Site icon Suddi Belthangady

ರಾಣಿಝರಿಯಲ್ಲಿ ಗುಡ್ಡ ಬಿರುಕು ಬಿಟ್ಟಿಲ್ಲ: ಆತಂಕ ನಿವಾರಿಸಿದ ಅಧಿಕಾರಿಗಳು

ಬೆಳ್ತಂಗಡಿ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ರಾಣಿಝರಿ ಎಡ್ಜ್ ಪಾಯಿಂಟ್ ಬಿರುಕು ಬಿಟ್ಟಿರುವ ರೀತಿ ಗೂಗಲ್ ಮ್ಯಾಪ್‌ನಲ್ಲಿ ಗೋಚರಿಸಿದ ಫೋಟೋ ವೈರಲ್ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿರುವ ಅಧಿಕಾರಿಗಳು, ಯಾವುದೇ ಬಿರುಕು ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಚಿಕ್ಕಮಗಳೂರು-ದಕ್ಷಿಣ ಕನ್ನಡ ಗಡಿಭಾಗದಲ್ಲಿರುವ ರಾಣಿ ಝರಿ ಪ್ರವಾಸಿತಾಣದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಬಾರಿ ಮಳೆಯಾಗುತ್ತಿದೆ. ಗೂಗಲ್ ಮ್ಯಾಪ್‌ನಲ್ಲಿ ರಾಣಿ ಝರಿ ಪ್ರದೇಶ ಬಿರುಕು ಬಿಟ್ಟಿರುವ ರೀತಿಯಲ್ಲಿ ಕಂಡುಬಂದಿದ್ದು ಈ ಹಿನ್ನೆಲೆಯಲ್ಲಿ ಪುತ್ತೂರು ಉಪವಿಭಾಗಾಧಿಕಾರಿಗಳು ರಾಣಿಝರಿ ಸಮೀಪ ಭಾರಿ ಮಳೆಯಾಗುತ್ತಿರುವುದರಿಂದ ಭೂಮಿ ಕುಸಿತ ಸಾಧ್ಯತೆ ಪರಿಶೀಲನೆಗೆ ಚಿಕ್ಕಮಗಳೂರು ಉಪವಿಭಾಗಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಕೂಡಲೇ ಚಿಕ್ಕಮಗಳೂರು ಉಪವಿಭಾಗಧಿಕಾರಿಗಳ ಸೂಚನೆಯ ಮೇರೆಗೆ ನಿಡುವಾಳೆ ಮತ್ತು ಸುಂಕಸಾಲೆ ಗ್ರಾಮ ಲೆಕ್ಕಾಧಿಕಾರಿಗಳಾದ ಜಯಪ್ರಕಾಶ್ ಮತ್ತು ಮಹೇಶ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಆದರೆ ಅಲ್ಲಿ ಯಾವುದೇ ಭೂಕುಸಿತ ಹಾಗೂ ಬಿರುಕು ಕಂಡು ಬಂದಿಲ್ಲ ಎಂದು ತಿಳಿಸಿದ್ದಾರೆ.

ಇದರೊಂದಿಗೆ ಕೆಲದಿನಗಳಿಂದ ಘಟ್ಟದ ಬುಡದಲ್ಲಿರುವ ಬೆಳ್ತಂಗಡಿ ತಾಲೂಕಿನ ಕಿಲ್ಲೂರು, ಮಲವಂತಿಗೆ, ದಿಡುಪೆ, ಕಡಿರುದ್ಯಾವರ ಮುಂತಾದ ಗ್ರಾಮಗಳ ನಿವಾಸಿಗಳಲ್ಲಿ ಉಂಟಾಗಿದ್ದ ಆತಂಕ ಕೆಲಮಟ್ಟಿಗೆ ದೂರವಾದಂತಾಗಿದೆ.

Exit mobile version