ಬೆಳ್ತಂಗಡಿ: ತಾಲೂಕಿನ ಸವಣಾಲು ಗ್ರಾಮದ ದೇವಸ ಮನೆಯ ಶೇಖರ್ ಗೌಡ ದೇವಸ ಆ.೧೪ರಂದು ಸುಪ್ರೀಂ ಕೋರ್ಟ್ ಹಿರಿಯ ವಕೀಲರಾಗಿ ನೇಮಕಗೊಂಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಸವಣಾಲು ಗ್ರಾಮದಲ್ಲಿ ಹುಟ್ಟಿ ಬೆಳೆದಿರುವ ಶೇಖರ ಗೌಡ, ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದರು. ಮಂಗಳೂರು ಮತ್ತು ಬೆಂಗಳೂರಿನಲ್ಲಿ ಎರಡು ವರ್ಷ ವಕೀಲ ವೃತ್ತಿ ಮಾಡಿದ್ದು, ನಂತರ ದೆಹಲಿಯ ನ್ಯಾಯಾಲಯಗಳಲ್ಲಿ ಕಳೆದ ೨೦ ವರ್ಷಗಳಿಂದ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಂಗಳೂರಿನ ಹೈಕೋರ್ಟ್, ಎಲ್.ಡಿ. ಸಿಟಿ ಸಿವಿಲ್ ಕೋರ್ಟ್ ಸಹಿತ ಹಲವು ನ್ಯಾಯಾಲಯಗಳಲ್ಲಿ ವಕೀಲಿಕೆ ಮಾಡಿದ್ದು, ೨೦೦೪ರ ಬಳಿಕ ದೆಹಲಿಯಲ್ಲಿರುವ ಸರ್ವೋಚ್ಚ ನ್ಯಾಯಾಲಯದಲ್ಲಿ ಕಕ್ಷಿದಾರರಿಗೆ ಸೇವೆ ನೀಡುತ್ತಿದ್ದಾರೆ. ಇದುವರೆಗೆ ಸುಮಾರು ೩೦೦೦ ಪ್ರಕರಣಗಳಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ.
ದುರ್ಬಲರಿಗೆ ಉಚಿತ ಕಾನೂನು ಸೇವೆ: ಹಳ್ಳಿಯಲ್ಲಿ ಬೆಳೆದು ದಿಲ್ಲಿಗೆ ಹೋಗಿರುವ ಶೇಖರ ಗೌಡ ಹಲವು ಪ್ರಕರಣಗಳಲ್ಲಿ ಉಚಿತ ಕಾನೂನು ನೆರವು, ಸೇವೆ ನೀಡಿದ್ದಾರೆ. ಮೋಟಾರು ವಾಹನ ಅಪಘಾತಗಳು, ಕಾರ್ಮಿಕ ವಿವಾದಗಳು ಮತ್ತು ಅಪರಾಧ ವಿಷಯಗಳಲ್ಲಿ, ಅಗತ್ಯವಿರುವವರಿಗೆ ನ್ಯಾಯ ಒದಗಿಸುವಲ್ಲಿ ಶ್ರಮಿಸಿದ್ದಾರೆ. ಪರಿಸರ ಸಂರಕ್ಷಣೆಯ ಕಾರ್ಯಕ್ರಮಗಳಲ್ಲೂ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ತಮ್ಮ ಕಚೇರಿಯಲ್ಲಿ ಕಳೆದ ೨೦ ವರ್ಷಗಳಿಂದ ಹಲವಾರು ಕಿರಿಯ ವಕೀಲರಿಗೆ ಅವಕಾಶ ನೀಡಿದ್ದಾರೆ. ಎರಡು ವರ್ಷ ಅನುಭವದ ನಂತರ ಕಿರಿಯರನ್ನು ಸ್ವತಂತ್ರ ವೃತ್ತಿ ನಡೆಸಲು ಪ್ರೇರಣೆ ನೀಡುತ್ತಿರುವುದು ವಿಶೇಷ. ಇವರ ಗರಡಿಯಲ್ಲಿ ಪಳಗಿದ ೧೦ ಮಂದಿ ವಕೀಲರಾಗಿ ಹೆಸರು ಮಾಡಿದ್ದಾರೆ. ದೇಶಾದ್ಯಂತ ವಿವಿಧ ಕಾನೂನು ಕಾಲೇಜುಗಳ ಹಲವಾರು ಕಾನೂನು ವಿದ್ಯಾರ್ಥಿಗಳಿಗೆ ತಮ್ಮ ಕಚೇರಿಯಲ್ಲಿ ಇಂಟರ್ನ್‌ಶಿಪ್ ಮಾಡಲು ಅವಕಾಶ ಕಲ್ಪಿಸಿದ್ದಾರೆ.
ಮಡಿಕೇರಿಯ ಅಳಿಯ: ಮಡಿಕೇರಿ ತಾಲೂಕು ಪೆರಾಜೆ ಗ್ರಾಮದ ಕುಂದಲ್ಪಾಡಿ ಚಂದ್ರಶೇಖರ ಗೌಡ- ಜಾನಕಿ ದಂಪತಿ ಪುತ್ರಿ ಚಂದ್ರಕಲಾರ ಪತಿಯಾಗಿರುವ ಶೇಖರ್ ಗೌಡ, ಹಲವು ವರ್ಷಗಳಿಂದ ಪತ್ನಿ, ಮಕ್ಕಳಾದ ಅಭಿಷೇಕ ದೇವಸ ಹಾಗೂ ಕುಮಾರ್ ರೇಷಿಕಾ ದೇವಸ ಕುಟುಂಬದೊಂದಿಗೆ ದೆಹಲಿಯಲ್ಲಿ ನೆಲೆಸಿದ್ದಾರೆ.