Site icon Suddi Belthangady

ಭಾರೀ ಮಳೆಯಿಂದ ರಸ್ತೆ ಬಿರುಕು ಬಿಟ್ಟು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದ ಸವಣಾಲು ಪಿಲಿಕಲಕ್ಕೆ ಶಾಸಕ ಹರೀಶ್ ಪೂಂಜ ಭೇಟಿ- ತಡವಾಗಿ ಬಂದಿದ್ದೀರಿ ಎಂದು ಸ್ಥಳೀಯರಿಂದ ತರಾಟೆ-ಶಾಸಕರೊಂದಿಗೆ ವಾಗ್ವಾದ: ಶಾಸಕರನ್ನು ಹಾಗೆ ಪ್ರಶ್ನಿಸಬಾರದು ಎಂದು ಹೇಳಿದ ಪೂಂಜ- ಶಾಸಕರ ಗ್ರಾಂಟ್‌ನಲ್ಲಿ ೫ ಲಕ್ಷ ರೂ ಅನುದಾನ ಕೊಡುತ್ತೇನೆ; ಬೇಡ ಎಂದಾದರೆ ದೇವರ ಮೇಲೆ ಇಡುತ್ತೇನೆ ಎಂದ ಶಾಸಕರು

ಬೆಳ್ತಂಗಡಿ: ಇತ್ತೀಚೆಗೆ ಸುರಿದ ಭಾರೀ ಮಳೆಗೆ ರಸ್ತೆ ಬಿರುಕು ಬಿಟ್ಟು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದ ಬೆಳ್ತಂಗಡಿ ತಾಲೂಕಿನ ಸವಣಾಲು ಗ್ರಾಮದ ಪಿಲಿಕಲಕ್ಕೆ ಭೇಟಿ ನೀಡಿದ ಶಾಸಕ ಹರೀಶ್ ಪೂಂಜ ಅವರನ್ನು ಸ್ಥಳೀಯರು ತಡವಾಗಿ ಬಂದದಕ್ಕೆ ಪ್ರಶ್ನಿಸಿದಾಗ ಗ್ರಾಮಸ್ಥರನ್ನು ‘ಪೋಯ ಈ’ ಎಂದು ಶಾಸಕರು ಹೇಳಿದಾಗ ಹೋಗಲು ಹೇಳಲು ನೀವು ಯಾರು ಎಂದು ವಾಗ್ವಾದಕ್ಕೆ ಇಳಿದ ಮತ್ತು ಈ ವೇಳೆ ಶಾಸಕರೊಂದಿಗೆ ಇದ್ದ ಅವರ ಬೆಂಬಲಿಗರಿಗೂ ಸ್ಥಳೀಯರಿಗೂ ಪರಸ್ಪರ ಮಾತಿನ ಚಕಮಕಿ ನಡೆದು ಆರೋಪ ಪ್ರತ್ಯಾರೋಪ ಹೊರಿಸಿಕೊಂಡಿರುವ ಘಟನೆ ನಡೆದಿದೆ.
ಘಟನೆಯ ವಿವರ: ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದ ಹಾನಿ ಉಂಟಾಗಿರುವ ಬೆಳ್ತಂಗಡಿ ತಾಲೂಕಿನ ಸವಣಾಲು ಗ್ರಾಮದ ಪಿಲಿಕಲ ಪ್ರದೇಶ ಸೇರಿದಂತೆ ವಿವಿಧೆಡೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸಹಿತ ಜಿಲ್ಲಾ ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆ ಬಳಿಕ ಈ ಪ್ರದೇಶದ ಜನರನ್ನು ತಾತ್ಕಾಲಿಕವಾಗಿ ಕಾಳಜಿ ಕೇಂದ್ರಕ್ಕೆ ಹೋಗಲು ನೋಡೆಲ್ ಅಧಿಕಾರಿಗಳನ್ನು ನೇಮಿಸಿದ್ದರು. ಅಲ್ಲಿನ ಜನರು ಸಾಕುಪ್ರಾಣಿಗಳನ್ನು ಬಿಟ್ಟು ಕಾಳಜಿ ಕೇಂದ್ರಕ್ಕೆ ತೆರಳುವುದಿಲ್ಲ ಎಂದು ಅಧಿಕಾರಿಗಳಿಗೆ ತಿಳಿಸಿದ್ದರು. ಬಳಿಕ ಪರ್ಯಾಯ ರಸ್ತೆ ನಿರ್ಮಾಣ ಕಾರ್ಯಕ್ಕೆ ಸಂಬಂಧಿಸಿ ಇಂಜಿನಿಯರ್‌ಗಳು ತೆರಳಿ ಅಂದಾಜು ಪಟ್ಟಿ ತಯಾರಿಸಿದ್ದರು. ಇದಾದ ಕೆಲವು ದಿನಗಳ ಬಳಿಕ ಬಿಜೆಪಿ ಪದಾಧಿಕಾರಿಗಳ ಜತೆಗೆ ಆ.೧೬ರಂದು ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಹರೀಶ್ ಪೂಂಜ ಅವರನ್ನು ಸ್ಥಳೀಯ ಕೆಲವರು ಪ್ರಶ್ನಿಸಿದ್ದಾರೆ. ಮಳೆಯ ಭೀಕರತೆ ಸಂದರ್ಭ ನಮ್ಮ ಸಂಕಷ್ಟಕ್ಕೆ ಸ್ಪಂದಿಸದೆ ಈಗ ಬಂದು ಏನು ಪ್ರಯೋಜನ ಎಂದು ಕೆಲವರು ಶಾಸಕರನ್ನು ತರಾಟೆಗೆತ್ತಿಕೊಂಡಿದ್ದಾರೆ. ಈ ವೇಳೆ ಶಾಸಕರು ಶಾಸಕರ ಅನುದಾನದಲ್ಲಿ ೫ ಲಕ್ಷ ರೂ ಮಂಜೂರು ಮಾಡಿಸಿ ನೀವು ಹೇಳಿದಲ್ಲಿ ಕೆಲಸ ಮಾಡಿಸುತ್ತೇನೆ ಎಂದು ಹೇಳಿದ್ದಾರೆ. ಈ ವೇಳೆ ಪರಸ್ಪರ ಚರ್ಚೆ ನಡೆದಿದೆ. ಚರ್ಚೆ ವಾಗ್ವಾದವಾಗಿ ಮಾರ್ಪಟ್ಟಿದೆ. ಒಂದು ಹಂತದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಸ್ಥಳೀಯರ ಮಧ್ಯೆ ಹೊ ಕೈ ಹಂತಕ್ಕೆ ತಲುಪಿದೆ. ಏಕವಚನದಲ್ಲೂ ಮಾತುಕತೆ ನಡೆದಿದೆ. ಈ ವೇಳೆ ಶಾಸಕ ಹರೀಶ್ ಪೂಂಜ ಅವರು ಸಾರ್ವಜನಿಕರನ್ನು ನಿಂದಿಸಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಜನಪ್ರತಿನಿಧಿಯಾಗಿ ಓರ್ವ ಶಾಸಕರು ಸ್ಥಳಕ್ಕೆ ಭೇಟಿ ನೀಡಿದಾಗ ಸ್ಥಳೀಯರು ಈ ರೀತಿ ಪ್ರಶ್ನೆ ಮಾಡಿರುವುದು ಎಷ್ಟು ಸರಿ ಎಂಬ ಪ್ರಶ್ನೆಯೂ ಕೇಳಿ ಬಂದಿದೆ. ಶಾಸಕರ ಪರವಾಗಿ ಮತ್ತು ವಿರುದ್ಧವಾಗಿ ಅಭಿಪ್ರಾಯ ವ್ಯಕ್ತವಾಗಿದೆ. ಈ ಕುರಿತು ಸುದ್ದಿ ನ್ಯೂಸ್ ಜತೆ ಶಾಸಕ ಹರೀಶ್ ಪೂಂಜ ಮತ್ತು ಅವರ ಬೆಂಬಲಿಗರು ಹಾಗೂ ಘಟನಾ ಸ್ಥಳದಲ್ಲಿದ್ದವರು ಮಾತನಾಡಿ ಪರಸ್ಪರ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ನೀವು ವಿರೋಧ ಪಕ್ಷದವರಾಗಿದ್ದು ಸರಕಾರವನ್ನು ಪ್ರಶ್ನೆ ಮಾಡ್ಲಿಕ್ಕಿಲ್ವಾ: ಹರೀಶ್ ಪೂಂಜ ಅವರೇ ‘ಇರೆನ್ ಪ್ರಶ್ನೆ ಮಲ್ಪುನ ರೈಟ್ಸ್ ಮಾತೆರೆಗ್ಲ ಉಂಡು’ ಎಂದು ಹೇಳಿದ ರಿಪಬ್ಲಿಕ್ ಟಿ.ವಿ.:
ಪ್ರಶ್ನೆ ಮಾಡಿದ ಗ್ರಾಮಸ್ಥರಿಗೆ ದೇವರ ಹೆಸರಿನಲ್ಲಿ ಹರೀಶ್ ಪೂಂಜಾ ಬ್ಲ್ಯಾಕ್‌ಮೇಲ್,
ತಡವಾಗಿ ಬಂದ ಬಿಜೆಪಿ ಎಂಎಲ್‌ಎಗೆ ಗ್ರಾಮಸ್ಥರ ಹಿಗ್ಗಾಮುಗ್ಗಾ ಕ್ಲಾಸ್, ಎಂಎಲ್‌ಎಯನ್ನು
ಪ್ರಶ್ನಿಸಿz ತಪ್ಪಾಯಿತಾ, ಅವಾಚ್ಯವಾಗಿ ನಿಂದಿಸಿದ ಪೂಂಜಾ ಎಂದು ಟಿ.ವಿ.೯ನಲ್ಲಿ ವರದಿ
ಗ್ರಾಮಸ್ಥರ ಜೊತೆ ಶಾಸಕ ಹರೀಶ್ ಪೂಂಜ ಕಿರಿಕ್, ಎಂಎಲ್‌ಎಗೆ ಯಾಕೆ ತಡವಾಗಿದೆ ಎಂದು ಪ್ರಶ್ನೆ ಮಾಡುವ ಹಕ್ಕು ನಿಮಗೆ ಇಲ್ಲ, ಪ್ರಶ್ನೆ ಮಾಡಿದ ಜನರಿಗೆ ಅವಾಚ್ಯ ನಿಂದನೆ, ಗ್ರಾಮಸ್ಥರಿಂದ ತೀವ್ರ ಆಕ್ರೋಶ ಎಂದು ನ್ಯೂಸ್ ೧೮ ಕನ್ನಡ ವಾಹಿನಿಯಲ್ಲಿ ವರದಿ ಪ್ರಸಾರ.

ಶಾಸಕರನ್ನು ತರಾಟೆಗೆತ್ತಿಕೊಂಡ ಮತ್ತು ಹರೀಶ್ ಪೂಂಜರು ‘ಪೋಯ ಈ’, ನಾಯಿದ ಬಾಲೆಲು, ಕುರ್ತೆಲೆರ್ ಎಂದು ಹೇಳಿದ ವೀಡಿಯೋ ವೈರಲ್
ಶಾಸಕ ಹರೀಶ್ ಪೂಂಜ ಅವರು ಸವಣಾಲು ಗ್ರಾಮದ ಪಿಲಿಕಲಕ್ಕೆ ಭೇಟಿ ನೀಡಿದಾಗ ಸ್ಥಳೀಯರು ತರಾಟೆಗೆತ್ತಿಕೊಂಡ ವಿಡಿಯೋ ವೈರಲ್ ಆಗಿದೆ. ಇದೇ ವೀಡಿಯೋಗಳು ರಾಜ್ಯಮಟ್ಟದ ಸುದ್ದಿ ವಾಹಿಗಳಲ್ಲಿ ಪ್ರಸಾರವಾಗಿದೆ. ಆರಂಭದಲ್ಲಿ ಸ್ಥಳೀಯರು ತರಾಟೆಗೆತ್ತಿಕೊಳ್ಳುವ ವೇಳೆ ಸವಣಾಲುಗೆ ನಾನು ಏನು ಮಾಡಿಲ್ಲ ಹೇಳಿ ಎಂದು ಶಾಸಕ ಹರೀಶ್ ಪೂಂಜ ಹೇಳ್ತಾರೆ. ಈ ರೋಡ್‌ಗೆ ಒಂದು ರೂಪಾಯಿ ಕೊಟ್ಟಿಲ್ಲ ಎಂದು ಈ ವೇಳೆ ಸ್ಥಳೀಯರು ಪ್ರತಿಕ್ರಿಯೆ ನೀಡುತ್ತಾರೆ. ಒಂದು ನಿಮಿಷ ನಿಲ್ಲಿ ಅಣ್ಣಾ ಎಂದು ಹರೀಶ್ ಪೂಂಜ ಅವರು ಹೇಳಿದಾಗ ಸವಣಾಲುಗೆ ಎಂತ ಆಗಿದೆ ಎಂದು ಮತ್ತೆ ಸ್ಥಳೀಯರು ಪ್ರಶ್ನೆ ಮಾಡುತ್ತಾರೆ. ಒಂದು ನಿಮಿಷ ನಿಲ್ಲಿ ಅಣ್ಣಾ ಎಂದು ಹರೀಶ್ ಪೂಂಜರು ಮತ್ತೆ ವಿನಂತಿ ಮಾಡುತ್ತಾರೆ. ಈ ಸಂದರ್ಭದಲ್ಲಿ ಪರಸ್ಪರ ಚರ್ಚೆ, ಚಕಮಕಿ ಏರುಧ್ವನಿಯಲ್ಲಿ ನಡೆಯುತ್ತದೆ. ಐದು, ಹತ್ತು ವರ್ಷದಲ್ಲಿ ಏನಾದರೂ ಕೆಲಸ ಅಗಿದೆಯಾ. ಜನರು ಕೈಯಿಂದ ಹಾಕಿ ಮಾಡಿದ್ದು ಎಂದು ಸ್ಥಳೀಯರು ಹೇಳುವಾಗ ಆ ಜನ ಯಾರು ಆ ಜನ ಯಾರು ಎಂದು ಕೇಳುವುದು ವಿಡಿಯೋದಲ್ಲಿ ಕಂಡು ಬಂದಿದೆ. ಇದು ಯಾರನ್ನು ಪ್ರಶ್ನೆ ಮಾಡುವುದು. ಶಾಸಕರ ಪರವಾ ಅಥವಾ ವಿರುದ್ಧವ ಎಂಬುದು ಗೊತ್ತಾಗಿಲ್ಲ. ಈ ವೇಳೆ ಶಾಸಕ ಹರೀಶ್ ಪೂಂಜರವರು ಸ್ಥಳೀಯ ಯುವಕನೋರ್ವನನ್ನು ‘ಪೋಯ ಈ’ ಎಂದು ಹೇಳುತ್ತಾರೆ. ರಾಜಕೀಯಕ್ಕೆ ಬಂದದ್ದಲ್ಲ ಎಂದು ಓರ್ವರು ಹೇಳುತ್ತಾರೆ. ಇಷ್ಟು ವರ್ಷದಲ್ಲಿ ಎಂತ ಮಾಡಿದ್ದೀರಿ ಎಂದು ಸ್ಥಳೀಯರು ಹೇಳುತ್ತಾರಲ್ಲದೆ ನಮ್ಮ ಊರಿಗೆ ಬಂದದ್ದು ಎಂದು ಹೇಳುತ್ತಾರೆ. ಈ ವೇಳೆ ಶಾಸಕರು ಮಳೆ ನಿಂತ ಕೂಡ್ಲೆ ಕೆಲಸ ಮಾಡುವ. ಎಂಎಲ್‌ಎ ಗ್ರಾಂಟ್‌ನಲ್ಲಿ ನಾನು ೫ ಲಕ್ಷ ಇಡ್ತೇನೆ. ನೀವು ಎಲ್ಲಿಗೆ ಹೇಳ್ತೀರಿ ಅಲ್ಲಿಗೆ ಇಡ್ತೇನೆ. ಹಾಗಂತ ಅಣ್ಣಾ… ಒಬ್ಬ ಬರುವಾಗ ಈಗ ಬಂದದ್ದು ಯಾಕೆ ಎಂದು ಪ್ರಶ್ನೆ ಎಂಎಲ್‌ಎನಲ್ಲಿ ಯಾರು ಕೇಳ್ಬಾರದು. ಅದು ನೀವು ಯಾರೂ ಇರ‍್ಬಹುದು. ನೀವು ಅದನ್ನು ಒಪ್ಪಿಕೊಳ್ತೀರಾದ್ರೆ ನಂಗೆನೂ ತೊಂದರೆ ಇಲ್ಲ. ನಾನು ಅಲ್ಲಿನ ದೇವರಿಗೆ ಹಾಕ್ತೇನೆ. ಊರಿನವರು ಒಬ್ಬ ಎಂಎಲ್‌ಎ ಬಂದಾಗ ಊರಿನವ್ರು ಹೇಳ್ತಾರೆ ಅಂದ್ರೆ ಎಂದು ಹೇಳುತ್ತಾರೆ. ಇದಕ್ಕೆ ಕೆಲವರು ನಗಾಡುತ್ತಾರೆ. ದೇವರ ಮೇಲೆ ನಂಬಿಕೆ ಇಲ್ವಾ ಎಂದು ಶಾಸಕರು ಹೇಳ್ತಾರೆ. ಮತ್ತೆ ಪರಸ್ಪರ ಚಕಮಕಿ ನಡೆಯುತ್ತದೆ. ಶಾಸಕರು ಮತ್ತು ಅವರ ಬೆಂಬಲಿಗರು ಈ ವೇಳೆ ಅಲ್ಲಿಂದ ತೆರಳುತ್ತಾರೆ. ಈ ವೇಳೆ ಶಾಸಕರು ನಾಯಿದ ಬಾಲೆಲು… ಕುರ್ತೆಲೆರ್ ಎಂದು ಹೇಳಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಶಾಸಕರ ಭದ್ರತೆಗಾಗಿ ಸರಕಾರ ನೀಡಿರುವ ಅಂಗರಕ್ಷಕನ ಎದುರು ಈ ಎಲ್ಲಾ ಘಟನೆ ನಡೆದಿದೆ.

ಅನುದಾನ ನೀಡಲು ವಿನಂತಿಸಿದ್ದ ಕಾರಣ ಹೋಗಿದ್ದೆ: ಹರೀಶ್ ಪೂಂಜ
ನನ್ನ ಮನೆಗೆ ಸವಣಾಲು ಗ್ರಾಮಸ್ಥರು ಬಂದಿದ್ದರು. ಬಂದು ಮೊನ್ನೆ ಮಳೆಗೆ ರಸ್ತೆ ಕುಸಿತವಾಗಿದೆ, ನೀವು ಬಂದು ನೋಡಬೇಕು. ಅದಕ್ಕೆ ಪರ್ಯಾಯವಾದ ಕಚ್ಚಾ ರಸ್ತೆಯನ್ನು ನಿರ್ಮಾಣ ಮಾಡಿzವೆ. ಕಚ್ಚಾ ರಸ್ತೆ ನಿರ್ಮಾಣ ಆದರೆ ನಮಗೆ ಮುಂದಿನ ಮಳೆಗಾಲದ ಸಂದರ್ಭದಲ್ಲಿ ಖಂಡಿತವಾಗಿಯೂ ವಾಹನ ಸಂಚಾರ ಮಾಡಲು ಆಗಲ್ಲ. ಹೊಸ ಕಚ್ಚಾ ರಸ್ತೆಯಾದ್ದರಿಂದ ಹೋಗಲು ತುಂಬಾ ಕಷ್ಟವಾಗುತ್ತದೆ. ಅದಕ್ಕೆ ನೀವು ಏನಾದರೂ ಅನುದಾನ ಕೊಟ್ಟರೆ ನಮಗೆ ಬಹಳ ಅನುಕೂಲವಾಗುತ್ತದೆ. ದಯವಿಟ್ಟು ಬರಬೇಕು ಎಂದು ವಿನಂತಿ ಮಾಡಿದ್ದರು. ಆ ಕಾರಣಕ್ಕೋಸ್ಕರ ನಾನು ಅಲ್ಲಿಗೆ ಹೋಗಿದ್ದೆ. ಆ ಸಮಯದಲ್ಲಿ ಮರ ಕಡಿಯಲು ಅರಣ್ಯ ಇಲಾಖೆಯವರು, ಮೆಸ್ಕಾಂ ಇಲಾಖೆಯವರು ಬಂದಿದ್ದರು. ನಾನು ಕೂಡ ಸೂಚನೆ ಕೊಟ್ಟೆ. ಪಂಚಾಯತ್ ವತಿಯಿಂದ ರಸ್ತೆ ನಿರ್ಮಾಣ ಕಾರ್ಯ ಮಾಡುತ್ತೇವೆ ಎಂದು ಹೇಳಿದರು. ನಾನು ಆಯಿತು ಎಂದು ಹೇಳಿದೆ. ಎಷ್ಟು ಕಚ್ಚಾ ರಸ್ತೆ ನಿರ್ಮಾಣ ಮಾಡುತ್ತೀರ ಅದಕ್ಕೆ ಐದು ಲಕ್ಷ ರೂಪಾಯಿಯನ್ನು ಅನುದಾನ ತೆಗೆದು ಇಡುತ್ತೇನೆ. ಶಾಸಕರ ನಿಧಿಯಿಂದ ತೆಗೆದು ಇಡುತ್ತೇನೆ ಎಂದು ಹೇಳಿದೆ. ಕಾಂಗ್ರೆಸ್ ಸರ್ಕಾರ ಬಂದ ನಂತರ ಒಂದು ರೂಪಾಯಿ ಅನುದಾನ ಬಂದಿಲ್ಲ. ನಾವು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿzವೆ. ನನ್ನ ಮಿತಿ ಪ್ರಕಾರ ಶಾಸಕರ ನಿಧಿಯಿಂದ ನಿಮಗೆ ೫ ಲಕ್ಷ ಕೊಡುತ್ತೇನೆ ಎಂದು ಹೇಳಿದೆ. ಕಾಂಗ್ರೆಸ್‌ನ ಅಲ್ಲಿಯ ಇಬ್ಬರು ಪುಡಾರಿಗಳು ಏಕಾಏಕಿ ಮಾತನಾಡಲು ಪ್ರಾರಂಭ ಮಾಡಿದರು. ಅವರು ವಿನಾ ಕಾರಣ ಮಾತನಾಡಲು ಪ್ರಾರಂಭ ಮಾಡಿದ ಸಂದರ್ಭದಲ್ಲಿ ಊರಿನವರು ಅವರಿಗೆ ಜೋರು ಮಾಡಿದ್ದಾರೆ.ಊರಿನವರು ನೀವು ಅಭಿವೃದ್ಧಿಯನ್ನು ಸಹಿಸದೆ ಈ ತರ ಮಾತನಾಡಬಾರದು ಎಂದರು.
