂದ ಅದಕ್ಕೆ ಬೇಕಾಗಿರುವ ಅನುದಾನವನ್ನು ಮಂಜೂರುಗೊಳಿಸಬೇಕಾಗಿ ವಿನಂತಿಸುತ್ತಿದ್ದೇವೆ. ಅಲ್ಲದೆ ಸದ್ರಿ ಶಾಲೆಗೆ 4 ಹೊಸ ತರಗತಿ ಕೋಣೆಗಳ ಅವಶ್ಯಕತೆ ಇರುವುದರಿಂದ ಮಂಜೂರುಗೊಳಿಸಬೇಕಾಗಿ ಸತೀಶ್ ಕಾಶಿಪಟ್ಣ ವಿನಂತಿಸಿದ್ದಾರೆ.