Site icon Suddi Belthangady

ನಿವೃತ್ತ ಶಿಕ್ಷಕ ಬೆಳಾಲಿನ ಬಾಲಕೃಷ್ಣ ಬಡೆಕ್ಕಿಲಾಯರ ಮರ್ಡರ್- ಅಳಿಯ ರಾಘವೇಂದ್ರ ಕೆದಿಲಾಯ, ಮೊಮ್ಮಗ ಮುರಳಿಕೃಷ್ಣ ಅರೆಸ್ಟ್- ಆಸ್ತಿ, ಚಿನ್ನಾಭರಣದ ಆಸೆಗಾಗಿ ಕ್ರೂರ ಕೃತ್ಯ ಎಸಗಿದ ತಂದೆ, ಮಗನಿಗೆ ಆ.೩೧ರವರೆಗೆ ಪೊಲೀಸ್ ಕಸ್ಟಡಿ ವಿಧಿಸಿದ ನ್ಯಾಯಾಲಯ: ತನಿಖೆ ಚುರುಕು

ಬೆಳ್ತಂಗಡಿ: ಬೆಳಾಲು ಗ್ರಾಮದ ಎಸ್.ಪಿ.ಬಿ. ಕಂಪೌಂಡ್ ನಿವಾಸಿಯಾಗಿದ್ದ ನಿವೃತ್ತ ಮುಖ್ಯ ಶಿಕ್ಷಕ ಎಸ್.ಪಿ.ಬಾಲಕೃಷ್ಣ ಬಡೆಕ್ಕಿಲ್ಲಾಯ (೮೩ವ)ರವರನ್ನು ಆ.೨೦ರಂದು ಮಧ್ಯಾಹ್ನ ಅವರ ಮನೆಯಲ್ಲಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾ ಬದಿಯಡ್ಕ ವಡಂಬಳೆದ ರಾಘವೇಂದ್ರ ಕೆದಿಲಾಯ(೫೩ವ) ಮತ್ತು ಮುರಳಿಕೃಷ್ಣ(೨೦ವ)ರವರನ್ನು ಧರ್ಮಸ್ಥಳ ಠಾಣಾ ಪೊಲೀಸರು ಆ.೨೪ರಂದು ಬಂಧಿಸಿದ್ದಾರೆ. ಕೊಲೆಗೀಡಾದ ಬಾಲಕೃಷ್ಣ ಬಡೆಕ್ಕಿಲಾಯ ಅವರ ಮಗಳು ವಿಜಯಲಕ್ಷ್ಮಿ ಅವರ ಗಂಡ ರಾಘವೇಂದ್ರ ಕೆದಿಲಾಯ ಮತ್ತು ಮಗ ಮುರಳೀಕೃಷ್ಣ ಅವರು ಆಸ್ತಿ ಹಾಗೂ ಚಿನ್ನಾಭರಣದ ಆಸೆಗಾಗಿ ಈ ಕೃತ್ಯ ಎಸಗಿರುವುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ. ಆ.೨೪ರ ಸಂಜೆಯಿಂದ ನ್ಯಾಯಾಂಗ ಬಂಧನದಲ್ಲಿದ್ದ ರಾಘವೇಂದ್ರ ಕೆದಿಲಾಯ ಮತ್ತು ಮುರಳಿಕೃಷ್ಣನನ್ನು ಆ.೨೭ರಂದು ಬೆಳಿಗ್ಗೆ ಸರ್ಕಲ್ ಇನ್ಸ್‌ಪೆಕ್ಟರ್ ನಾಗೇಶ್ ಕದ್ರಿ ನೇತೃತ್ವದಲ್ಲಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಈ ವೇಳೆ ಪ್ರಕರಣದ ಹೆಚ್ಚಿನ ತನಿಖೆಗಾಗಿ ಆರೋಪಿಗಳನ್ನು ಏಳು ದಿನ ಪೊಲೀಸ್ ಕಸ್ಟಡಿಗೆ ನೀಡುವಂತೆ ಸಹಾಯಕ ಸರಕಾರಿ ಅಭಿಯೋಜಕರ ಮೂಲಕ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಯಿತು. ನ್ಯಾಯಾಧೀಶ ವಿಜಯೇಂದ್ರ ಅವರು ಆರೋಪಿಗಳನ್ನು ಐದು ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸುವುದಾಗಿ ತಿಳಿಸಿದರಲ್ಲದೆ ಬಂಧಿತರನ್ನು ಆ.೩೧ರಂದು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸೂಚಿಸಿದರು. ಪೊಲೀಸ್ ಕಸ್ಟಡಿಯಲ್ಲಿ ಆರೋಪಿಗಳ ತೀವ್ರ ವಿಚಾರಣೆ ನಡೆಸಲಾಗುತ್ತಿದ್ದು ಬಂಧಿತರನ್ನು ಘಟನಾ ಸ್ಥಳಕ್ಕೆ ಕರೆದುಕೊಂಡು ಹೋಗಿ ಮಹಜರು ನಡೆಸಿ ಹೆಚ್ಚಿನ ಸಾಕ್ಷ್ಯಾಧಾರಗಳನ್ನು ಕಲೆ ಹಾಕಲಾಗಿದೆ.
ನಿವೃತ್ತ ಮುಖ್ಯ ಶಿಕ್ಷಕ ಬಾಲಕೃಷ್ಣ ಬಡೆಕ್ಕಿಲ್ಲಾಯರ ಬರ್ಬರ ಹತ್ಯೆ: ನಿವೃತ್ತ ಮುಖ್ಯ ಶಿಕ್ಷಕ ಎಸ್.ಪಿ.ಬಾಲಕೃಷ್ಣ ಬಡೆಕ್ಕಿಲ್ಲಾಯ ಅವರು ಆ.೨೦ರಂದು ಮಧ್ಯಾಹ್ನದ ಬಳಿಕ ಬೆಳಾಲು ಗ್ರಾಮದಲ್ಲಿರುವ ತಮ್ಮ ಎಸ್.ಪಿ.ಬಿ. ಕಂಪೌಂಡ್‌ನ ಮನೆಯ ಅಡುಗೆ ಕೋಣೆಯಲ್ಲಿದ್ದಾಗ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದರು. ದಾಳಿಯಿಂದ ತಪ್ಪಿಸಿಕೊಳ್ಳಲು ಮನೆಯ ಅಂಗಳಕ್ಕೆ ಓಡಿ ಬಂದಿದ್ದ ಅವರ ಕುತ್ತಿಗೆ, ಕೈಗೆ, ತಲೆಗೆ ದಾಳಿ ಮಾಡಿದ್ದರಿಂದ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಈ ಬಗ್ಗೆ ಅವರ ಕಿರಿಯ ಮಗ ಪುತ್ತೂರಿನಲ್ಲಿ ರಿಲಯನ್ಸ್ ಸಮೂಹದ ಸಂಸ್ಥೆಯಲ್ಲಿ ಸಿಬ್ಬಂದಿಯಾಗಿರುವ ಸುರೇಶ್ ಭಟ್ ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಪರಿಚಿತರಿಂದ ಕೊಲೆ ಪ್ರಕರಣ ದಾಖಲಾಗಿತ್ತು. ಅದೇ ದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮರು ದಿನ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಅವರು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದರಲ್ಲದೆ ತನಿಖೆ ಚುರುಕುಗೊಳಿಸಿ ಹಂತಕರನ್ನು ಪತ್ತೆ ಹಚ್ಚುವಂತೆ ಬಂಟ್ವಾಳ ಡಿವೈಎಸ್‌ಪಿ ವಿಜಯ ಪ್ರಸಾದ್ ಮತ್ತು ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ನೇತೃತ್ವದ ತನಿಖಾ ತಂಡಕ್ಕೆ ಸೂಚಿಸಿದ್ದರು. ಆ ನಂತರ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಲಾಗಿತ್ತು.
ಸುಳಿವು ನೀಡಿದ್ದ ಶ್ವಾನ: ಕೊಲೆ ಬಳಿಕ ಮಂಗಳೂರಿನಿಂದ ಶ್ವಾನದಳ ಘಟನಾ ಸ್ಥಳಕ್ಕೆ ಬಂದಿತ್ತು. ಶ್ವಾನ ಮನೆಯೊಳಗಿಂದ ಆರೋಪಿಗಳ ಸುಳಿವಿಗಾಗಿ ವಾಸನೆ ಹಿಡಿದು ಅಂಗಳದಲ್ಲಿ ಕೊಲೆಯಾಗಿ ಬಿದ್ದ ಜಾಗ ಹಾಗೂ ಊಟ ಮಾಡಿ ಬಾವಿ ಬಳಿ ತೆಂಗಿನ ಬುಡಕ್ಕೆ ಬಿಸಾಕಿದ ಎರಡು ಬಾಳೆ ಎಲೆ ಕಡೆಗೆ ಹೋಗಿ ಬಳಿಕ ಅಲ್ಲಿಂದ ರಸ್ತೆಗೆ ಹೋಗಿರುವ ಬಗ್ಗೆ ಸುಳಿವು ನೀಡಿತ್ತು. ಪೊಲೀಸ್ ಇಲಾಖೆಯ ಶ್ವಾನ ಬ್ರೇವ್ ಪೊಲೀಸರಿಗೆ ಅಲ್ಲಿಯೇ ಮೊದಲ ಸುಳಿವು ಕೊಟ್ಟಿತ್ತು. ಕುಟುಂಬದೊಳಗಿನವರೇ ಮನೆಗೆ ಬಂದು ಊಟ ಮತ್ತು ಚಾ ಕುಡಿದು ಕೃತ್ಯ ಎಸಗಿರುವ ಬಗ್ಗೆ ಬಲವಾದ ಸಂಶಯ ಮೂಡಿತ್ತು. ಇದರಿಂದ ಕುಟುಂಬದ ಸದಸ್ಯರ ಮೊಬೈಲ್ ಫೋನ್ ನಂಬರ್ ಪಡೆದು ಕಾರ್ಯಾಚರಣೆ ನಡೆಸಿದಾಗ ಪೊಲೀಸರಿಗೆ ಕೊಲೆಗೀಡಾದ ಬಾಲಕೃಷ್ಣ ಬಡೆಕ್ಕಿಲ್ಲಾಯರವರ ಮಗಳು ವಿಜಯಲಕ್ಷ್ಮಿ ಅವರ ಗಂಡ ರಾಘವೇಂದ್ರ ಕೆದಿಲಾಯ ಮತ್ತು ಮಗ ಮುರಳಿಕೃಷ್ಣರ ಮೇಲೆ ಸಂಶಯ ಮೂಡಿತ್ತು. ಅದರಂತೆ ಕಾರ್ಯಾಚರಣೆ ಮುಂದುವರಿದಿತ್ತು.
ಆಸ್ತಿ, ಚಿನ್ನಕ್ಕಾಗಿ ಕೊಲೆಗೆ ಪ್ಲ್ಯಾನ್ ಮಾಡಿಕೊಂಡೇ ಕಾಸರಗೋಡಿನಿಂದ ಬೆಳಾಲಿಗೆ ಬಂದಿದ್ದರು-ಊಟ ಮಾಡಿ ಚಹಾ ಕುಡಿದ ನಂತರ ಬಲಿ ಪಡೆದಿದ್ದರು: ರಾಘವೇಂದ್ರ ಕೆದಿಲಾಯ ತನ್ನ ಮಗ ಮುರಳಿಕೃಷ್ಣನ ಜೊತೆಗೆ ಬಾಲಕೃಷ್ಣ ಬಡೆಕಿಲ್ಲಾಯ ಅವರ ಮನೆಗೆ ಕೊಲೆಗೆ ಪ್ಲ್ಯಾನ್ ಮಾಡಿಕೊಂಡೇ ಬಂದಿದ್ದರು. ಆಸ್ತಿ ಮತ್ತು ಚಿನ್ನಕ್ಕಾಗಿ ಕೊಲೆ ಮಾಡುವ ಯೋಜನೆ ರೂಪಿಸಿ ಬಂದಿದ್ದ ತಂದೆ ಮತ್ತು ಮಗ ಊಟ ಮಾಡಿದ ಬಳಿಕ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಬಾಲಕೃಷ್ಣ ಬಡೆಕ್ಕಿಲ್ಲಾಯ ಅವರ ಜಾಗ ಮತ್ತು ಮೂರು ವರ್ಷದ ಹಿಂದೆ ಮೃತಪಟ್ಟಿದ್ದ ಅವರ ಪತ್ನಿ, ನಿವೃತ್ತ ಶಿಕ್ಷಕಿ ಯು.ಲೀಲಾ ಅವರ ಚಿನ್ನವನ್ನು ಮಗಳು ವಿಜಯಲಕ್ಷ್ಮಿಗೆ ಪಾಲು ನೀಡದೆ ಅದನ್ನು ಬ್ಯಾಂಕ್ ಲಾಕರ್‌ನಲ್ಲಿ ಇಟ್ಟಿದ್ದ ಕಾರಣದಿಂದ ಬಾಲಕೃಷ್ಣ ಬಡೆಕ್ಕಿಲ್ಲಾಯರ ಅಳಿಯ ಮತ್ತು ಮೊಮ್ಮಗ ಕೋಪದಲ್ಲಿ ಕೊಲೆ ಮಾಡಲು ಯೋಜಿಸಿ ತಂದೆ ಮತ್ತು ಮಗ ಕಾಸರಗೋಡಿನ ತಮ್ಮ ಮನೆಯಿಂದ ಮಾರಕಾಸ್ತ್ರದೊಂದಿಗೆ ಹೊರಟು ಬಂದಿದ್ದರು. ರಾಘವೇಂದ್ರ ಕೆದಿಲಾಯ ಪತ್ನಿ ವಿಜಯಲಕ್ಷ್ಮಿ ಅವರ ಸ್ಕೂಟರ್‌ನಲ್ಲಿ ಬಂದಿದ್ದರೆ ಮುರಳೀಕೃಷ್ಣ ತನ್ನ ಬೈಕ್‌ನಲ್ಲಿ ಮಂಗಳೂರಿಗೆ ಬಂದಿದ್ದ. ಮಂಗಳೂರಿನಲ್ಲಿ ಬೈಕ್ ನಿಲ್ಲಿಸಿ ಅಲ್ಲಿಂದ ಒಂದೇ ಸ್ಕೂಟರಿನಲ್ಲಿ ಅಪ್ಪ ಮತ್ತು ಮಗ ಬೆಳಾಲಿಗೆ ಬಂದು ಬಾಲಕೃಷ್ಣ ಬಡೆಕ್ಕಿಲ್ಲಾಯರವರನ್ನು ಬಲಿ ಪಡೆದಿದ್ದಾರೆ ಎಂದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ.