ನಾನು ಮತ್ತೆ ಹೆಚ್ಚುವರಿ ಅನುದಾನ ಕೊಡಬೇಕು ಎಂದು ಒಬ್ಬಳು ವಿನಂತಿ ಮಾಡಿದರು. ಇನ್ನೊಂದು ಕಡೆಯಿಂದ ಹೋಗಲಿಕ್ಕೆ ಆಗಲ್ಲ ಅದಕ್ಕೆ ಅನುದಾನ ಕೊಡಬೇಕು ಎಂದು ಹೇಳಿದರು. ಆಯಿತು ಕೊಡುತ್ತೇನೆ ಎಂದು ಹೇಳಿದೆ. ಇನ್ನೂ ಐದು ಲಕ್ಷ ಸೇರಿಸಿ ಹತ್ತು ಲಕ್ಷ ಕೊಡುತ್ತೇನೆ ಎಂದು ಭರವಸೆ ಹೇಳಿದೆ. ಆ ಸಂದರ್ಭದಲ್ಲಿ ಬೇಡದ ರೀತಿಯಲ್ಲಿ ವರ್ತನೆ ಮಾಡಿದ ಕಾರಣಗೊಸ್ಕರ ಯಾವುದೋ ಪದಗಳು ಬಂದಿರಬಹುದು ಬಿಟ್ಟರೆ ಊರಿನವರು ಯಾರು ವಿರೋಧ ಮಾಡಲಿಲ್ಲ. ಊರಿನವರೇ ಅವರಿಗೆ ಜೋರು ಮಾಡಿ ಅವರನ್ನು ಓಡಿಸುವಂತಹ ಘಟನೆ ನಡೆದಿದೆ. ಅವರಿಗೆ ಅಭಿವೃದ್ಧಿ ಬೇಡ. ಶಾಸಕರು ಬಂದರೆ ಅದಕ್ಕೆ ಒಂದು ಪರಿಹಾರ ಸಿಗುತ್ತದೆ. ಅವರಿಗೆ ಪರಿಹಾರ ಸಿಗುವ ಅವಶ್ಯಕತೆ ಇಲ್ಲ. ಪರಿಹಾರ ಸಿಗದಿದ್ದರೆ ಅದನ್ನೇ ಹಿಡಿದುಕೊಂಡು ರಾಜಕೀಯ ಮಾಡಬಹುದು ಎಂಬ ಭ್ರಮೆಯಲ್ಲಿ ಇದ್ದರು. ನಾನು ಹೋದ ತಕ್ಷಣ ಅಭಿವೃದ್ಧಿಯಾಯಿತು. ನಾನು ಹೋದ ತಕ್ಷಣ ಅನುದಾನ ಘೋಷಣೆ ಮಾಡಿದೆ. ಅದಕ್ಕೆ ಅವರು ರಾಜಕಾರಣ ನಿಂತು ಹೋಯಿತಲ್ಲ ಭಾವನೆಯಲ್ಲಿ ಗಲಾಟೆಗೆ ಕಾರಣವಾದರು.
ಅಲ್ಲಿಯ ಸ್ಥಳೀಯರು ಇವತ್ತು ನನ್ನ ಮನೆಗೆ ಬಂದಿದ್ದರು. ಅವರು ಕಾಂಗ್ರೆಸ್ ನವರು ಮಾಡಿದಕ್ಕೆ ನೀವು ಬೇಜಾರು ಮಾಡಬಾರದು. ನಮ್ಮ ರಸ್ತೆ ಅಭಿವೃದ್ಧಿಯ ದೃಷ್ಠಿಯಿಂದ ನೀವು ಏನು ಘೋಷಣೆ ಮಾಡಿದ್ದೀರ ಅದನ್ನು ಕೊಡಬೇಕು ಎಂದು ವಿನಂತಿ ಮಾಡಿದ್ದಾರೆ. ಖಂಡಿತವಾಗಿ ನಾನು ಏನು ಭರವಸೆ ಕೊಟ್ಟಿzನೆ. ಯಾರೋ ಎರಡು ಕಾಂಗ್ರೆಸ್‌ನ ಕಾರ್ಯಕರ್ತರು ಹೇಳಿದ್ದರು ಎಂದು ನಾವು ಬೆಲೆ ಕೊಡುವ ಅವಶ್ಯಕತೆ ಇಲ್ಲ. ಪ್ರಾಮಾಣಿಕತೆಯಿಂದ ಹೇಳುತ್ತೇನೆ. ನನ್ನ ಕ್ಷೇತ್ರದ ಮತದಾರಿಗೆ ಅಲ್ಲಿಯ ಪ್ರಾಮಾಣಿಕವಾದ ಅಭಿವೃದ್ಧಿ ಕೆಲಸವನ್ನು ಶಾಸಕರ ನಿಧಿಯಿಂದ ಮಾಡಿ ಕೊಡುತ್ತೇನೆ. ಖಂಡಿತವಾಗಿಯೂ ಆ ಗ್ರಾಮದ ಅಭಿವೃದ್ಧಿಯನ್ನು ಮಾಡಿಯೇ ಮಾಡುತ್ತೇನೆ ಎಂದು ಶಾಸಕ ಹರೀಶ್ ಪೂಂಜ ಅವರು ಸುದ್ದಿ ಬಿಡುಗಡೆಗೆ ಪ್ರತಿಕ್ರಿಯೆ ನೀಡಿದ್ದಾರೆ.

