Site icon Suddi Belthangady

ಪತ್ರಿಕಾಗೋಷ್ಠಿ: ಶಾಸಕ ಹರೀಶ್ ಪೂಂಜ ಬಿಲ್ಲವ ಸಮಾಜದ ಮುಖಂಡರ ಮೇಲೆ ಮಾಡಿರುವ ಆರೋಪಕ್ಕೆ ಬಿಲ್ಲವ ನಾಯಕರಿಂದ ಖಂಡನೆ- ಸಮಾಜದ ಮುಖಂಡರ ಮೇಲೆ ದಬ್ಬಾಳಿಕೆ ದೌರ್ಜನ್ಯ, ನಿಂದನೆಗಳು ನಡೆಯುತ್ತಿರುವುದು ವಿಷಾದನೀಯ: ಉಲ್ಲಾಸ್ ಕೋಟ್ಯಾನ್

ಬೆಳ್ತಂಗಡಿ: ಶತಮಾನಗಳಿಂದ ಅಸ್ಪೃಶ್ಯತೆ, ದಬ್ಬಾಳಿಕೆ, ಶೋಷಣೆಗೆ ಒಳಗಾದ ಬಿಲ್ಲವ ಸಮಾಜ ಬ್ರಹ್ಮಶ್ರೀ ನಾರಾಯಣ ಗುರುಗಳ ಜನನವಾದ ನಂತರ ಅವರ ಸಾಮಾಜಿಕ ಕ್ರಾಂತಿಯ ಪರಿಣಾಮದಿಂದ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ರಾಜಕೀಯವಾಗಿಯೂ ಸಮಾಜದ ಮುಖ್ಯವಾಹಿನಿಗೆ ಬರುತ್ತಿದೆ. ಇಂತಹ ಸಮಯದಲ್ಲಿ ಕೂಡ ಸಮಾಜದ ಮೇಲೆ ಮತ್ತು ಸಮಾಜದ ಮುಖಂಡರ ಮೇಲೆ ದಬ್ಬಾಳಿಕೆ ದೌರ್ಜನ್ಯ, ನಿಂದನೆಗಳು ನಡೆಯುತ್ತಿರುವುದು ವಿಷಾದನೀಯ. ಬೆಳ್ತಂಗಡಿ ಇದನ್ನು ಸಮಾಜವು ಉಗ್ರವಾಗಿ ಖಂಡಿಸುತ್ತದೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಪತ್ರಿಕಾಗೋಷ್ಠಿಯಲ್ಲಿ ಮಾಡಿರುವ ಆರೋಪವನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಶ್ರೀ ಕ್ಷೇತ್ರ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್ ಮತ್ತು ರಾಷ್ಟೀಯ ಬಿಲ್ಲವರ ಮಹಾ ಮಂಡಲದ ಕಾರ್ಯದರ್ಶಿ ಗಣೇಶ್ ಪೂಜಾರಿ ಗುರುಪುರ ಹೇಳಿದರು.

ಅವರು ಆ.17ರಂದು ಬೆಳ್ತಂಗಡಿ ಗುರುನಾರಾಯಣ ಸಂಘದ ಸಭಾ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ರಾಜಕೀಯದಲ್ಲಿ ಆರೋಪ, ಪ್ರತ್ಯಾರೋಪ ನಿಂದನೆ ಏನೇ ಇದ್ದರೂ ಕಾನೂನಾತ್ಮವಾಗಿ ಪೂರಕ ದಾಖಲೆಗಳೊಂದಿಗೆ ಉತ್ತರ ಕೊಡುವುದು ರಾಜಕೀಯ ಧರ್ಮ. ಈ ಹಿಂದೆಯೂ ಇಂತಹ ಸನ್ನಿವೇಶದಲ್ಲಿ ಸಮಸ್ಯೆ ಎದುರಾದಾಗ ನೈತಿಕವಾಗಿ ಪರಿಹರಿಸಿಕೊಂಡ ಉದಾಹರಣೆ ಇದೆ. ಪ್ರಸ್ತುತ ಕಾಲಘಟ್ಟದಲ್ಲಿ ಸಮಾಜದಲ್ಲಿ ಕಷ್ಟಪಟ್ಟು ಉನ್ನತ ವ್ಯಾಸಂಗವನ್ನು ಪಡೆದು ಸರಕಾರದ ಉನ್ನತ ಹುದ್ದೆಯ ಅಧಿಕಾರಿಯಾಗಿ ಭ್ರಷ್ಟಾಚಾರ ಮುಕ್ತವಾಗಿ, ತನ್ನ ಸೇವಾ ಅವಧಿಯಲ್ಲಿ ದಕ್ಷ ಅಧಿಕಾರಿ ಎಂದು ಗುರುತಿಸಿಕೊಂಡು ಬೆಂಗಳೂರು ಭೂಗತ ಲೋಕದ ಹುಟ್ಟಡಗಿಸಿ ಕ್ರಿಮಿನಲ್‌ಗಳಿಗೆ ಸಿಂಹಸ್ವಪ್ನವಾಗಿ ಕಾಡಿದ ಬಿಲ್ಲವ ಸಮಾಜದ ಹೆಮ್ಮೆಯ ಗೌರವಾನ್ವಿತ ನಿವೃತ್ತ ಪೊಲೀಸ್ ಅಧಿಕಾರಿ ಮುಖ್ಯಮಂತ್ರಿ ಪದಕ, ಶೌರ್ಯ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಬಿ.ಕೆ. ಶಿವರಾಂರವರು ಮತ್ತು ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ಅಧ್ಯಕ್ಷರು, ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಅಧ್ಯಕ್ಷರೂ, ಬಿಲ್ಲವ ಮಹಾಮಂಡಲದ ಮಾಜಿ ಉಪಾಧ್ಯಕ್ಷರೂ, ಮುಗ್ಗ ಗುತ್ತು ಕುಟುಂಬದ ಆಡಳಿತ ಮೊಕ್ತೇಸರರೂ ಆಗಿರುವಂತಹ ಮುಖ್ಯಮಂತ್ರಿ ಪದಕ ಪುರಸ್ಕೃತ ನಿವೃತ್ತ ಪೊಲೀಸ್ ವರಿಷ್ಠ ಅಧಿಕಾರಿ ಪೀತಾಂಬರ ಹೆರಾಜೆಯವರ ಬಗ್ಗೆ ಈ ಹಿಂದೆಯೂ ಶಾಸಕ ಹರೀಶ್ ಪೂಂಜರವರು ನಿಂದನಾತ್ಮಕವಾಗಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವುದು ಅತ್ಯಂತ ಖಂಡನೀಯ.