ಅಳಿಯ ಮತ್ತು ಮೊಮ್ಮಗ ಮನೆಗೆ ಬಂದ ಖುಷಿಯಲ್ಲಿ ಬಾಲಕೃಷ್ಣ ಬಡೆಕ್ಕಿಲ್ಲಾಯ ಅವರು ಅವರಿಗೆ ಬಾಳೆಲೆಯಲ್ಲಿ ಊಟ ಬಡಿಸಿದ್ದಾರೆ. ಊಟ ಮಾಡಿ ಚಹಾ ಕುಡಿದ ಬಳಿಕ ತಾವು ತಂದಿದ್ದ ಆಯುಧದಿಂದ ಮೊಮ್ಮಗ ಮುರಳಿಕೃಷ್ಣ ಹಿಂಬದಿಯಿಂದ ಬಾಲಕೃಷ್ಣ ಬಡೆಕ್ಕಿಲ್ಲಾಯರ ಕುತ್ತಿಗೆಗೆ ಕಡಿದಿದ್ದಾನೆ. ಈ ವೇಳೆ ಅಡುಗೆ ಕೋಣೆಯಿಂದ ತಪ್ಪಿಸಿಕೊಂಡು ಮನೆಯ ಅಂಗಳಕ್ಕೆ ಬಂದಾಗ ಮತ್ತೆ ದಾಳಿ ಮಾಡಲಾಗಿದೆ. ಬಳಿಕ ನಳ್ಳಿ ನೀರಿನ ಕೆಳಗೆ ಹಾಕಿದ್ದ ಹಾಸು ಕಲ್ಲನ್ನು ತಲೆಯ ಮೇಲೆ ಇಟ್ಟು ಬಳಿಕ ಅಲ್ಲಿಂದ ಸ್ಕೂಟರ್‌ನಲ್ಲಿಯೇ ಕಾಸರಗೋಡಿನ ಮುಳ್ಳೇರಿಯಾದ ವಡಂಬಳೆದಲ್ಲಿರುವ ಮನೆಗೆ ಸೇರಿದ್ದರು ಎಂದು ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ ೬೨ರಂತೆ ಕಲಂ ೧೦೩ ಬಿಎನ್‌ಎಸ್‌ನಡಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಹಂತಕರಿಂದ ಕೊಲೆ ಕೃತ್ಯದ ಸಂಪೂರ್ಣ ಮಾಹಿತಿ ಪಡೆದ ನಂತರ ಆ. ೨೪ರಂದು ಸಂಜೆ ಬೆಳ್ತಂಗಡಿಯ ನ್ಯಾಯಾಧೀಶರ ಎದುರು ಬಂಧಿತರನ್ನು ಹಾಜರುಪಡಿಸಿದ್ದರು. ಈ ವೇಳೆ ನ್ಯಾಯಾಧೀಶರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಆ.೨೭ರಂದು ಮತ್ತೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಬಂಧಿತರನ್ನು ಹಾಜರುಪಡಿಸಲಾಗಿದ್ದು ಆ.೩೧ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಸುಳಿವು ನೀಡಿದ್ದ ಮಣೆ, ಬಾಳೆ ಎಲೆ !
ಮೃತ ಬಾಲಕೃಷ್ಣ ಬಡೆಕ್ಕಿಲ್ಲಾಯರ ಮನೆಯೊಳಗೆ ಎರಡು ಮಣೆಗಳನ್ನು ಇಟ್ಟಿರುವುದು ಮತ್ತು ಊಟ ಮಾಡಿ ಬಾವಿ ಬಳಿ ತೆಂಗಿನ ಬುಡದಲ್ಲಿ ಎಸೆಯಲಾಗಿದ್ದ ಎರಡು ಬಾಳೆ ಎಲೆಗಳು ಆರೋಪಿಗಳ ಕುರಿತು ಪೊಲೀಸರಿಗೆ ಪ್ರಮುಖ ಸುಳಿವು ನೀಡಿತ್ತು. ಮೃತ ಬಾಲಕೃಷ್ಣರ ಸಂಬಂಧಿಕರು ಇಲ್ಲವೇ ಪರಿಚಿತರು ಮನೆಗೆ ಬಂದು ಊಟ ಮಾಡಿ ಹೋಗಿದ್ದರೆನ್ನುವುದನ್ನು ಪೊಲೀಸರು ಕಂಡುಕೊಂಡಿದ್ದರು. ಮೃತರ ಅಂತ್ಯಕ್ರಿಯೆಗೆ ಅಳಿಯ ರಾಘವೇಂದ್ರ ಬಂದಿದ್ದರೂ ಮೊಮ್ಮಗ ಮುರಳೀಕೃಷ್ಣ ಬಂದಿರಲಿಲ್ಲ. ಇದೂ ಪೊಲೀಸರ ಸಂಶಯ ಪುಷ್ಠೀಕರಿಸಿತ್ತು. ನಂತರದ ಬೆಳವಣಿಗೆಯಲ್ಲಿ ಪೊಲೀಸರು ಘಟನೆ ಸಮಯದಲ್ಲಿ ಆ ವ್ಯಾಪ್ತಿಯಲ್ಲಿ ಬಂದು ಹೋದವರ ಮಾಹಿತಿ ಕಲೆ ಹಾಕಿದ್ದ ವೇಳೆ ಮಹಿಳೆಯೋರ್ವರು ನೀಡಿದ್ದ ಮಾಹಿತಿಯಾಧರಿಸಿ ಆರೋಪಿಗಳ ಕುರಿತ ಕೂ ಪಡೆದುಕೊಂಡ ಪೊಲೀಸರು ತನಿಖೆ ಕೇಂದ್ರೀಕರಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಾಲಕೃಷ್ಣ ಬಡೆಕ್ಕಿಲ್ಲಾಯರ ಕೊಲೆ ಬಳಿಕ ಬೆಳಾಲು ಮನೆಗೆ ಆ.೨೧ರಂದು ಮಧ್ಯಾಹ್ನದ ಬಳಿಕ ಮೃತದೇಹ ನೋಡಲು ಮಗಳು ವಿಜಯಲಕ್ಷ್ಮಿ ಮತ್ತು ಅಳಿಯ ರಾಘವೇಂದ್ರ ಕೆದಿಲಾಯ ಕಾರಿನಲ್ಲಿ ಬಂದಿದ್ದರು. ಮೊಮ್ಮಗ ಮುರಳಿಕೃಷ್ಣ ಬಂದಿರಲಿಲ್ಲ. ತನ್ನ ಗಂಡ ಮತ್ತು ಮಗ ಸೇರಿ ಅಪ್ಪನನ್ನು ಕೊಲೆ ಮಾಡಿದ್ದ ವಿಚಾರ ಮಗಳು ವಿಜಯಲಕ್ಷ್ಮೀ ಅವರಿಗೆ ಗೊತ್ತಿರಲಿಲ್ಲ. ಧರ್ಮಸ್ಥಳ ಠಾಣಾ ಪೊಲೀಸರು ತಮ್ಮ ಮನೆಗೆ ಬಂದು ಗಂಡ ಮತ್ತು ಮಗನನ್ನು ವಶಕ್ಕೆ ಪಡೆದ ಬಳಿಕವೇ ಕೊಲೆ ಮಾಡಿದ ರಹಸ್ಯ ವಿಜಯಲಕ್ಷ್ಮಿ ಅವರಿಗೆ ಗೊತ್ತಾಗಿದೆ ಎನ್ನಲಾಗಿದೆ. ಘಟನೆ ನಡೆದ ಬಳಿಕ ವಿಜಯಲಕ್ಷ್ಮಿ ಅವರು ಪಿಯುಸಿ ಓದುತ್ತಿರುವ ತನ್ನ ಪುತ್ರಿಯೊಂದಿಗೆ ಬೆಳಾಲು ಮನೆಗೆ ಬಂದು ವಾಸ್ತವ್ಯ ಇದ್ದಾರೆ.