ನೀವು ವಿರೋಧ ಪಕ್ಷದವರಾಗಿದ್ದು ಸರಕಾರವನ್ನು ಪ್ರಶ್ನೆ ಮಾಡ್ಲಿಕ್ಕಿಲ್ವಾ: ಹರೀಶ್ ಪೂಂಜ ಅವರೇ ‘ಇರೆನ್ ಪ್ರಶ್ನೆ ಮಲ್ಪುನ ರೈಟ್ಸ್ ಮಾತೆರೆಗ್ಲ ಉಂಡು’ ಎಂದು ಹೇಳಿದ ರಿಪಬ್ಲಿಕ್ ಟಿ.ವಿ.: ಸವಣಾಲು ಗ್ರಾಮದ ಪಿಲಿಕಲದಲ್ಲಿ ಶಾಸಕ ಹರೀಶ್ ಪೂಂಜ ಅವರನ್ನು ಸ್ಥಳೀಯರು ತರಾಟೆಗೆತ್ತಿಕೊಂಡಿರುವ ಮತ್ತು ತಡವಾಗಿ ಬಂದ ಬಗ್ಗೆ ಪ್ರಶ್ನೆ ಮಾಡಬಾರದು ಎಂದು ಹರೀಶ್ ಪೂಂಜ ಹೇಳಿರುವ ವಿಚಾರ ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳಲ್ಲಿ ವರದಿಯಾಗಿದೆ. ಖ್ಯಾತ ಪತ್ರಕರ್ತ ಅರ್ನಬ್ ಗೋಸ್ವಾಮಿ ಸಾರಥ್ಯದ ರಿಪಬ್ಲಿಕ್ ಕನ್ನಡ ನ್ಯೂಸ್ ಚಾನೆಲ್‌ನಲ್ಲಿ ‘ಸ್ವಕ್ಷೇತ್ರದ ಜನರಿಗೆ ಹರೀಶ್ ಪೂಂಜ ಕಿರಿಕ್’ ಎಂದು ವರದಿ ಪ್ರಸಾರವಾಗಿದೆ. ವರದಿಯಲ್ಲಿ ರಿಪಬ್ಲಿಕ್ ಕನ್ನಡದ ಸಂಪಾದಕ ಜಯಪ್ರಕಾಶ್ ಶೆಟ್ಟಿ ಉಪ್ಪಳ ಅವರು ಘಟನೆಯ ಕುರಿತು ವಿಶ್ಲೇಷಣೆ ನಡೆಸಿದ್ದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೆ ಇದನ್ನು ಸಮರ್ಥಿಸಲು ಆಗುವುದಿಲ್ಲ. ೫ ಲಕ್ಷ ಕೊಡ್ತೇನೆ ಎಂದು ಹೇಳಿದ್ದಾರೆ. ಹರೀಶ್ ಪೂಂಜ ಅವರು ನನ್ನನ್ನು ಜನರು ಪ್ರಶ್ನೆ ಮಾಡುವಂತಿಲ್ಲ ಎಂದು ಹೇಳಬಾರದು. ನೀವು ವಿರೋಧ ಪಕ್ಷದವನಾಗಿದ್ದು ಸರಕಾರವನ್ನು ಪ್ರಶ್ನೆ ಮಾಡ್ಲಿಕಿಲ್ವ. ಹಾಗೆನೇ ನಿಮ್ಮನ್ನು ಪ್ರಶ್ನೆ ಮಾಡುವ ಎಲ್ಲಾ ರೈಟ್ಸ್ ನಮಗೆ ಇದೆ. ಪ್ರಶ್ನೆ ಮಾಡಿ ನೀವು ದೇವರಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು. ರಾಜಕಾರಣಿ ಒಬ್ಬ ಸೇವಕ ಅಷ್ಟೇ. ಇವರು ಬಂದ ಕಾರು, ಕಾರಿಗೆ ಡೀಸಿಲ್, ಪೆಟ್ರೋಲ್, ಡ್ರೈವರ್ ಸಂಬಳ ಕೊಡುವುದು ನಾವು. ಕಾರು ಕೊಡ್ಸಿದ್ದು ನಾವು. ಅವರು ಚಾ ಕುಡಿಯುವ ಟಿ.ಎ. ಡಿ.ಎ. ನಾವು ಕೊಟ್ಟದ್ದು. ಮತ್ತೆ ಯಾಕೆ ಪ್ರಶ್ನೆ ಮಾಡಬಾರದು. ಪೂಂಜರೇ ನೀವು ಒಬ್ಬ ಅಗ್ರೆಸ್ಸಿವ್ ಎಂಎಲ್‌ಎ. ನೀವು ಬರುವುದು ಲೇಟ್ ಆಗಿರಬಹುದು. ನಿಮ್ಗೆ ಬೇರೆಯವರನ್ನು ಕಳಿಸಬಹುದಿತ್ತು. ಜನ ನಿಮ್ಮನ್ನು ಪ್ರಶ್ನೆ ಮಾಡಿಯೇ ಮಾಡ್ತಾರೆ. ಪ್ರಶ್ನೆ ಮಾಡಬಾರದು ಎಂದು ಹೇಳುವ ಯಾವುದೇ ನೈತಿಕ ಹಕ್ಕು ನಿಮಗೆ ಇಲ್ಲ. ನೆಹರೂ ಅವರು ಪ್ರಧಾನಮಂತ್ರಿ ಆದಾಗ ಒಬ್ಳು ಅಜ್ಜಿ ಬಂದು ನಿಲ್ಸಿ ಕೇಳ್ತಾಳಂತೆ. ಅಜ್ಜಿ ಜೋರಾಗಿ ಮಾತಾಡ್ತಾರಂತೆ. ನೀನು ಬಂದು ಏನಾಯ್ತು. ಮೊದಲು ಬ್ರಿಟೀಷರು ಇದ್ರಲ್ವ. ಈಗ ನೀನು ಬಂದು ಏನ್ ಬದಲಾವಣೆ ಮಾಡ್ದೆ ಎಂದು ಅಜ್ಜಿ ಕೇಳ್ತಾರಂತೆ. ಆಗ ನೆಹರೂ ಅವರು ಅಜ್ಜಿ…ಬದಲಾವಣೆ ಅಂತ ಅಲ್ಲ. ಅಟ್ಲೀಸ್ಟ್ ನಿಂಗೆ ನನ್ನನ್ನು ಪ್ರಶ್ನೆ ಮಾಡುವ ಹಕ್ಕು ಬಂದಿದೆ ಎಂದ್ರಂತೆ. ಹಾಗೆನೇ ಹರೀಶ್ ಪೂಂಜ ಅವರೇ ‘ಇರೆನ್ ಪ್ರಶ್ನೆ ಮಲ್ಪುನ ರೈಟ್ಸ್ ಮಾತೆರ‍್ಗಲ ಉಂಡು’. ದೇವರಿಗೆ ಇಡ್ತೇನೆ ಎನ್ನುವುದು ನಿಮಗೆ ಶೋಭೆ ತರುವುದಿಲ್ಲ. ನಿಮ್ಮ ಆ ಆಗ್ರೆಸ್ ಸ್ವಲ್ಪ ಕಡಿಮೆ ಮಾಡಿದ್ರೆ ಒಳ್ಳೇಯದು. ಮುಂಗೋಪವನ್ನು ಸಾರ್ವಜನಿಕ ಜೀವನದಲ್ಲಿ ಎಲ್ಲವೂ ತಡ್ಕೋಬೇಕಾಗುತ್ತದೆ ಎಂದು ಜಯಪ್ರಕಾಶ್ ಶೆಟ್ಟಿ ಉಪ್ಪಳ ಅವರು ಬುದ್ಧಿವಾದ ಹೇಳಿದ್ದಾರೆ.

ಟಿ.ವಿ. ೯ ವರದಿ: ಪ್ರಶ್ನೆ ಮಾಡಿದ ಗ್ರಾಮಸ್ಥರಿಗೆ ದೇವರ ಹೆಸರಿನಲ್ಲಿ ಹರೀಶ್ ಪೂಂಜಾ ಬ್ಲ್ಯಾಕ್‌ಮೇಲ್, ತಡವಾಗಿ ಬಂದ ಬಿಜೆಪಿ ಎಂಎಲ್‌ಎಗೆ ಗ್ರಾಮಸ್ಥರ ಹಿಗ್ಗಾಮುಗ್ಗಾ ಕ್ಲಾಸ್, ಎಂಎಲ್‌ಎಯನ್ನು ಪ್ರಶ್ನಿಸಿz ತಪ್ಪಾಯಿತಾ, ಅವಾಚ್ಯವಾಗಿ ನಿಂದಿಸಿದ ಪೂಂಜಾ ಎಂದು ಟಿ.ವಿ.೯ನಲ್ಲಿ ವರದಿ ಪ್ರಸಾರವಾಗಿದೆ.
