ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ೭ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಪ್ರವಾಸಿ ಬಂಗಲೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಆರೋಪಿಸಿದ್ದಾರೆ. ಆ.೫ರಂದು ಬೆಳ್ತಂಗಡಿ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಸಂದರ್ಭ ತರಾತುರಿಯಲ್ಲಿ ಐಬಿಯನ್ನು ಉದ್ಘಾಟಿಸಲಾಗಿತ್ತು. ಕಾಮಗಾರಿ ಮುಗಿದ ನಂತರ ೨ ಕೋಟಿ ರೂ. ಹೆಚ್ಚುವರಿ ಟೆಂಡರ್ ಕರೆದು ಅವ್ಯವಹಾರ ನಡೆಸಲಾಗಿದೆ. ಈ ಕುರಿತು ಲೋಕಾಯುಕ್ತಕ್ಕೆ ದೂರು ನೀಡಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.
೨೦೨೧ರಲ್ಲಿ ಟೆಂಡರ್: ಬ್ರಿಟಿಷರು ೧೯೧೩ರಲ್ಲಿ ನಿರ್ಮಿಸಿದ್ದ ನಿರೀಕ್ಷಣಾ ಮಂದಿರದ ಐತಿಹಾಸಿಕ ಕಟ್ಟಡ ಶಿಥಿಲಗೊಂಡಿದ್ದು, ಅದರ ದುರಸ್ತಿಗೆ ವಸಂತ ಬಂಗೇರರು ಶಾಸಕರಾಗಿದ್ದ ಅವಧಿಯಲ್ಲಿ ಪ್ರಯತ್ನಿಸಿದ್ದರು. ೨೦೧೮ರ ನಂತರ ಹೊಸದಾಗಿ ಪ್ರವಾಸಿ ಮಂದಿರ ನಿರ್ಮಿಸಲು ಸರಕಾರ ಮುಂದಾಗಿದ್ದು, ೨೦೨೧ರ ಜುಲೈ ೧೩ರಂದು ೪.೭೬ ಕೋಟಿ ರೂ. ಮೊತ್ತಕ್ಕೆ ಟೆಂಡರ್ ಕರೆಯಲಾಗಿತ್ತು. ಬಿಮಲ್ ಇನ್ಫಾಸ್ಟ್ರಕ್ಷನ್ ಪ್ರೈವೇಟ್ ಲಿ. ಗುತ್ತಿಗೆ ವಹಿಸಿಕೊಂಡಿದ್ದು, ೧೮ ತಿಂಗಳಿನಲ್ಲಿ ಕಾಮಗಾರಿ ಮುಗಿಸಬೇಕೆಂಬ ಷರತ್ತು ಹಾಕಲಾಗಿತ್ತು. ಬೇಸ್ಮೆಂಟ್, ಫಸ್ಟ್, ಗ್ರೌಂಡ್ ಫ್ಲೋರ್, ಸಂಪ್, ನೀರಿನ ವ್ಯವಸ್ಥೆ, ಬೋರ್‌ವೆಲ್, ವಿದ್ಯುತ್ ವ್ಯವಸ್ಥೆ ಗುತ್ತಿಗೆಯಲ್ಲಿ ಒಳಗೊಂಡಿತ್ತು ಎಂದು ಹೇಳಿದರು.