ಈ ಹಿಂದೆಯೂ ನಮ್ಮ ಸಂಘದ ಗೌರವಾಧ್ಯಕ್ಷರಾಗಿದ್ದ ಶುದ್ಧ ಹಸ್ತದ ರಾಜಕಾರಣಿ, ಬಡವರ ಬಂಗಾರ ಕೆ.ವಸಂತ ಬಂಗೇರರ ಬಗ್ಗೆ ಆಧಾರ ರಹಿತ ಸುಳ್ಳು ಆಪಾದನೆಗಳನ್ನು ಮಾಡಿದ್ದು, ನಾರಾಯಣ ಗುರುಗಳ ಪಾಠವನ್ನು ಪಠ್ಯ ಪುಸ್ತಕದಿಂದ ತೆಗೆದು ಹಾಕಿದ ರೋಹಿತ್ ಚಕ್ರತೀರ್ಥನನ್ನು ರಾಜ ಮರ್ಯಾದೆಯೊಂದಿಗೆ ಪಟಾಕಿ ಸಿಡಿಸುತ್ತಾ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಆಹ್ವಾನಿಸಿ, ಗೌರವಿಸಿರುವುದು ಮತ್ತು ಮರಗಳ್ಳರಿಗೆ ಸಿಂಹಸ್ವಪ್ನರಾಗಿದ್ದ ಅರಣ್ಯ ಇಲಾಖೆಯ ಮಹಿಳಾ ಅಧಿಕಾರಿಯನ್ನು ದೂರದ ಊರಿಗೆ ವರ್ಗಾವಣೆ ಮಾಡಿ ಅಧಿಕಾರ ದುರುಪಯೋಗ ಮಾಡಿದ್ದು, ಈ ರೀತಿ ಸಮಾಜದ ಹಲವಾರು ಪ್ರತಿಷ್ಠಿತ ಗಣ್ಯ ವ್ಯಕ್ತಿಗಳ ತೇಜೋವಧೆಯನ್ನು ಶಾಸಕರು ಮತ್ತು ಅವರ ಹಿಂಬಾಲಕರು ಈ ಹಿಂದೆಯೂ ಮಾಡಿರುತ್ತಾರೆ.

ಶಾಸಕರ ಮೇಲೆ ಪ್ರತಿ ಪಕ್ಷದ ನಾಯಕರುಗಳು ಭ್ರಷ್ಟಾಚಾರ ಆರೋಪ ಮಾಡಿದ ಸಂದರ್ಭದಲ್ಲಿ ಪವಿತ್ರ ಸಂವಿಧಾನದ ಅಡಿಯಲ್ಲಿ ಬದುಕುತ್ತಿರುವ ಇವರು ಕಾನೂನಾತ್ಮಕವಾಗಿ ಆರೋಪಗಳಿಗೆ ಉತ್ತರ ನೀಡುವ ಬದಲು ದೈವ ದೇವರ ಮೊರೆ ಹೋಗಿ ಒಂದು ಕುಟುಂಬದ ಮೇಲೆ ಮಾತ್ರ ಅಲ್ಲದೆ ಮಹಿಳೆಯರು ಸೇರಿದಂತೆ ಸಣ್ಣ ಮಗುವನ್ನು ಸೇರಿಸಿ ಆಣೆ ಪ್ರಮಾಣ ಮಾಡಿ, ತೆಂಗಿನಕಾಯಿ ಒಡೆದು ಕೇಡು ಬಯಸಿದ ಶಾಸಕರ ನಡೆಯನ್ನು ಸಮಸ್ತ ಬಿಲ್ಲವ ಸಮಾಜದ ಒಕ್ಕೂಟ ತೀಕ್ಷ್ಯ ರೀತಿಯಲ್ಲಿ ಖಂಡಿಸುತ್ತೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮುಗ್ಗ ಗುತ್ತು ಟ್ರಸ್ಟ್ ಪ್ರತಿನಿಧಿ ಪ್ರಶಾಂತ್ ಬಂಗೇರ, ಸಮಾಜದ ಹಿರಿಯ ನಾಯಕ ಜನಾರ್ದನ ಪೂಜಾರಿ ಗೇರುಕಟ್ಟೆ, ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ಅಧ್ಯಕ್ಷರುಗಳಾದ ಜಯರಾಮ ಬಂಗೇರ ಹೇರಾಜೆ, ಚಿದಾನಂದ ಪೂಜಾರಿ ಎಲ್ದಕ್ಕ, ಮಾಜಿ ನಿರ್ದೇಶಕ ವಿಶ್ವನಾಥ ಪೂಜಾರಿ ಕೊಲ್ಲಾಜೆ, ಜಿ.ಪ.ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್ ಉಪಸ್ಥಿತರಿದ್ದರು.

Exit mobile version