ಕಥೆ ಕಟ್ಟಿದ್ದ ಅಪ್ಪ, ಮಗ
ಕೊಲೆ ಕೃತ್ಯ ಎಸಗಿ ತಮ್ಮ ಮನೆಗೆ ಹೋಗಿದ್ದ ಅಪ್ಪ ಮತ್ತು ಮಗ ಅಲ್ಲಿ ಒಂದು ಕಥೆ ಕಟ್ಟಿದ್ದರು. ಏನ್ಮಾಡೋದು ನಮ್ಮ ಮಾವನಿಗೆ ಏನೋ ತೊಂದ್ರೆ ಆಗಿದೆ ಎಂದು ರಾಘವೇಂದ್ರ ಕೆದಿಲಾಯ ಹೇಳಿದ್ರೆ ಯಾರೋ ಹಿಂಬದಿಯಿಂದ ಕಡಿದವ್ರೆ, ಕಲ್ಲು ಎತ್ತಿ ಹಾಕವ್ರೆ ಎಂದು ಮುರುಳಿಕೃಷ್ಣ ಕಥೆ ಕಟ್ಟಿದ್ದನಂತೆ ಎಂದು ತಿಳಿದು ಬಂದಿದೆ.

ಕೋರ್ಟ್ ಆವರಣದಲ್ಲಿ ಫೋಟೋಗೆ
ಫೋಸ್ ಕೊಡಲು ಹೇಳಿದ ತಂದೆ !
ಬೆಳಾಲು ಬಾಲಕೃಷ್ಣ ಭಟ್‌ರವರ ಕೊಲೆ ಆರೋಪಿಗಳಾದ ರಾಘವೇಂದ್ರ ಕೆದಿಲಾಯ ಮತ್ತು ಮುರಳಿಕೃಷ್ಣರವರನ್ನು ಆ.೨೭ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಆರೋಪಿ ತಂದೆ ರಾಘವೇಂದ್ರ ಕೆದಿಲಾಯ ಆರೋಪಿ ಮಗ ಮುರಳಿಕೃಷ್ಣನಿಗೆ ಮಾಧ್ಯಮಗಳಿಗೆ ಫೋಸ್ ಕೊಡಲು ಹೇಳಿದ ಘಟನೆ ನಡೆದಿದೆ. ಕೋರ್ಟ್‌ಗೆ ಹಾಜರುಪಡಿಸಿ ವಾಪಸ್ ಕರೆ ತರುವಾಗ ಪತ್ರಕರ್ತರು ಚಿತ್ರೀಕರಣ ಮಾಡುತ್ತಿದ್ದಾಗ ರಾಘವೇಂದ್ರ ಕೆದಿಲಾಯ ನಿಲ್ಲು ಫೋಟೋಗೆ ಫೋಸ್ ಕೊಡು ಎಂದು ಮಗನಿಗೆ ಹೇಳಿದ ಘಟನೆ ನಡೆದಿದ್ದು ಅಪ್ಪ ಹೇಳಿದಂತೆ ಮಗ ಒಂದು ಕ್ಷಣ ನಿಂತು ಫೋಟೋಗೆ ಫೋಸ್ ನೀಡಿದ್ದಾನೆ.

ಸುರೇಶ್ ಭಟ್ ಕೊಲೆಗೂ ಯೋಜನೆ ರೂಪಿಸಿದ್ದರು
ಬಾಲಕೃಷ್ಣ ಬಡೆಕ್ಕಿಲ್ಲಾಯರವರನ್ನು ಬಲಿ ಪಡೆದ ಅಳಿಯ ರಾಘವೇಂದ್ರ ಕೆದಿಲಾಯ ಮತ್ತು ಮೊಮ್ಮಗ ಮುರಳಿಕೃಷ್ಣ ಅವರು ಬಾಲಕೃಷ್ಣ ಬಡೆಕ್ಕಿಲಾಯರವರ ಕಿರಿಯ ಮಗ ಸುರೇಶ್ ಭಟ್ ಅವರನ್ನು ಕೂಡ ಕೊಲೆ ಮಾಡಲು ಯೋಜನೆ ರೂಪಿಸಿ ಬಂದಿದ್ದರು ಹಾಗೂ ಬಾಲಕೃಷ್ಣ ಬಡೆಕ್ಕಿಲ್ಲಾಯ ಅವರ ಕೊಲೆ ಬಳಿಕ ಸುರೇಶ್ ಭಟ್ ಬರುವಿಕೆಗಾಗಿ ಸ್ವಲ್ಪ ಸಮಯ ಮನೆಯಲ್ಲಿ ಕಾದು ಕುಳಿತ್ತಿದ್ದರು. ಆದರೆ ಸುರೇಶ್ ಭಟ್ ಬಾರದೆ ಇದ್ದುದರಿಂದ ಬಾಲಕೃಷ್ಣ ಭಟ್ ಅವರ ೫೦ ಸಾವಿರ ರೂಪಾಯಿಯ ಎರಡು ಬಾಂಡ್ ಪೇಪರ್ ಹಾಗೂ ಕೆಲವು ದಾಖಲೆಗಳನ್ನು ಕಪಾಟಿನಿಂದ ತೆಗೆದುಕೊಂಡು ಬಂದ ದಾರಿಯಲ್ಲಿ ವಾಪಸ್ ತಮ್ಮ ಮನೆಗೆ ಸ್ಕೂಟರಿನಲ್ಲಿ ಪರಾರಿಯಾಗಿದ್ದರು ಎಂದು ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಬಾಲಕೃಷ್ಣ ಬಡೆಕ್ಕಿಲ್ಲಾಯವರ ಕೊಲೆ ನಡೆದ ಕೂಡಲೇ ಕೆಲವರು ಅವರ ಪುತ್ರ ಸುರೇಶ್ ಭಟ್ ಮೇಲೆಯೇ ಸಂಶಯ ವ್ಯಕ್ತಪಡಿಸಿದ್ದರು. ಇದೇ ನಿಟ್ಟಿನಲ್ಲಿ ಪೊಲೀಸರೂ ಕಣ್ಣಿಟ್ಟಿದ್ದರು. ಆದರೆ ಬಳಿಕ ಈ ಘಟನೆಯಲ್ಲಿ ಸುರೇಶ್ ಭಟ್ ಅವರದ್ದು ಯಾವುದೇ ಪಾತ್ರ ಇಲ್ಲ ಎಂಬುದು ಕಂಡು ಬಂದಿತ್ತು.

