Site icon Suddi Belthangady

ಪತ್ರಿಕಾಗೋಷ್ಠಿ- ಆ.24: ಉಜಿರೆ ಶ್ರೀ ಧ.ಮಂ. ಸ್ವಾಯತ್ತ ಮಹಾವಿದ್ಯಾಲಯ, ಉಜಿರೆ ಹಿರಿಯ ವಿದ್ಯಾರ್ಥಿಗಳ ಸಂಘದ ನೆನಪಿನಂಗಳ ವಾರ್ಷಿಕ ಪುನರ್ಮಿಲನ

ಉಜಿರೆ: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಮಹಾವಿದ್ಯಾಲಯ, ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿಗಳ ಸಂಘದ ಆಶ್ರಯದಲ್ಲಿ 2024ನೇ ಸಾಲಿನ ಎಸ್.ಡಿ.ಎಂ ನೆನಪಿನಂಗಳ ವಾರ್ಷಿಕ ಪುನರ್ಮಿಲನ ಆ.24ರಂದು ಕಾಲೇಜಿನ ನವೀಕೃತ ಒಳಾಂಗಣ ಕ್ರೀಡಾಂಗಣ ಇಂದ್ರಪ್ರಸ್ಥದಲ್ಲಿ ನಡೆಯಲಿದೆ ಎಂದು ಆ.20ರಂದು ಕಾಲೇಜಿನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪೀತಾಂಬರ ಹೇರಾಜೆ, ಕಾರ್ಯದರ್ಶಿ ಬಿ.ಕೆ.ಧನಂಜಯ ರಾವ್ ಹೇಳಿದರು.ಬೆಂಗಳೂರಿನಲ್ಲಿರುವ ಎಸ್.ಡಿ.ಎಂ. ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎನ್.ಎಸ್.ಹೊಳ್ಳ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಮತ್ತು ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ. ಕುಮಾರ ಹೆಗ್ಡೆಯವರು ಭಾಗವಹಿಸಲಿದ್ದಾರೆ. ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪೀತಾಂಬರ ಹೆರಾಜೆ ಅಧ್ಯಕ್ಷತೆ ವಹಿಸಲಿರುವರು.ಸಭಾ ಕಾರ್ಯಕ್ರಮದ ಬಳಿಕ ಉಡುಪಿ ಕಲಾಮಯಂ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿಗಳು ಮತ್ತು ಹಾಲಿ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಕಾರ್ಯಕ್ರಮದ ಕುರಿತು ಈಗಾಗಲೇ ಸಮಾಲೋಚನಾ ಸಭೆಗಳನ್ನು ನಡೆಸಲಾಗಿದ್ದು, ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಎಸ್ ಡಿ ಎಂ ಹಿರಿಯ ವಿದ್ಯಾರ್ಥಿಗಳ ಸಂಘವು ಈಗ ಅತ್ಯಂತ ರಚನಾತ್ಮಕ ಚಟುವಟಿಕೆಗಳನ್ನು ಮಾಡುತ್ತಿದೆ. ಕಾಲೇಜಿನಲ್ಲಿ ಪ್ರತಿ ತಿಂಗಳು ನಿರಂತರ ಎಸ್. ಡಿ. ಎಂ. ನೆನಪಿನಂಗಳ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು ಈವರೆಗೆ 14 ಕಾರ್ಯಕ್ರಮ ನಡೆದಿದ್ದು ಒಟ್ಟು 15 ಹಿರಿಯ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಇವರು ತಲಾ 5 ಸಾವಿರದಂತೆ ಒಟ್ಟು 75 ಸಾವಿರ ರೂ. ವಿದ್ಯಾರ್ಥಿ ವೇತನವನ್ನು ಅರ್ಹ 15 ಮಂದಿ ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ

