Site icon Suddi Belthangady

ಪತ್ರಿಕಾಗೋಷ್ಠಿ- ಸೆ.8: ಮುಗೇರಡ್ಕ ಸರಕಾರಿ ಶಾಲಾ ಸೇವಾ ಟ್ರಸ್ಟ್ ಉದ್ಘಾಟನೆ, ಮಾಹಿತಿ ಕಾರ್ಯಾಗಾರ

ಬೆಳ್ತಂಗಡಿ: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೊಗ್ರು ಇದರ ಅಭಿವೃದ್ಧಿಗಾಗಿ ನೂತನವಾಗಿ ರಚನೆಗೊಂಡ ಮುಗೇರಡ್ಕ ಸರಕಾರಿ ಶಾಲಾ ಸೇವಾ ಟ್ರಸ್ಟ್ ಮೊಗ್ರು ಇದರ ಉದ್ಘಾಟನೆ ಹಾಗೂ ಶೈಕ್ಷಣಿಕ ಸಾಧನೆಗೆ ಸರಕಾರಿ ಸೌಲಭ್ಯಗಳ ಮಾಹಿತಿ ಕಾರ್ಯಾಗಾರ ಸೆ.8ರಂದು ನಡೆಯಲಿದೆ ಎಂದು ನೂತನ ಟ್ರಸ್ಟ್ ಅಧ್ಯಕ್ಷ ಯೋಗ ಗುರು ಕುಶಾಲಪ್ಪ ಗೌಡ ನೆಕ್ಕರಜೆ ಹೇಳಿದರು. ಅವರು ಸೆ.2ರಂದು ಬೆಳ್ತಂಗಡಿ ಪತ್ರಿಕಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಮುಂದಿನ ಶೈಕ್ಷಣಿಕ ವರ್ಷದಿಂದ ಈ ಶಾಲೆಯನ್ನು ಇಂಗ್ಲಿಷ್ ಮಾಧ್ಯಮ ಶಿಕ್ಷಣ ಪ್ರಾರಂಭ ಮಾಡುವರೇ 16 ಸದಸ್ಯರನ್ನು ಒಳಗೊಂಡ ನೂತನ ಟ್ರಸ್ಟ್ ರಚನೆ ಮಾಡಲಾಗಿದ್ದು ಇದರ ಉದ್ಘಾಟನೆ ಹಾಗೂ ಉನ್ನತ ಹಾಗೂ ಗುಣಮಟ್ಟದ ಶಿಕ್ಷಣ ಪಡೆಯಲು ರಾಜ್ಯ ಮತ್ತು ಕೆಂದ್ರ ಸರಕಾರದ ವಿವಿಧ ಸೌಲಭ್ಯಗಳ ಮಾಹಿತಿ ನೀಡಲು ನಾಲ್ಕು ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಕಾರ್ಯಾಗಾರ ಆಯೋಜಿಸಲಾಗಿದೆ.

ಸರಕಾರಿ ಶಾಲೆಯನ್ನು ಉಳಿಸಿ ಬೆಳೆಸುವುದು ಈ ಕುರಿತು ಪುರುಷೋತ್ತಮ ಅಂಚನ್, ಸರಕಾರಿ ಶಾಲಾ ಸೌಲಭ್ಯಗಳು ಹಾಗೂ ಇಲಾಖೆಗಳು ಬಗ್ಗೆ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ವಾರಿಜ, ಉನ್ನತ ಶಿಕ್ಷಣ ಸಾಧನೆಗೆ ಹಲವು ದಾರಿ ಕುರಿತು ಶಿಕ್ಷಕ ಕುಶಾಲಪ್ಪ ಗೌಡ, ಡಿಜಿಟಲ್ ಮಾಧ್ಯಮ ಮತ್ತು ಶಿಕ್ಷಣ ಕುರಿತು ಮಂಗಳೂರು ಶಿಕ್ಷಕಿ ದೀಕ್ಷಾ ಪ್ರಸಾದ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಉದ್ಘಾಟನೆಯನ್ನು ಉಜಿರೆ ಲಕ್ಷ್ಮೀ ಇಂಡಸ್ಟ್ರಿಸ್ ಕೆ.ಮೋಹನ್ ಕುಮಾರ್ ನೆರವೇರಿಸಲಿದ್ದಾರೆ. ಶಾಸಕ ಹರೀಶ್ ಪೂಂಜ, ಪುರುಷೋತ್ತಮ್ ಅಂಚನ್, ಡಾ.ಅಶ್ವಿನಿ ಶೆಟ್ಟಿ, ಮುಗೇರಡ್ಕದ ಆಡಳಿತ ಮೊಕ್ತೇಸರ ರಾಮಣ್ಣ ಗೌಡ, ಪದ್ಮುಂಜ ಸಹಕಾರ ಸಂಘದ ಅಧ್ಯಕ್ಷ ರಕ್ಷಿತ್ ಪಣೇಕ್ಕರ್, ಮುಖ್ಯ ಶಿಕ್ಷಕ ಸತ್ಯಶಂಕರ ಭಟ್, ಬಂದಾರು ಗ್ರಾ.ಪಂ.ಅಧ್ಯಕ್ಷ ದಿನೇಶ್ ಗೌಡ, ಬ್ಯಾಂಕ್ ಉದ್ಯೋಗಿ ಪುರಂದರ ಪಿ ಮೊದಲದವರು ಭಾಗವಸಲಿದ್ದಾರೆ ಎಂದರು.

ಟ್ರಷ್ಟಿ ಸುಧಾಕರ ನಾಯಿಮಾರ್ ಮಾತನಾಡಿ 70 ವರ್ಷಗಳ ಮೊಗ್ರು ಮುಗೇರಡ್ಕ ಶಾಲೆಯನ್ನು ಅಭಿವೃದ್ಧಿ ಪಡಿಸಿ ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ಟ್ರಸ್ಟ್ ರಚನೆ ಮಾಡಲಾಗಿದೆ ವಿದ್ಯಾಭಿಮಾನಿಗಳ, ದಾನಿಗಳ ಸಹಕಾರದೊಂದಿಗೆ ಸರಕಾರಿ ಶಾಲೆಗೆ ಮೂಲ ಸೌಕರ್ಯವನ್ನು ಒದಗಿಸಿ ಆಧುನಿಕ ಪದ್ದತಿಯ ಶಿಕ್ಷಣ, ಸಾಮಗ್ರಿ ಹಾಗೂ ಗ್ರಾಮೀಣ ಪ್ರತಿಭೆಗಳಿಗೆ ಆಂಗ್ಲ ಭಾಷೆಯ ಶಿಕ್ಷಣವನ್ನು ಒದಗಿಸುವ ಉದ್ದೇಶವಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ಕಾರ್ಯದರ್ಶಿ ಮನೋಹರ ಗೌಡ ಅಂತರ, ಕೋಶಾಧಿಕಾರಿ ಪುರಂದರ ನಾಯಿಮಾರ್, ಸಂಚಾಲಕ ಭರತೇಶ್ ಜಾಲ್ನಡೆ ಉಪಸ್ಥಿತರಿದ್ದರು.

Exit mobile version