ಕಾಸರಗೋಡುಗೆ ತೆರಳಿ ವಿಶೇಷ
ವರದಿ ಮಾಡಿದ ಸುದ್ದಿ ನ್ಯೂಸ್ ತಂಡ
ಅಕ್ಕಪಕ್ಕದವರಿಗೆ ಸಿಕ್ಕಾಪಟ್ಟೆ ತೊಂದರೆ ಕೊಡುತ್ತಿದ್ದರು ತಂದೆ, ಮಗ
ಮುರುಳಿಕೃಷ್ಣನ ವಿರುದ್ಧ ಹಲವು ಕೇಸ್ ಇದ್ದರೂ ಕ್ರಮಕ್ಕೆ ಹಿಂದೇಟು, ಅಜ್ಜನಲ್ಲಿ ನೀರು ಪಡೆದು ಬೆಲ್ಲ ಕೇಳಿ ತಗಾದೆ ತೆಗೆದಿದ್ದ ಮುರಳಿಕೃಷ್ಣ:

ಬಾಲಕೃಷ್ಣ ಭಟ್‌ರವರ ಕೊಲೆಯ ಜಾಡು ಹಿಡಿದು ಸುದ್ದಿ ನ್ಯೂಸ್ ಬೆಳ್ತಂಗಡಿ ತಂಡ ಕೇರಳ ರಾಜ್ಯದ ಕಾಸರಗೋಡಿನ ಬದಿಯಡ್ಕದ ವಡಂಬಳೆಗೆ ತೆರಳಿ ವಿಶೇಷ ವರದಿ ಮಾಡಿದೆ. ಅಲ್ಲಿ ರಾಘವೇಂದ್ರ ಕೆದಿಲಾಯರ ಮನೆಯಿದೆ. ಆದರೆ ಈಗ ಯಾರೂ ಅಲ್ಲಿ ಇಲ್ಲ. ಗೂಡಿನಲ್ಲಿರುವ ಒಂಟಿ ನಾಯಿಗೆ ಯಾರೋ ಸಂಬಂಧಿಕರು ಬಂದು ರಸ್ಕ್, ಬನ್ ಬಿಸ್ಕೆಟ್ ಹಾಕಿದ್ದಾರೆ. ವಡಂಬಳೆಯಲ್ಲಿ ಮುರುಳಿಕೃಷ್ಣನ ಆಟಾಟೋಪದ ಬಗ್ಗೆ ಹಲವಾರು ಆರೋಪಗಳನ್ನು ಮಾಡುವವರು ಇದ್ದಾರೆ. ಅದರಲ್ಲೂ ಪಕ್ಕದ ಮನೆಯವರೇ ಆದ ಬಾಸ್ಕರ ಶೆಟ್ಟಿಯವರು ನಗು ನಗುತ್ತಲೇ ವಿಷ ಹಾಕ್ತಾರೆ ಎಂದು ಬೇಸರದಲ್ಲೇ ಹೇಳಿದ್ದಾರೆ. ಬಾಸ್ಕರ್ ಶೆಟ್ಟಿಯವರ ಕುಟುಂಬವನ್ನು ಓಡಿಸ್ಬೇಕು ಎಂದು ಅವರ ಬಾವಿಗೆ ವಿಷ ಹಾಕಿ ತೋಟಕ್ಕೆ ವಿಷ ಹಾಕಿದ್ರಂತೆ. ಇವರು ಬಾವಿಗೆ ವಿಷ ಹಾಕಿದ್ದರಿಂದ ಮನೆಯಲ್ಲಿದ್ದ ಮಕ್ಕಳು ವಿಲವಿಲ ಒದ್ದಾಡಿದ್ರಂತೆ. ಅಲ್ಲದೆ, ತೋಟದಲ್ಲಿ ೨೫ಕ್ಕೂ ಹೆಚ್ಚು ಗಿಡಗಳು ಸತ್ತಿವೆ. ಜೊತೆಗೆ ಬಾವಿಯ ಪಕ್ಕದಲ್ಲಿದ್ದ ಗಿಡಗಳೆಲ್ಲ ಒಣಗಿ ಹೋಗಿದ್ದು ವಿಷದ ತೀವ್ರತೆಯನ್ನು ಸಾರಿ ಹೇಳುತ್ತದೆ. ಆರೋಪಿ ತಂದೆ ಮತ್ತು ಮಗನ ಬಗ್ಗೆ ಇಡೀ ಊರಿನವರಿಗೆ ಭಯವಿದೆ. ಇವರನ್ನು ಬಿಡಬಾರ್ದು. ಬಿಡಬಾರ್ದು ಎಂದು ಹೇಳ್ತಿದ್ದಾರೆ. ಮುರುಳಿಕೃಷ್ಣನ ಆಕ್ಟಿವಿಟಿ ನೋಡ್ತಿರುವ ಇವರು ಪ್ರತಿನಿತ್ಯ ನೋವನು ಭವಿಸಿದ್ದಾರೆ. ಮುರುಳಿಕೃಷ್ಣ ಗಾಂಜಾದ ಪೆಡ್ಲರ್ ಆಗಿದ್ದಾನೆ ಎಂದು ಗುಸುಗುಸು ಊರಿನಲ್ಲಿದೆ. ಅದರ ಜೊತೆಗೆ ಅದ್ಯಾರೋ ಕೂದಲು ಬಿಟ್ಟವ್ನು ಬರ್ತಾನೆ. ಲೇಟ್ ನೈಟ್ ಹುಡುಗರ ಓಡಾಟವಿದೆ. ಮುರಳಿಕೃಷ್ಣನ ವರ್ತನೆ ಸರಿಯಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ. ಹೀಗೆ ಮಾಹಿತಿ ಪಡೆಯುತ್ತಿರುವಾಗಲೇ ಮುರಳಿಕೃಷ್ಣನ ಆಡಿಯೋ ಒಂದು ಸುದ್ದಿ ತಂಡಕ್ಕೆ ಸಿಕ್ಕಿದೆ. ಅದರಲ್ಲಿ ಮುರುಳಿಕೃಷ್ಣ ನಮ್ಮ ಜತೆ ಆಡ್ಲಿಕ್ಕೆ ಬಂದ್ರೆ ಕತ್ತಿಯಲ್ಲಿ ಕಡಿದು ರಕ್ತ ತೆಗೆದು ಡಾಮರು ರಸ್ತೆಯಲ್ಲಿ ಡಾಟ್ ಹಾಕ್ತೇನೆ ಎನ್ನುವ ವಾಯ್ಸ್ ಇದೆ. ಇದು ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.

