Site icon Suddi Belthangady

ಉಜಿರೆ ಶ್ರೀ ಧ.ಮಂ. ಕಾಲೇಜಿನಲ್ಲಿ ಕಂಪ್ಯೂಟೇಶನಲ್ ಗಣಿತಶಾಸ್ತ್ರ ಕುರಿತು ರಾಷ್ಟ್ರೀಯ ಸೆಮಿನಾರ್

ಉಜಿರೆ: ಉಜಿರೆಯ ಶ್ರೀ ಧ.ಮಂ. ಕಾಲೇಜಿನಲ್ಲಿ ಆ.29ರಂದು ಕಂಪ್ಯೂಟೇಶನಲ್ ಗಣಿತಶಾಸ್ತ್ರ (ಕಂಪ್ಯೂಟೇಶನಲ್ ಮ್ಯಾತಮ್ಯಾಟಿಕ್ಸ್ ಇನ್ ನ್ಯಾವಿಗೇಟಿಂಗ್ ಕಾಂಪ್ಲೆಕ್ಸ್ ರಿಯಲ್ ವರ್ಲ್ಡ್ ಇಶ್ಯೂಸ್) ಕುರಿತು ಒಂದು ದಿನದ ರಾಷ್ಟ್ರೀಯ ಸೆಮಿನಾರ್ ನಡೆಯಿತು.ಕಾಲೇಜಿನ ಗಣಿತ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಖಾತರಿ ಕೋಶ (ಐಕ್ಯೂಎಸಿ) ವತಿಯಿಂದ ಮಣಿಪಾಲದ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಶ್ರೀಧ.ಮಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಉದ್ಘಾಟನೆ ನೆರವೇರಿಸಿ ಮಾತನಾಡಿ,ಗಣಿತ ಮತ್ತು ವಿಜ್ಞಾನವು ಕಂಪ್ಯೂಟಿಂಗ್ ನಲ್ಲಿ ಹೆಚ್ಚಿನ ವೇಗ ಹಾಗೂ ನಿಖರವಾದ ದತ್ತಾಂಶ ವಿಶ್ಲೇಷಣೆಯ ಮೂಲಕ ಜೀವನದ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುತ್ತದೆ ಎಂದರು.“ಗಣಿತವು ಜೀವಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಭೌತಶಾಸ್ತ್ರ ಸೇರಿದಂತೆ ಜೀವನದ ಎಲ್ಲಾ ಅಂಶಗಳನ್ನು ಒಳಗೊಂಡಿದೆ. ಗಣಿತವು ಜಗತ್ತನ್ನು ಅರ್ಥ ಮಾಡಿಕೊಳ್ಳುವಲ್ಲಿ ಸಹಕಾರಿಯಾಗಿದೆ. ನಮ್ಮ ದಿನನಿತ್ಯದ ಜೀವನದ ಸಮಸ್ಯೆಗಳನ್ನು ಅಥವಾ ಈ ಜಗತ್ತಿನಲ್ಲಿ ನಡೆಯುತ್ತಿರುವ ಘಟನೆಗಳನ್ನು ಅರ್ಥಮಾಡಿಕೊಳ್ಳಲು ಗಣಿತದ ಉತ್ತೇಜನ ತುಂಬಾ ಅವಶ್ಯವಾಗಿದೆ” ಎಂದು ಅವರು ಅಭಿಪ್ರಾಯಪಟ್ಟರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ,”ಗಣಿತವು ಪ್ರತ್ಯೇಕವಾದ ವಿಷಯವಲ್ಲ. ಅದು ಪ್ರತಿಯೊಂದಕ್ಕೂ ಅನ್ವಯವಾಗುತ್ತದೆ. ವೈದ್ಯಕೀಯ ಕ್ಷೇತ್ರದಲ್ಲೂ ಗಣಿತವನ್ನು ಅನ್ವಯಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಹಲವಾರು ಸಮಸ್ಯೆಗಳಿಗೆ ಇದು ಪರಿಹಾರವನ್ನು ಒದಗಿಸುತ್ತದೆ. ಗಣಿತವನ್ನು ಕೇವಲ ಹೆಚ್ಚಿನ ಅಂಕಗಳಿಗಾಗಿ ಮಾತ್ರ ಬಳಸಿಕೊಳ್ಳದೆ ದಿನನಿತ್ಯ ಜೀವನದಲ್ಲೂ ವಿಭಿನ್ನ ರೀತಿಯಲ್ಲಿ ಅಳವಡಿಸಿಕೊಳ್ಳಬೇಕು”ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. 

ಸಂಪನ್ಮೂಲ ವ್ಯಕ್ತಿಗಳಾದ ಡಾ.ಇಂದಿರಾ ಕೆ.ಪಿ., ಡಾ.ಬಿ.ರಮೇಶ ಶಂಕರ್, ಡಾ. ಮಹೇಶ್ ಕುಮಾರ್ ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಉಪನ್ಯಾಸಕರು ಉಪಸ್ಥಿತರಿದ್ದರು.

ಸುಮುಖ್ ಪ್ರಾರ್ಥಿಸಿದರು. ಗಣಿತ ವಿಭಾಗ ಮುಖ್ಯಸ್ಥ ಬಿ. ಗಣೇಶ್ ನಾಯಕ್ ಸ್ವಾಗತಿಸಿದರು. ಅಕ್ಷತಾ ಬಿ. ವಂದಿಸಿದರು. ಪೂಜಿತ ವರ್ಮ ಜೈನ್ ನಿರೂಪಿಸಿದರು.

Exit mobile version