ನ್ಯೂಸ್ ೧೮ ಕನ್ನಡ ವಾಹಿನಿ ವರದಿ: ಗ್ರಾಮಸ್ಥರ ಜೊತೆ ಶಾಸಕ ಹರೀಶ್ ಪೂಂಜ ಕಿರಿಕ್, ಎಂಎಲ್‌ಎಗೆ ಯಾಕೆ ತಡವಾಗಿದೆ ಎಂದು ಪ್ರಶ್ನೆ ಮಾಡುವ ಹಕ್ಕು ನಿಮಗೆ ಇಲ್ಲ, ಆ ತರ ಪ್ರಶ್ನೆ ಮಾಡಿದರೆ ದೇವರ ಮೇಲೆ ಆಣೆ ಇಡುತ್ತೇನೆ ಎಂದು ಜನರಿಗೆ ಶಾಸಕ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ಅಲ್ಲದೆ ಪ್ರಶ್ನೆ ಮಾಡಿದ ಜನರಿಗೆ ಅವಾಚ್ಯವಾಗಿ ನಿಂದಿಸಿದ್ದಾರೆ. ಇದಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ನ್ಯೂಸ್ ೧೮ ಕನ್ನಡ ವಾಹಿನಿಯಲ್ಲಿ ವರದಿ ಮಾಡಲಾಗಿದೆ.

75 ಮನೆಗಳಿಗೆ ಸಂಪರ್ಕ ರಸ್ತೆ: 
ಹೋಗಲು ಆಗುತ್ತಿಲ್ಲ ಅಷ್ಟು ಸಮಸ್ಯೆಯಾಗಿತ್ತು. ಗ್ರಾಮಸ್ಥರು ಸೇರಿ ಸ್ವಲ್ಪ ಮಟ್ಟಿಗೆ ಸರಿ ಮಾಡಿದ್ದಾರೆ. ಶಾಸಕರು ಬಂದಿದ್ದಾರಂತೆ, ಗಲಾಟೆಯಾಗಿದೆಯಂತೆ, ನನಗೆ ಗೊತ್ತಿಲ್ಲ. ಡಿಸಿ ಬಂದಾಗಲೂ ನಾನು ಇರಲಿಲ್ಲ. ಈ ರಸ್ತೆ ಸುಮಾರು 75 ಮನೆಗೆ ಸಂಪರ್ಕ ಕಲ್ಪಿಸುತ್ತದೆ. ಒಂದು ವಾರ ಈ ರಸ್ತೆಯಲ್ಲಿ ವಾಹನಗಳು ಹೋಗುತ್ತಿರಲಿಲ್ಲ. ಜನರು ನಡೆದುಕೊಂಡೇ ಹೋಗುತ್ತಿದ್ದರು. ಈಗ ಸ್ವಲ್ಪ ಸರಿಯಾಗಿದೆ.
- ಈಶ್ವರ್ ಭಟ್, ಸ್ಥಳೀಯರು
----------------
ಸ್ಥಳೀಯರು-ಶಾಸಕರಿಗೆ ಜಟಾಪಟಿ: 
ಮೊನ್ನೆ ಮಳೆಗೆ ರಸ್ತೆ ಹೋಗಿದ್ದು, ಹೋಗಲು ಆಗುತ್ತಿರಲಿಲ್ಲ.  ಡಿಸಿ, ಶಾಸಕರು ನೋಡಲು ಬಂದಿದ್ದಾರೆ, ಭರವಸೆ ಕೊಟ್ಟಿದ್ದಾರೆ, ಬೇರೆ ರಸ್ತೆ ಮಾಡಿ ಕೊಡುತ್ತೇವೆ ಎಂದು ಹೇಳಿದ್ದಾರೆ. ಸ್ವಲ್ಪ ಸ್ಥಳೀಯರೇ ಸರಿ ಮಾಡಿದ್ದಾರೆ. ಈ ಭಾಗದಲ್ಲಿ 40 ಮನೆಗಳಿವೆ. ಶಾಸಕರು ಬಂದು ಭರವಸೆ ಕೊಟ್ಟಿದ್ದಾರೆ. ಇಲ್ಲಿ ತನಕ ಎಲ್ಲಿ ಹೋಗಿದ್ದೀರಿ, ಇವತ್ತು ಯಾಕೆ ಬಂದದ್ದು ಎಂದು ಸ್ಥಳೀಯರು ಪ್ರಶ್ನೆ ಮಾಡಿದ್ದರು. ಅದಕ್ಕೆ ಶಾಸಕರು, ನೀವು ಹಾಗೆಲ್ಲ ಮಾತನಾಡಬಾರದು, ಇವತ್ತು ಯಾಕೆ ಬಂದದ್ದೆಂದು ಶಾಸಕರಿಗೆ ಪ್ರಶ್ನಿಸಬಾರದು ಎಂದು ಹೇಳಿದರು. ಸ್ಥಳೀಯರಿಗೆ ಮತ್ತು ಶಾಸಕರಿಗೆ ಸ್ವಲ್ಪ ಜಟಾಪಟಿಯಾಯಿತು.
- ರೋನಾಲ್ಟ್ ಡಿಸೋಜ, ಸ್ಥಳೀಯರು
----------------
ರಸ್ತೆಯನ್ನು ಸರಿಪಡಿಸಿ: 
ಹೋಗಲು ತುಂಬಾ ಕಷ್ಟವಾಗುತ್ತಿದೆ, ರಸ್ತೆಯನ್ನು ಅದಷ್ಟು ಬೇಗ ಸರಿಮಾಡಬೇಕು. ಡಿಸಿ ಬಂದಾಗ ಇರಲಿಲ್ಲ, ಶಾಸಕರು ಬಂದಾಗ ಕೂಡ ಇರಲಿಲ್ಲ. ಸವಣಾಲುಗೆ 3 ಕಿ.ಮೀ ಇದೆ ಹೋಗಲು ತುಂಬಾ ಕಷ್ಟವಾಗುತ್ತದೆ. ಎಲ್ಲ ಕಡೆ ಡಾಂಬರು ಆಗಿದೆ. ಇಲ್ಲಿ ಆಗಿಲ್ಲ. ಆ ವಿಚಾರದಲ್ಲಿ ಸ್ವಲ್ಪ ಶಾಸಕರು ಮತ್ತು ಸ್ಥಳೀಯರಲ್ಲಿ ಮಾತಿನ ಚಕಮಕಿ ನಡೆಯಿತು.
- ಜಗದೀಶ್, ಸ್ಥಳೀಯರು
------------
ಶಾಸಕರಿಂದ ಅಂಥ ಪದ ಸಲ್ಲದು: 
ಶಾಸಕರು ನಿನ್ನೆ ಬಂದದ್ದು ವಿಚಿತ್ರ. ಶಾಸಕರ ಬಾಯಲ್ಲಿ ಬೇಡದ ಪದ ಬರಬಾರದು. ಅವರು ಒಬ್ಬ ಒಳ್ಳೆಯ ಶಾಸಕರು. ಆದರೆ ನಿಮಗೆ ಏನು ತೊಂದರೆಯಾಗಿದೆ ಎಂದು ಪರಿಸ್ಥಿತಿಯ ಬಗ್ಗೆ ವಿಚಾರಿಸಬೇಕಿತ್ತು. ಅದನ್ನು ಬಿಟ್ಟು ಬೇಡದ ಪದ ಮಾತನಾಡಿದ್ದಾರೆ.
- ಮಹಾಬಲ, ಸ್ಥಳೀಯರು
--------------
ಅಪಪ್ರಚಾರ ಮಾಡಿದ್ದು ಯಾರು?: 
ನಿನ್ನೆ ಶಾಸಕರ ಮೇಲೆ ಆಪಾದನೆ ಬಂತು. ಮಾರ್ಗವನ್ನು ನಿಲ್ಲಿಸಿದ್ದು ನಾವೇ ಅಂತ. ಎಷ್ಟೋ ಹಣ ಮಂಜೂರಾಗಿದೆ ಅಂತೆ. ಅದನ್ನು ನಿಲ್ಲಿಸುವುದು ಅಂತ ಅಪಾದನೆಯಾಗಿದೆ. ನಿನ್ನೆ ಹೆಂಗಸರಿಗೆ ಹೊಡೆಯಲು ಹೋಗಿದ್ದೇವೆ ಎಂದು ಪ್ರಚಾರವಾಗಿದೆ. ಅದು ಯಾರು ಹೇಳಿದ್ದು ಎಂದು ಗೊತ್ತಾಗಬೇಕು. ಇನ್ನು ಮುಂದೆ ಈ ರಸ್ತೆಯ ಬಗ್ಗೆ ತಲೆ ಹಾಕುವುದಿಲ್ಲ.