ಮುರಳಿಕೃಷ್ಣನ ವಿರುದ್ಧ ಕೇಸ್‌ಗಳಿದೆ: ಅಜ್ಜನನ್ನು ಹತ್ಯೆ ಮಾಡಿರುವ ಮುರಳಿಕೃಷ್ಣನ ವಿರುದ್ಧ ಈ ಹಿಂದೆ ಕೇರಳ ರಾಜ್ಯದ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ತನ್ನ ಪರಿಚಯದ ವ್ಯಕ್ತಿಯೋರ್ವನನ್ನು ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ದೂಡಿ ಕೊಲೆಗೆ ಯತ್ನಿಸಿದ ಆರೋಪದಡಿ ಮುರಳಿಕೃಷ್ಣನ ವಿರುದ್ಧ ಕೇಸು ದಾಖಲಾಗಿತ್ತು. ಬಂಧನಕ್ಕೊಳಗಾಗಿದ್ದ ಮುರಳಿಕೃಷ್ಣ ಬಳಿಕ ಜಾಮೀನು ಪಡೆದು ಹೊರ ಬಂದಿದ್ದ. ತನಿಖಾಧಿಕಾರಿ ವಿಚಾರಣೆ ಪೂರ್ಣಗೊಳಿಸಿ ಮುರಳಿಕೃಷ್ಣನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ನಂತರ ನ್ಯಾಯಾಲಯದಲ್ಲಿ ವಿಚಾರಣೆ ಆರಂಭಗೊಂಡಿತ್ತು. ಇದಲ್ಲದೆ ವಿದ್ಯಾಭ್ಯಾಸವನ್ನು ಅರ್ಧದಲ್ಲಿ ಮೊಟಕುಗೊಳಿಸಿ ಉಂಡಾಡಿಗುಂಡನಂತೆ ತಿರುಗಾಡುತ್ತಿದ್ದ ಮುರಳಿಕೃಷ್ಣ ಹಲವು ದುರಾಭ್ಯಾಸಗಳನ್ನು ಮೈಗೂಡಿಸಿಕೊಂಡಿದ್ದ. ಕೊಲೆಯತ್ನ ಕೇಸು ಮಾತ್ರವಲ್ಲದೆ ಇನ್ನೂ ಕೆಲವು ಕೇಸ್‌ಗಳು ಮುರಳಿಕೃಷ್ಣನ ವಿರುದ್ಧ ದಾಖಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ಪೊಲೀಸ್ ಕಾರ್ಯಾಚರಣೆಗೆ ಶ್ಲಾಘನೆ: ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಪಶ್ಚಿಮ ವಲಯ ಐಜಿಪಿ ಅಮಿತ್‌ಸಿಂಗ್, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಅವರ ಮಾರ್ಗದರ್ಶನಲ್ಲಿ ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ವಿಜಯಪ್ರಸಾದ್ ನೇತೃತ್ವದಲ್ಲಿ ಬೆಳ್ತಂಗಡಿ ಸರ್ಕಲ್ ಇನ್‌ಸ್ಪೆಕ್ಟರ್ ನಾಗೇಶ್ ಕದ್ರಿ, ಧರ್ಮಸ್ಥಳ ಪೊಲೀಸ್ ಠಾಣಾ ಸಬ್‌ಇನ್‌ಸ್ಪೆಕ್ಟರ್‌ಗಳಾದ ಕಿಶೋರ್ ಪಿ, ಸಮರ್ಥ್ ಆರ್.ಗಾಣಿಗೇರ ಹಾಗೂ ಸಿಬ್ಬಂದಿಗಳ ತಂಡ ಹಂತಕರನ್ನು ತಮ್ಮ ಬಲೆಗೆ ಕೆಡವಲ್ಲಿ ಯಶಸ್ವಿಯಾಗಿದೆ. ಇಡೀ ತಾಲೂಕನ್ನೇ ಬೆಚ್ಚಿ ಬೀಳಿಸಿದ್ದ ಸಜ್ಜನ ವ್ಯಕ್ತಿ ಬಾಲಕೃಷ್ಣ ಬಡೆಕ್ಕಿಲ್ಲಾಯ ಅವರ ಭೀಕರ ಹತ್ಯೆ ಪ್ರಕರಣವನ್ನು ಭೇದಿಸಿ ಹಂತಕರನ್ನು ನಾಲ್ಕೇ ದಿನದಲ್ಲಿ ಪೊಲೀಸರು ಬಂಧಿಸಿರುವುದಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

ಬಾಲಕೃಷ್ಣ ಬಡೆಕ್ಕಿಲ್ಲಾಯರು ತೋಟದ ವ್ಯವಹಾರ ನೋಡುತ್ತಿದ್ದರು..
ಶಿಕ್ಷಕಿಯಾಗಿದ್ದ ಪತ್ನಿ ಲೀಲಾ ೩ ವರ್ಷದ ಹಿಂದೆ ಮೃತಪಟ್ಟಿದ್ದರು….
ಬೆಳಾಲಿನ ಕೊಲ್ಪಾಡಿ, ಕೊಯ್ಯೂರು, ಇಂದಬೆಟ್ಟು ಮೊದಲಾದೆಡೆ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದ ಬಾಲಕೃಷ್ಣ ಬಡೆಕ್ಕಿಲ್ಲಾಯ ಅವರು ಬೆಳಾಲಿನ ತೋಟದ ನಡುವಿನ ಎಸ್‌ಪಿಬಿ ಕಂಪೌಂಡ್‌ನ ಮನೆಯಲ್ಲಿ ವಾಸವಿದ್ದರು. ಬಾಲಕೃಷ್ಣ ಭಟ್ ಅವರು ತನ್ನ ತೋಟದ ವ್ಯವಹಾರ ನೋಡಿಕೊಳ್ಳುತ್ತಿದ್ದರು. ಜೊತೆಗೆ ಹಲವು ಮಕ್ಕಳಿಗೆ ಯೋಗ ಪಾಠ ಮಾಡುತ್ತಿದ್ದರು. ಇವರ ಪತ್ನಿ ಲೀಲಾ ಅವರು ಸರಕಾರಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದರು. ಮೂರು ವರ್ಷದ ಹಿಂದೆ ಲೀಲಾ ಅವರು ನಿಧನರಾಗಿದ್ದರು. ಬಾಲಕೃಷ್ಣ ಬಡೆಕ್ಕಿಲಾಯ ಮತ್ತು ಲೀಲಾ ದಂಪತಿಗೆ ಒಟ್ಟು ಮೂರು ಮಕ್ಕಳು. ಮೊದಲ ಮಗ ಹರೀಶ್ ಭಟ್ ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಕಿರಿಯ ಮಗ ಸುರೇಶ್ ಭಟ್ ಪುತ್ತೂರಿನಲ್ಲಿ ಉದ್ಯೋಗಿಯಾಗಿದ್ದಾರೆ. ಮಗಳು ವಿಜಯಲಕ್ಷ್ಮಿ(೪೯ವ) ಅವರನ್ನು ೨೨ ವರ್ಷಗಳ ಹಿಂದೆ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾದಲ್ಲಿ ಕೃಷಿ ಹಾಗೂ ಜ್ಯೋತಿಷಿಯಾಗಿರುವ ರಾಘವೇಂದ್ರ ಕೆದಿಲಾಯರಿಗೆ ಮದುವೆ ಮಾಡಿಕೊಡಲಾಗಿತ್ತು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇವರಲ್ಲಿ ಕೊಲೆ ಆರೋಪಿ ಮುರಳಿಕೃಷ್ಣ(೨೦ವ.)ಮೊದಲ ಮಗನಾಗಿದ್ದು ಮಗಳು ಪಿಯುಸಿ ಓದುತ್ತಿದ್ದಾರೆ.

ಅಜ್ಜನಲ್ಲಿ ನೀರು ಪಡೆದು ಬೆಲ್ಲ ಕೇಳಿ ತಗಾದೆ ತೆಗೆದಿದ್ದ ಮುರಳಿಕೃಷ್ಣ:
ಬೆಳಾಲಿನ ಮನೆಗೆ ಬಂದು ಊಟ ಮಾಡಿದ್ದ ರಾಘವೇಂದ್ರ ಕೆದಿಲಾಯ ಮತ್ತು ಮುರಳಿಕೃಷ್ಣ ನಂತರ ಅಜ್ಜನಲ್ಲಿ ಪುಳ್ಳಿ ನೀರು ಕೇಳಿದ್ದಾನೆ. ನೀರು ತಂದಿಟ್ಟಾಗ ಬೆಲ್ಲ ಬೇಕೆಂದಿದ್ದಾನೆ. ಬೆಲ್ಲ ತರುವುದಾಗಿ ಅಜ್ಜ ಅಡುಗೆ ಮನೆಗೆ ಒಳ ಹೋದಾಗ ಜಾಗ ಬೇಕು ಅನ್ನುವುದನ್ನು ಕೇಳಿದ್ದಾನೆ. ಇದಕ್ಕವರು ಒಪ್ಪಿಕೊಳ್ಳದೇ ಇದ್ದಾಗ ತಾನು ಬದಿಯಡ್ಕದ ವಡಂಬಳೆಯಿಂದ ತಂಗೀಸ್ ಚೀಲದಲ್ಲಿ ತಂದಿದ್ದ ಕತ್ತಿಯಿಂದ ಅಜ್ಜನಿಗೆ ಬೀಸಿದ್ದಾನೆ ಎನ್ನಲಾಗಿದೆ. ಅಜ್ಜ ಉಣಬಡಿಸಿದ ಊಟ ಮಾಡಿರುವ ಆರೋಪಿ ಮುರಳಿಕೃಷ್ಣ ಊಟದ ನಂತರ ಬಾವಿಕಟ್ಟೆಯ ಬಳಿಯಲ್ಲಿ ಉಂಡೆಲೆಯನ್ನು ಬಿಸಾಡಿದ್ದಾನೆ. ಈ ಎಲೆ ಮತ್ತು ಮನೆಯೊಳಗೆ ಊಟಕ್ಕೆ ಕುಳಿತುಕೊಳ್ಳಲು ಇಟ್ಟಿದ್ದ ಮಣೆಗಳು ಪ್ರಮುಖ ಸಾಕ್ಷಿಯಾಗಿವೆ ಎಂದು ತಿಳಿದು ಬಂದಿದೆ.