ಕಾಲೇಜಿನಲ್ಲಿರುವ ವಿದ್ಯಾರ್ಥಿಗಳ ಮಧ್ಯಾಹ್ನದ ಊಟದ ಯೋಜನೆಗೆ ಹಿರಿಯ ವಿದ್ಯಾರ್ಥಿಗಳ ಸಂಘವು ಈ ವರ್ಷ ರೂ. 5 ಲಕ್ಷ ಧನ ಸಹಾಯ ನೀಡಲು ನಿರ್ಧರಿಸಿದ್ದು ಕಾರ್ಯಕ್ರಮದ ದಿನ ಮೊತ್ತವನ್ನು ಹಸ್ತಾಂತರ ಮಾಡಲಿದೆ. ಈ ಯೋಜನೆಗೆ ಎಸ್ ಡಿ ಎಂ ಎಜುಕೇಷನಲ್ ಟ್ರಸ್ಟ್, ಉಪನ್ಯಾಸಕ ವೃಂದದವರು ಅಲ್ಲದೆ ಈಗಾಗಲೇ ಅನೇಕ ಹಿರಿಯ ವಿದ್ಯಾರ್ಥಿಗಳು ಮಧ್ಯಾಹ್ನದ ಊಟದ ಯೋಜನೆಗೆ ಮತ್ತು ಅಗತ್ಯವಿರುವ ವಿದ್ಯಾರ್ಥಿಗಳ ಶುಲ್ಕ ಪಾವತಿಗೂ ಪ್ರತ್ಯೇಕವಾಗಿ ಸಹಾಯ ಮಾಡುತ್ತಿದ್ದಾರೆ. ಮತ್ತೊಂದು ಕಡೆಯಲ್ಲಿ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಉದ್ಯೋಗ ಕೊಡುವಲ್ಲಿ ಮತ್ತು ಕೊಡಿಸುವಲ್ಲಿ ಹಿರಿಯ ವಿದ್ಯಾರ್ಥಿಗಳು ದೊಡ್ಡ ಮಟ್ಟದ ಸಹಕಾರ ನೀಡುತ್ತಿದೆ.ಒಟ್ಟಿನಲ್ಲಿ ಉಜಿರೆ, ಬೆಂಗಳೂರು ಮತ್ತು ದುಬಾಯಿಗಳಲ್ಲಿರುವ ಎಸ್ ಡಿ ಎಂ ಹಿರಿಯ ವಿದ್ಯಾರ್ಥಿಗಳ ಸಂಘವು ಉಪಯುಕ್ತ ಕಾರ್ಯಕ್ರಮಗಳನ್ನು ಮಾಡುತ್ತಿದ್ದು ಇತರರಿಗೆ ಮಾದರಿಯಾಗಿ ರೂಪುಗೊಳ್ಳುತ್ತಿದೆ. ಸಂಘವು ನೋಂದಾಯಿಸಲ್ಪಟ್ಟಿದ್ದು, ಪ್ರಸ್ತುತ ಈ ಸಂಘಕ್ಕೆ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ರೂ. 2500/- ಆಜೀವ ಸದಸ್ಯತನವನ್ನು ನೀಡಿ ಸದಸ್ಯರರಾಗ ಬಹುದು ಎಂದರು.

ಈ ಸಂದರ್ಭದಲ್ಲಿ ಎಸ್.ಡಿ.ಎಂ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್, ಎಸ್.ಡಿ.ಎಂ ಕಾಲೇಜು ಪ್ರಾಂಶುಪಾಲರು ಡಾ.ಬಿ.ಎ ಕುಮಾರ್ ಹೆಗ್ಡೆ, ಹಿರಯ ವಿದ್ಯಾರ್ಥಿ ಸಂಘದ ಬಗ್ಗೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಸಂಯೋಜಕ ಡಾ.ಎಂ.ಪಿ ಶ್ರೀನಾಥ್, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಭಾಸ್ಕರ ಹೆಗ್ಡೆ ಉಪಸ್ಥಿತರಿದ್ದರು.

Exit mobile version