- ಉಮೇಶ್, ಸ್ಥಳೀಯರು
--------------
ರಸ್ತೆ ಕುಸಿದಾಗ ಬಾರದ ಶಾಸಕರು ಈಗ ಬಿಟ್ಟಿ
ಪ್ರಚಾರ ತೆಗೆದುಕೊಳ್ಳುವುದು ಬೇಡ ಅಂತ ಹೇಳಿದ್ದೇವೆ: 
ನಾವು ಸ್ಥಳೀಯರು ಮತ ಕೊಟ್ಟು ಅವರನ್ನು ಗೆಲ್ಲಿಸಿದ್ದೇವೆ. ಕಷ್ಟದ ಸಮಯದಲ್ಲಿ ಬಾರದ ಶಾಸಕರಿಗೆ, ನೀವು ಈಗ ಯಾಕೆ ಬಂದದ್ದು ಎಂದು ಕೇಳಿದ್ದೇವೆ. ಪಕ್ಷದ ಕಾರ್ಯಕರ್ತನಾಗಿ ಕೇಳಿದ್ದಲ್ಲ, ಸವಣಾಲು ಗ್ರಾಮದ ನಾಗರಿಕರಾಗಿ ಮಾತನಾಡಿದ್ದು. ಇದನ್ನು ರಾಜಕೀಯವಾಗಿ ಬಳಸುವ ಅಗತ್ಯ ಇಲ್ಲ. ನಾನು 309 ಓಟು ತೆಗೆದುಕೊಂಡು ಸೋತವನು. ಅದರೆ ಆ 309 ಮಂದಿ ನನ್ನ ಬಳಿ ಬಂದು ಕಷ್ಟ ಹೇಳಿದಾಗ ಸ್ಪಂದನೆ ಕೊಟ್ಟಿದ್ದು ತಪ್ಪು ಎಂದು ಆದರೆ ನಾವು ಏನು ಮಾಡಲಾಗದು. 10 ದಿನ ನಿರಂತರ ಮಳೆ ಬಂದು ರಸ್ತೆ ಕುಸಿದಿತ್ತು. ಆಗ ಡಿಸಿ, ಸಚಿವರು, ಎನ್.ಡಿ.ಆರ್.ಎಫ್.ನವರು ಬಂದು ಕ್ರಮ ತೆಗೆದುಕೊಂಡರು. ಆದರೆ ಸ್ಥಳೀಯ ಶಾಸಕರು ಆಗ ಬೆಂಗಳೂರಿನಲ್ಲಿದ್ದರು. ಅವತ್ತು ಬರಲಿಲ್ಲ. ನಾವೇ ರಸ್ತೆಯನ್ನು ಕಲ್ಲು, ಮಣ್ಣು ಹಾಕಿ ಸರಿ ಮಾಡಿದ್ದು. ಈಗ ಬಂದು ಬಿಟ್ಟಿ ಪ್ರಚಾರ ತೆಗೆದುಕೊಳ್ಳುವುದು ಬೇಡ ಎಂದು ಹೇಳಿದ್ದೇವೆ. ಅವರು ಅನುದಾನ ಕೊಡಲಿಕ್ಕೆ ನಮ್ಮಿಂದ ಯಾವುದೇ ಅಡ್ಡಿ ಇಲ್ಲ. ಆದರೆ, ನಾಲ್ಕು ವರ್ಷದಲ್ಲಿ ಯಾವುದೇ ಅನುದಾನ ಕೊಟ್ಟಿಲ್ಲ. ಕಾಂಗ್ರೆಸ್ ಸರ್ಕಾರ ಇರುವುದರಿಂದ ಅನುದಾನ ಸಿಗುತ್ತಿಲ್ಲ ಎಂದು ಹೇಳುವ ಅವರು, ಈಗ ಶಾಸಕರ ನಿಧಿಯಿಂದ 5 ಲಕ್ಷ ಕೊಡುತ್ತೇವೆ ಎಂದು ಹೇಳುತ್ತಾರೆ. ಅದು ಕೂಡ ಕಾಂಗ್ರೆಸ್‌ ಸರ್ಕಾರದಿಂದ ಬರುವುದಲ್ವ? ಶಾಸಕರು ಅವರ ಕೈಯಿಂದ ಹಾಕಿ ಕೊಡುವುದು ಅಲ್ಲ. ಜನರಿಗೆ ತಪ್ಪ ಮಾಹಿತಿ ಹೋಗಬಾರದು ಎಂದು ನಾವು ಪ್ರತಿಭಟನೆ ಮಾಡಿದ್ದೇವೆ.
- ರಾಜೇಶ್ ಭಟ್, ಸ್ಥಳೀಯರು
----------------
ಶಾಸಕರನ್ನು ನಿಂದಿಸಿರುವುದು ಖಂಡನಾರ್ಹ: 
ಈ ಸಾಲಿನ ಮಳೆಯಿಂದ ಎಲ್ಲ ಕಡೆ ಹೆಚ್ಚಿನ ಅನಾಹುತಗಳು ಆಗಿವೆ. ನಮ್ಮ ಶಾಸಕರು ಬೆಳ್ತಂಗಡಿ ತಾಲೂಕಿನ ಎಲ್ಲ ಗ್ರಾಮಗಳಿಗೆ ಭೇಟಿ ನೀಡಿದ್ದಾರೆ. ಮೇಲಂತಬೆಟ್ಟು ಗ್ರಾಪಂನ ಸವಣಾಲು ಗ್ರಾಮಕ್ಕೆ ಬರುವಾಗ ನಾಲ್ಕು ದಿನ ತಡವಾಯಿತು. ರಸ್ತೆಯ ವಿಚಾರದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು, ಸದಸ್ಯರು, ಸ್ಥಳೀಯರು ಮಾಹಿತಿ ಕೊಟ್ಟಾಗ ವಿರೋಧ ಪಕ್ಷದವರು ಬಂದು ಬೇರೆ ಬೇರೆ ಪದಗಳಿಂದ ಅವರನ್ನು ಬೈದಿದ್ದಾರೆ. ತಾಲೂಕಿನ ಪ್ರತಿನಿಧಿಯಾಗಿ ಶಾಸಕರು ಬಂದಾಗ, ನೀವು ಬರಬಾರದೆಂದು ಹೇಳುವ ಅಧಿಕಾರ ಯಾರಿಗೂ ಇಲ್ಲ. ನಾವು ಅದನ್ನು ನಾವು ಹೇಳಬಾರದು. ಸರ್ಕಾರದಿಂದ ಯಾವುದೇ ಅನುದಾನ ಇಲ್ಲದಿದ್ದರೂ ಅವರು ಶಾಸಕರ ನಿಧಿಯಿಂದ 5 ಲಕ್ಷ ಅನುದಾನ ಕೊಡುತ್ತೇನೆ ಎಂದು ಹೇಳಿದರು. ಅವರು ಆ ಮಾತನ್ನು ಕೇಳಲಿಲ್ಲ. ಯಾವುದೇ ಮಾತನ್ನೂ ಕೇಳಲಿಲ್ಲ. ಅದನ್ನು ನಾವು ಖಂಡಿಸುತ್ತೇವೆ. ಯಾವುದೇ ಪಕ್ಷದವರು ಬಂದಾಗ ಅವರಿಗೆ ಗೌರವ ಕೊಟ್ಟು ಮಾತನಾಡಬೇಕು. ಶಾಸಕರನ್ನು ನಿಂದಿಸಿರುವುದು ಬೇಸರದ ಸಂಗತಿ.