‘ಕಿರಿಕ್ ಪಾರ್ಟಿ’ಯನ್ನು ನೋಡಲು ಕೋರ್ಟ್‌ಗೆ ಯಾರೂ ಬರಲಿಲ್ಲ
ಬಾಲಕೃಷ್ಣ ಬಡೆಕ್ಕಿಲ್ಲಾಯ ಅವರನ್ನು ಹತ್ಯೆ ಮಾಡಿದ ಅಳಿಯ ರಾಘವೇಂದ್ರ ಕೆದಿಲಾಯ ಮತ್ತು ಮೊಮ್ಮಗ ಮುರಳಿಕೃಷ್ಣನನ್ನು ಆ.೨೪ರಂದು ಮತ್ತು ಆ.೨೭ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಅವರ ಪರವಾಗಿ ಯಾರೂ ಅಲ್ಲಿಗೆ ಬಂದಿರಲಿಲ್ಲ. ಬಾಲಕೃಷ್ಣ ಬಡೆಕ್ಕಿಲ್ಲಾಯ ಅವರ ಪುತ್ರಿ ವಿಜಯಲಕ್ಷ್ಮಿ ಅವರು ತನ್ನ ತಂದೆಯನ್ನು ಕಳೆದುಕೊಂಡ ನೋವಿನಲ್ಲಿದ್ದಾರೆ. ತನ್ನ ತಂದೆಯನ್ನೇ ಕೊಲೆ ಮಾಡಿರುವ ಪತಿ ರಾಘವೇಂದ್ರ ಕೆದಿಲಾಯ ಮತ್ತು ಮಗ ಮುರಳಿಕೃಷ್ಣನ ಮೇಲೆ ಅವರು ಮನೆಯಲ್ಲಿ ಕೋಪ ವ್ಯಕ್ತಪಡಿಸುತ್ತಿದ್ದಾರೆ. ಹಾಗಾಗಿ ಅವರು ಪತಿ ಮತ್ತು ಮಗನಿಂದ ದೂರವೇ ಇದ್ದಾರೆ. ವಿಜಯಲಕ್ಷ್ಮಿ ಅವರ ಸಹೋದರರಾದ ಹರೀಶ್ ಭಟ್ ಮತ್ತು ಸುರೇಶ್ ಭಟ್ ಅವರು ಯಾವುದೇ ಕಾರಣಕ್ಕೂ ತನ್ನ ತಂದೆಯನ್ನು ಕೊಂದಿರುವವರು ಕಾನೂನಿನ ಕುಣಿಕೆಯಿಂದ ತಪ್ಪಬಾರದು ಎಂದು ಹೇಳುತ್ತಿದ್ದಾರೆ. ಹಾಗಾಗಿ ಇಲ್ಲಿನವರು ಯಾರೂ ಕೊಲೆ ಆರೋಪಿಗಳ ಪರ ನಿಲ್ಲುವವರಿಲ್ಲ. ರಾಘವೇಂದ್ರ ಕೆದಿಲಾಯ ಮತ್ತು ಮುರಳಿಕೃಷ್ಣ ಅವರು ಕಾಸರಗೋಡಿನಲ್ಲಿಯೂ ಕಿರಿಕ್ ಪಾರ್ಟಿ ಎನಿಸಿಕೊಂಡಿದ್ದಾರೆ. ಅಕ್ಕಪಕ್ಕದವರೊಂದಿಗೆ ಇವರ ಸಂಬಂಧ ಅಷ್ಟೇನೂ ಚೆನ್ನಾಗಿಲ್ಲ. ತಂಟೆ ತಕರಾರು ಮಾಡಿಕೊಂಡಿರುವುದೇ ಇವರ ಕಾಯಕ ಎಂದು ಹೇಳಲಾಗುತ್ತಿದೆ. ಹಾಗಾಗಿ ಅಲ್ಲಿನ ಯಾರೂ ಇವರ ಪರವಾಗಿ ನಿಂತಿಲ್ಲ. ಆದ್ದರಿಂದ ಕೋರ್ಟ್‌ಗೆ ನೋಡಲು ಯಾರೂ ಬಂದಿಲ್ಲ.

ಆರೋಪಿಗಳ ಕರೆತಂದು ಸ್ಥಳ ಮಹಜರು ಮನೆಯ ಮೂಲೆ ಮೂಲೆ ಜಾಲಾಡಿದ ಪೊಲೀಸರು: ನಿವೃತ್ತ ಮುಖ್ಯ ಶಿಕ್ಷಕ ಬಾಲಕೃಷ್ಣ ಬಡೆಕ್ಕಿಲ್ಲಾಯ(೮೩ವ)ರವರನ್ನು ಆ.೨೦ರಂದು ಅವರ ಮನೆಯಲ್ಲಿ ಬರ್ಬರವಾಗಿ ಕೊಲೆ ಮಾಡಿರುವ ಆರೋಪದಲ್ಲಿ ಆ.೨೪ರಂದು ಧರ್ಮಸ್ಥಳ ಠಾಣಾ ಪೊಲೀಸರಿಂದ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದ ಕಾಸರಗೋಡು ಬದಿಯಡ್ಕದ ರಾಘವೇಂದ್ರ ಕೆದಿಲಾಯ(೫೪ವ) ಮತ್ತು ಆತನ ಮಗ ಮುರಳಿಕೃಷ್ಣ(೨೧ವ)ರವರನ್ನು ಆ.೨೭ರಂದು ಸಂಜೆ ಸರ್ಕಲ್ ಇನ್ಸ್‌ಪೆಕ್ಟರ್ ನಾಗೇಶ್ ಕದ್ರಿ ನೇತೃತ್ವದಲ್ಲಿ ಕೊಲೆ ನಡೆದ ಸ್ಥಳಕ್ಕೆ ಕರೆತಂದು ಮಹಜರು ನಡೆಸಲಾಯಿತು.
ಹತ್ಯೆ ನಡೆಸಿದ್ದು ಹೇಗೆ, ವಾಹನ ಎಲ್ಲಿ ನಿಲ್ಲಿಸಿ ಎಂಟ್ರಿ ಕೊಟ್ಟರು, ಆರೋಪಿಗಳ ಕೈಯಲ್ಲಿದ್ದ ಆಯುಧಗಳ ಮಾಹಿತಿ, ಮನೆಯಲ್ಲಿ ಹತ್ಯೆ ನಡೆಸಲಾದ ಸಂದರ್ಭದಲ್ಲಿ ಏನೇನಾಯ್ತು ಎಂಬ ವಿಚಾರಗಳ ಬಗ್ಗೆ ಆರೋಪಿಗಳೊಂದಿಗೆ ಸ್ಥಳ ಮಹಜರು ನಡೆಸಿದರು.
ಮೃತಪಟ್ಟ ನಂತರ ಮೃತದೇಹ ಎಲ್ಲಿತ್ತು ಆ ವೇಳೆ ಯಾರ್ಯಾರು ಇದ್ದರೂ ಎಂಬಿತ್ಯಾದಿ ಮಾಹಿತಿಯನ್ನು ಪೊಲೀಸರು ಆರೋಪಿಗಳಿಂದ ಕಲೆ ಹಾಕಿದರು. ಘಟನ ಸ್ಥಳದಲ್ಲಿ ಧರ್ಮಸ್ಥಳ ಸಬ್ ಇನ್‌ಸ್ಪೆಕ್ಟರ್ ಕಿಶೋರ್, ಸಿಬ್ಬಂದಿ ಪ್ರಶಾಂತ್, ಲೋಕೇಶ್, ಗೋವಿಂದ್ ರಾಜ್, ಅಭಿಜಿತ್, ದೀಪು ಹಾಗೂ ಬೆಳ್ತಂಗಡಿ ಠಾಣೆಯ ಸಿಬ್ಬಂದಿ ವಿಜಯ್ ಕುಮಾರ್, ಚಿದಾನಂದ ಉಪಸ್ಥಿತರಿದ್ದರು.

