ಬೆಳ್ತಂಗಡಿ: ನದಿಯಲ್ಲಿ ಏಕಾಏಕಿ ನೀರು ಏರಿಕೆ ಉಂಟಾದಾಗ ನದಿ ಮಧ್ಯದ ದಿಬ್ಬದಲ್ಲಿ – ಸಿಲುಕಿದ್ದ ದನಗಳನ್ನು ರಕ್ಷಿಸಿದ ಘಟನೆ ಆ.21ರ ಸಂಜೆ ನಡೆದಿದೆ. ನಿಡಿಗಲ್‌ನಲ್ಲಿ ಹರಿಯುವ ನೇತ್ರಾವತಿ ನದಿಯ ಮಧ್ಯದ ದಿಬ್ಬದಲ್ಲಿ ಮೂರು ದನಗಳು ಮೇಯುತ್ತಿದ್ದವು. ಈ ವೇಳೆ ನದಿಯಲ್ಲಿ ನೀರು ಏಕಾಏಕಿ ಏರಿಕೆಯಾಗಿದೆ. ನದಿಯ ಮಧ್ಯ ಭಾಗದಲ್ಲಿ ಸಿಲುಕಿದ್ದ ದನಗಳನ್ನು ಕರ್ತವ್ಯ ಮುಗಿಸಿ ದಿಡುಪೆ ಕಡೆ ಸರ್ವಿಸ್ ವಾಹನದಲ್ಲಿ ತೆರಳುತ್ತಿದ್ದ ಗೃಹರಕ್ಷಕ ದಳ ಮತ್ತು ಪ್ರವಾಹ ರಕ್ಷಣಾ ಪಡೆಯ ಚಾಕೋ ಕೆ.ಜೆ.ಅವರು ನೋಡಿದ್ದು ತಕ್ಷಣ ವಾಹನ ನಿಲ್ಲಿಸಿ ಜೀಪು ಚಾಲಕರಾದ ಮಾಜಿ ತಾ.ಪಂ.ಸದಸ್ಯ ಜಯರಾಮ ದಿಡುಪೆ ಹಾಗೂ ಪ್ರಸನ್ನ ಶಿಕ್ಷಣ ಸಂಸ್ಥೆಗಳ ಚಾಲಕ ಅಬೂಬಕರ್ ಅವರ ಜತೆ ನದಿಗೆ ಇಳಿದು ಈಜಿಕೊಂಡು ಹೋಗಿ ಹಗ್ಗದ ಮೂಲಕ ದನಗಳನ್ನು ನದಿಯ ಇನ್ನೊಂದು ಬದಿಗೆ ತಂದು ರಕ್ಷಣೆ ಮಾಡಿದ್ದಾರೆ.