- ಸವಿತಾ, ಮೇಲಂತಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ
----------------
ಸಂಬಂಧಪಡದವರಿಂದ ದುರ್ವರ್ತನೆ: 
ವಿಪರೀತ ಮಳೆಯಿಂದ ರಸ್ತೆಯ ಒಂದು ಬದಿ ಕುಸಿದಿದೆ. ವಿಎ, ಪಿಡಿಒಗಳಿಗೆ ತಿಳಿಸಿದ ನಂತರ ತಹಶೀಲ್ದಾರ್ ಪರಿಶೀಲನೆ ನಡೆಸಿದ್ದರು. ರಸ್ತೆ ಬಂದ್ ಮಾಡುವಂತೆ ಸೂಚಿಸಿದ್ದರು. ರಸ್ತೆ ಹಾನಿಗೀಡಾಗಿರುವುದರಿಂದ ಬದಲಿ ರಸ್ತೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಬಂದಾಗ ತಿಳಿಸಿದ್ದೆವು. ಶಾಸಕರಿಗೆ ಅನಿವಾರ್ಯ ಕಾರಣಗಳಿಂದ ಆಗ ಭೇಟಿ ನೀಡುವುದು ಸಾಧ್ಯವಾಗಿರಲಿಲ್ಲ. ಮೊನ್ನೆ ಶಾಸಕರು ಬಂದಾಗ ಪಂಚಾಯತ್‌ನವರು ಹಾಗೂ ಅಲ್ಲಿನ ಸ್ಥಳೀಯ ಕೆಲವು ಮಂದಿಯನ್ನು ಮಾತ್ರ ಕರೆದಿದ್ದೆವು. ಶಾಸಕರು ಸ್ಪಂದಿಸಿ 5 ಲಕ್ಷ ರೂ. ಅನುದಾನ ನೀಡುತ್ತೇನೆ ಎಂದರು. ಸಂಬಂಧಪಡದವರು ಸೇರಿಕೊಂಡು ಶಾಸಕರಿಗೆ ಬೇಡದ ಪದ ಬಳಕೆ ಮಾಡಿದ್ದಾರೆ. ಎರಡು ಮಂದಿ ಹೀನಾಯವಾಗಿ ವರ್ತಿಸಿದ್ದು, ನಾವು ಖಂಡಿಸುತ್ತೇವೆ. ಒಬ್ಬ ಜನಪ್ರತಿನಿಧಿ ಬರುವಾಗ ಅಲ್ಲಿ ವಿನಃ ಕಾರಣ ಬೇರೆ ಪಕ್ಷದವರು ಬಂದು ಇಂಥ ಸನ್ನಿವೇಶ ಸೃಷ್ಟಿಸಿ ಆಪಾದನೆ ಮಾಡುವುದು ಸರಿಯಲ್ಲ.
- ಲೋಕನಾಥ್ ಶೆಟ್ಟಿ, ಮೆಲಂತಬೆಟ್ಟು ಗ್ರಾಪಂ ಉಪಾಧ್ಯಕ್ಷ
-----------
ಸವಣಾಲು ಅಭಿವೃದ್ಧಿಗೆ ಜಯಾನಂದ, ರಾಜೇಶ್ ಅಡ್ಡಿ: 
ನಿನ್ನೆ ಶಾಸಕರು ಬರುವಾಗ ಆ ಸ್ಥಳದಲ್ಲಿದ್ದೆ. ಡಿಸಿ ಬರುವಾಗ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಇದ್ದರು. ಶಾಸಕರು ಬರುವಾಗ ಎರಡು ದಿನ ತಡವಾಯಿತು ಎಂದು ಇವರದ್ದು ಖಂಡನೆ. ಶಾಸಕರು ಬಂದು ರಸ್ತೆ ನೋಡಬೇಕು ಎಂಬುದು ಗ್ರಾಮಸ್ಥರ ಬೇಡಿಕೆಯಾಗಿತ್ತು. ಶಾಸಕರು ಪರಿಶೀಲಿಸಿ ಜನವರಿಯಲ್ಲಿ ಕಾಮಗಾರಿ ಮಾಡಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು. ಅದಕ್ಕೆ ಇವರು ನೀವು ಹೇಳುವುದು ಮಾತ್ರ, ಮಾಡುವುದಿಲ್ಲ ಎಂದು ಹೇಳಿದರು. ಜಯಾನಂದ ಮತ್ತು ರಾಜೇಶ್‌ಗೆ ನಮ್ಮ ಸವಣಾಲು ಅಭಿವೃದ್ಧಿಯಾಗಬಾರದು. ಅವರು ಅಭಿವೃದ್ಧಿ ಮಾಡಲ್ಲ, ಮಾಡುವರನ್ನು ಬಿಡುವುದಿಲ್ಲ.
- ಪ್ರಭಾಕರ್ ಆಚಾರ್ಯ, ಸ್ಥಳೀಯರು
------------------
ಶಾಸಕರು ಅಭಿವೃದ್ಧಿಯಲ್ಲಿ ರಾಜಕೀಯ ಮಾಡಿಲ್ಲ: 
ನಿನ್ನೆ ಘಟನೆಯಿಂದ ಬೇಸರವಾಯಿತು. ಶಾಸಕರಿಗೆ ರಾಜ್ಯದ ಜವಾಬ್ದಾರಿ ಇರುವುದರಿಂದ ಅವರು ಅಲ್ಲಿ ಇದ್ದರು. ಅಂತಹ ಸಂದರ್ಭ ತಾಲೂಕಿನಾದ್ಯಂತ ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿ, ಕಾಲ್ ಸೆಂಟರ್ ಮಾಡಿ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಅವರು ಕೈಯಲ್ಲಾದ ಸಹಾಯ ಮಾಡಿದ್ದಾರೆ. ಕೆಲಸ ಕಾರ್ಯ ಮುಗಿದ ನಂತರ ಮತ್ತೆ ತಾಲೂಕಿಗೆ ಬಂದಿದ್ದು, ನಾವು ಮನವಿ ಕೊಟ್ಟಾಗ ಸ್ಪಂದಿಸಿ ಬಂದರು. ಆಗ ಉದ್ದೇಶಪೂರ್ವಕವಾಗಿ ಅವರನ್ನು ನಿಂದಿಸುವ ಕೆಲಸವಾಗಿದೆ. ಶಾಸಕರು ಅಭಿವೃದ್ಧಿ ದೃಷ್ಟಿಯಲ್ಲಿ ರಾಜಕೀಯ ಮಾಡಲಿಲ್ಲ. ಎಲ್ಲ ಕಡೆ ಅನುದಾನ ನೀಡಿದ್ದಾರೆ. ಸರಕಾರದ ಅನುದಾನ ನೋಡಿಕೊಂಡು ಕೆಲಸ ಕೈಗೆತ್ತಿಕೊಂಡಿದ್ದಾರೆ. ಅಭಿವೃದ್ಧಿ ದೃಷ್ಟಿಯಲ್ಲಿ ಪಂಚಾಯತ್ ಕೂಡ ರಾಜಕೀಯ ಮಾಡಲಿಲ್ಲ.
- ಸಂತೋಷ್ ಕುಮಾರ್, ಮೇಲಂತಬೆಟ್ಟು ಗ್ರಾಪಂ ಸದಸ್ಯ
Exit mobile version