ಮೈರೊಳ್ತಡ್ಕದಲ್ಲಿ ಸಿಸಿಟಿವಿಯಲ್ಲಿ ಪತ್ತೆ: ಕೊಲೆ ಕೃತ್ಯ ಎಸಗಿದ ನಂತರ ಹಂತಕರು ಮೈರೊಳ್ತಡ್ಕ ಸಮೀಪ ಬೈಕ್‌ನಲ್ಲಿ ವಾಪಸಾಗುವ ದೃಶ್ಯ ಸಿಸಿಟಿವಿಯಲ್ಲಿ ಪತ್ತೆಯಾಗಿದೆ.

ಮುರಳಿಕೃಷ್ಣನ ಮೇಲೆ ಬದಿಯಡ್ಕದಲ್ಲಿ ಹಲವು ಕೇಸ್ ಇದ್ದರೂ ಕ್ರಮಕ್ಕೆ ಹಿಂದೇಟು: ಮುರಳಿಕೃಷ್ಣನ ಮೇಲೆ ದಾಮೋದರ್ ಆಳ್ವ ಎಂಬವರು ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಪೊಲೀಸ್‌ನವರು ಬರ್ತಾರೆ. ಸುಮ್ಮನೆ ಹೋಗ್ತಾರೆ ಎಂದು ದಾಮೋದರರವರು ಆರೋಪಿಸಿದ್ದಾರೆ. ಅಲ್ಲದೆ ಮುರಳಿಕೃಷ್ಣ ತನ್ನ ಸ್ನೇಹಿತನೊಬ್ಬನಿಗೆ ಜನರೇಟರ್‌ನ ರಾಡ್‌ನಿಂದ ಹಲ್ಲೆ ಮಾಡಿದ್ದ. ಒಬ್ಬನಿಗೆ ಹೊಂಡ ತೋಡಿ ಕಾಯ್ತಿದ್ದ ಅಂತೆಲ್ಲ ಆರೋಪಗಳಿವೆ. ಮುರಳಿಕೃಷ್ಣ ಬಾಲ್ಯದಲ್ಲಿ ದಾರಿ ತಪ್ಪುವಾಗಲೇ ತಿದ್ದಬೇಕಿತ್ತು. ಅದರ ಬದಲು ಮುರಳಿಕೃಷ್ಣನಿಗೆ ತಂದೆ ರಾಘವೇಂದ್ರ ಸಪೋರ್ಟ್ ಮಾಡಿ ಬೆಳೆಸಿದ್ದ. ಇದು ಈಗ ಮಗ ಹಂತಕನಾಗುವ ಹಂತಕ್ಕೆ ಹೋಗಿದೆ. ಚಿಕ್ಕಂದಿನಲ್ಲಿ ಬೆಳಾಲಿನ ಮಾವಂದಿರುವ ಮುರಳಿಕೃಷ್ಣರನ್ನು ಸರಿಮಾಡ್ಬೇಕು ಅನ್ನುವ ಕಾರಣಕ್ಕೆ ಕಲ್ಲಡ್ಕದ ಶ್ರೀರಾಮ ಶಾಲೆಗೆ ಸೇರಿಸುತ್ತಾರೆ, ಆದರೆ ಮುರಳಿ ಅಲ್ಲಿಯೂ ಕೂಡ ತಂಟೆ ತಕರಾರು ಮಾಡಿಕೊಂಡು ೩ ತಿಂಗಳಲ್ಲಿಯೇ ಅಲ್ಲಿಂದ ಎಸ್ಕೇಪ್ ಆಗಿದ್ದನಂತೆ. ಹೀಗೆ ಹೋದಲ್ಲಿ ಬಂದಲ್ಲಿ ಗಲಾಟೆ ಮಾಡುತ್ತಾ ಸುಖಾಸುಮ್ಮನೆ ತಗಾದೆ ತೆಗೆಯುತ್ತಾ ಸಿಕ್ಕ ಸಿಕ್ಕವರೆ ಮೇಲೆರಗುತ್ತಿದ್ದ ಮುರಳಿಕೃಷ್ಣನ ಬಗ್ಗೆ ಊರಿನವರು, ಸಂಬಂಧಿಕರು, ಆರೋಪಗಳ ಸುರಿಮಳೆಯನ್ನೇ ಮಾಡುತ್ತಾರೆ. ಇದರ ಜೊತೆಗೆ ಆತನಿಗೆ ಕೆಲ ಸಂಘಟನೆಗಳ ಲಿಂಕ್ ಇದೆ, ಆತ ಬೇಗನೇ ಹೊರ ಬರುತ್ತಾನೆ ಅನ್ನುವ ಭಯವೂ ಊರಿನವರಿಗಿದೆ. ಕೊಲೆಯಾದ ಬಾಲಕೃಷ್ಣ ಭಟ್‌ರವರಿಗೂ ತನ್ನ ಮೊಮ್ಮಗನ ವರ್ತನೆ, ವ್ಯಕ್ತಿತ್ವದ ಬಗ್ಗೆ ಬೇಸರವಿತ್ತು. ಅದನ್ನು ಅವರು ನೆರೆಹೊರೆಯವರಲ್ಲಿ ಹೇಳಿದ್ದರು ಎಂದು ಮಾಹಿತಿ ಲಭ್ಯವಾಗಿದೆ. ಏನೇ ಆದ್ರೂ ಕೊಲೆ ಮಾಡಿದವರನ್ನು ಕ್ಷಮಿಸುವ ಮಾತೇ ಇಲ್ಲ. ನ್ಯಾಯಕ್ಕಾಗಿ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಬಾಲಕೃಷ್ಣ ಭಟ್‌ರವರ ಮಕ್ಕಳು ಪ್ರತಿಕ್ರಿಯೆ ನೀಡಿದ್ದಾರೆ.

ಹೊಸ ಮನೆಗೆ ಪಂಚಾಂಗ ಹಾಕಿದ್ದ ಬಾಲಕೃಷ್ಣ ಭಟ್
ಬೆಳಾಲ್‌ನಲ್ಲಿ ಹೊಸ ಮನೆ ಕಟ್ಟಬೇಕು ಅಂತ ಬಾಲಕೃಷ್ಣ ಭಟ್ ನಿರ್ಧರಿಸಿದ್ದರು. ಅದಕ್ಕಾಗಿ ಮರ ಖರೀದಿಸಿ ಇಟ್ಟಿದ್ದು,ನನಗೆ ಹಂಚಿನ ಮನೆಯೆ ಆಗಬೇಕು ಅಂತ ಕನಸು ಕಂಡಿದ್ದರು.

Exit mobile version