Site icon Suddi Belthangady

ಗುರುವಾಯನಕೆರೆ: ಎಕ್ಸೆಲ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ವತಿಯಿಂದ ಹೂಡಿಕೆದಾರರ ಜಾಗೃತಿ ಕಾರ್ಯಕ್ರಮ

ಗುರುವಾಯನಕೆರೆ: ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗ ಮತ್ತು ಹೆಚ್.ಡಿ.ಎಫ್.ಸಿ. ಬ್ಯಾಂಕ್ ನ ಮ್ಯೂಚುವಲ್ ಫಂಡ್, ಎ.ಎಸ್.ಆರ್. ಫಿನ್ ಟೆಕ್ ಸಹಯೋಗದೊಂದಿಗೆ ಹೂಡಿಕೆದಾರರ ಜಾಗೃತಿ ಕಾರ್ಯಕ್ರಮವನ್ನು ಕಾಲೇಜಿನ ಶಿಕ್ಷಕ ವೃಂದಕ್ಕೆ ಹಾಗೂ ವಾಣಿಜ್ಯ ವಿಭಾಗದ ಮಕ್ಕಳಿಗಾಗಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಡಾ.ಬಾಲಾಜಿ ರಾವ್ ಡಿ.ಜಿ. ಮಾತನಾಡಿ, ಜನರು ಸಾಮಾನ್ಯವಾಗಿ ತಮ್ಮ ವ್ಯಾಪ್ತಿಗೆ ಬರುವ ಮತ್ತು ಹೆಸರುವಾಸಿಯಾಗಿರುವ ಬೆರಳೆಣಿಕೆಯ ಸಂಸ್ಥೆಗಳಲ್ಲಿ ತಮ್ಮ ಹೂಡಿಕೆ ಚಟುವಟಿಕೆಗಳನ್ನು ನಡೆಸುತ್ತಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಆದಾಯಕ್ಕಿಂತ ಖರ್ಚು ತನ್ನ ಎಲ್ಲೆಯನ್ನು ಮೀರಿ ಬೆಳೆಯುತ್ತಿದೆ. ಹಿಂದಿನ ಕಾಲದಲ್ಲಿ ಹೂಡಿಕೆ ಇಲ್ಲದೇ ಹೋದರೂ ಸಾಲದ ಹೊರೆಯು ಸ್ವಲ್ಪ ಮಟ್ಟಿಗೆ ಮಾತ್ರವೇ ಇರುತ್ತಿತ್ತು. ಈಗಿನ ಕಾಲ ಹಾಗಲ್ಲ. ಬೆಳವಣಿಗೆ, ಅಭಿವೃದ್ಧಿ ಎನ್ನುವ ಮಾತಿನ ಬೆನ್ನಲ್ಲೇ ಅನಿಶ್ಚಿತ ಭವಿಷ್ಯದ ಮೇಲೆ ವಿಪರೀತ ಸಾಲದ ಹೊರೆ ಇರುವುದು. ಇದರಿಂದ ಭವಿಷ್ಯದಲ್ಲಿ ಹಣಕಾಸಿನ ಭದ್ರತೆ ಕಡಿಮೆ ಆಗುತ್ತಿದೆ.ಈ ನಿಟ್ಟಿನಲ್ಲಿ ಹೂಡಿಕೆಯ ಕಡೆಗೂ ಜನರು ಮನಸ್ಸುಮಾಡುವಂತಾಗಬೇಕು. ಉತ್ತಮ ಹೂಡಿಕೆಯು ಸದೃಢ ಭವಿಷ್ಯವನ್ನು ಹೊಂದುವಂತಾಗುವುದು. ಹೂಡಿಕೆಗೆ ವೇದಿಕೆಗಳನ್ನೊದಗಿಸುವ ನಾನಾ ವಿಧದ ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್, ಉಳಿತಾಯ ಕಾರ್ಯಕ್ರಮಗಳು, ಭೂಮಿ ಮತ್ತು ಆಭರಣ ಹೂಡಿಕೆ, ಸಂಸ್ಥೆಯ ಮೇಲಿನ ಹೂಡಿಕೆಗಳಿವೆ. ಇವೆಲ್ಲದರಲ್ಲಿ ಆಸಕ್ತಿ ಹೊಂದಿದ್ದು, ಪ್ರಚಲಿತ ಮಾಹಿತಿಯನ್ನು ಪಡೆಯುತ್ತಿರಬೇಕು. ಹೂಡಿಕೆ ಬಗೆಗೆ ಪ್ರಾದೇಶಿಕವಾಗಿ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ನಮ್ಮ ಬ್ಯಾಂಕ್ ಬಹಳಷ್ಟು ಮುತುವರ್ಜಿಯನ್ನು ವಹಿಸಿಕೊಳ್ಳುತ್ತಿದೆ ಎಂದರು.

ಟಿ.ವಿ. ಶ್ರೀಧರ್ ರಾವ್ ವಿದ್ಯಾರ್ಥಿಗಳನ್ನುದ್ದೇಶಿಸಿ, ಎಳೆಯ ವಯಸ್ಸಿನಲ್ಲೇ ಹೂಡಿಕೆಯ ಬಗೆಗೆ ಆಸಕ್ತಿ ತುಂಬುವುದು ಶ್ಲಾಘನೀಯ ಕಾರ್ಯ. ಅನಿರ್ದಿಷ್ಟ ಭವಿಷ್ಯದಲ್ಲಿ ನಮ್ಮ ಭದ್ರತೆಗಾಗಿ ಉಳಿತಾಯ ಮನೋಭಾವ ಬೆಳೆಸಿಕೊಳ್ಳುವುದು ಬಹಳ ಮುಖ್ಯವಾಗಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಪ್ರಭಾರ ಪ್ರಾಚಾರ್ಯರಾದ ಡಾ.ಪ್ರಜ್ವಲ್, ಆಡಳಿತಾಧಿಕಾರಿ ಕೀರ್ತಿನಿಧಿ ಜೈನ್, ವಾಣಿಜ್ಯ ವಿಭಾಗದ ಡೀನ್ ಸಂತೋಷ್ ಕೆಕೆ, ವಿಭಾಗ ಮುಖ್ಯಸ್ಥರಾದ ಪ್ರಸನ್ನ, ಸಂಖ್ಯಾಶಾಸ್ತ್ರ ಉಪನ್ಯಾಸಕ ರವಿ ಉಪಸ್ಥಿತರಿದ್ದರು.ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿನಿ ಕು.ಅಭಿಷ್ಠ ಶೆಟ್ಟಿ, ವಂದನೆಯನ್ನು ಕು.ಚೇತನಾ ಮಾಡಿದರು.

Exit mobile version