ಕೇವಲ ೭೦ ಸಾವಿರ ರೂ.ಗೆ ಸಾಗಾಟ: ಪುರಾತತ್ವ ಇಲಾಖೆ ವ್ಯಾಪ್ತಿಗೆ ಬರುವ ಕಟ್ಟಡವನ್ನು ತೆರವುಗೊಳಿಸಲು ಕ್ಯಾಬಿನೆಟ್ ಅನುಮತಿ ಪಡೆಯಬೇಕಿತ್ತು. ಆದರೆ, ಅನುಮತಿ ಪಡೆಯದೆ ೩೧-೩-೨೦೨೨ರಲ್ಲಿ ತೆರವುಗೊಳಿಸಲಾಗಿದೆ. ಐಬಿಯ ಮೂಲಬೆಲೆ ೯೨ ಸಾವಿರ ರೂ. ನಿಗದಿಯಾಗಿತ್ತು. ಪೀಠೋಪಕರಣ, ಬಾಗಿಲು, ದಾರಂದ, ಕಬ್ಬಿಣ, ಹಾಸಿಗೆ, ಸೋಫಾ ಸೇರಿ ೧.೬೦ ಲಕ್ಷ ರೂ. ಮೌಲ್ಯದ ವಸ್ತುಗಳಿದ್ದವು. ಕಟ್ಟಡ ತೆರವು, ಸಾಗಾಟ ಸೇರಿ ೯೦ ಸಾವಿರ ರೂ. ನಿಗದಿಯಾಗಿತ್ತು. ಅಂತಿಮವಾಗಿ ಕೇವಲ ೭೦ ಸಾವಿರ ರೂ.ಗಳಿಗೆ ಎಲ್ಲವನ್ನೂ ಸಾಗಿಸಲಾಗಿದ್ದು, ಅಲ್ಲಿಂದಲೇ ಲೋಪ ಆರಂಭವಾಗಿದೆ ಎಂದು ರಕ್ಷಿತ್ ಶಿವರಾಮ್ ಆರೋಪಿಸಿದರು.
ಶಾಸಕರಿಂದ ಒತ್ತಡ: ಮಾನ್ಯ ಶಾಸಕರು ಬೆಳ್ತಂಗಡಿಯನ್ನು ನವನಿರ್ಮಾಣ ಮಾಡಿzನೆ. ಬೆಳ್ತಂಗಡಿಯಲ್ಲಿ ಬಸ್ ನಿಲ್ದಾಣ, ಲೈಬ್ರೆರಿ, ಐಬಿ, ಮೌಲಾನಾ ಆಜಾದ್ ಸ್ಕೂಲ್ ಕಟ್ಟಿzನೆ, ಇನ್ನೊಂದು, ಮತ್ತೊಂದು ಎಂದೆಲ್ಲ ಬೊಗಳೆಗಳನ್ನು ಬಿಟ್ಟಾಗಿದೆ. ಚುನಾವಣೆಗೂ ಮೊದಲು ಐಬಿ ಉದ್ಘಾಟಿಸದಿದ್ದರೆ ಜನರು ಟೀಕಿಸಬಹುದೆಂದು ಶಾಸಕರು ಒತ್ತಡ ಆರಂಭಿಸುತ್ತಾರೆ. ಬಿಮಲ್ ಕಂಪನಿಗೆ ೨೦೨೩ರ ಜ.೨೭ರಂದು ಮೊದಲ ನೋಟಿಸ್ ಹೋಗಿತ್ತು. ಕಾಮಗಾರಿ ನಿರೀಕ್ಷಿತ ಪ್ರಗತಿ ಸಾಧಿಸದೆ ಕುಂಠಿತವಾಗಿದೆ. ಕೆಲಸದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದೀರಿ. ಮಾನ್ಯ ಶಾಸಕರು ೧೫-೨-೨೦೨೩ರಂದು ಪ್ರವಾಸಿ ಮಂದಿರವನ್ನು ಉದ್ಘಾಟಿಸುವುದಾಗಿ ಮೌಖಿಕವಾಗಿ ತಿಳಿಸಿದ್ದಾರೆ. ಹಾಗಾಗಿ ಬಾಕಿ ಕಾಮಗಾರಿಯನ್ನು ಯಾವುದೇ ಕಾರಣ ನೀಡದೆ ಕೂಡಲೇ ಪೂರ್ಣಗೊಳಿಸಿ ಹಸ್ತಾಂತರಿಸಬೇಕು. ತಪ್ಪಿದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನೋಟೀಸಿನಲ್ಲಿ ತಿಳಿಸಲಾಗಿತ್ತು. ನಂತರ ೨ನೇ, ೩ನೇ ನೋಟಿಸ್ ಜಾರಿಗೊಂಡರೂ ಕಂಪನಿಯವರು ಕಾಮಗಾರಿ ಪೂರ್ಣಗೊಳಿಸಿರಲಿಲ್ಲ.
ಕೆಲಸ ಮುಗಿದ ಮೇಲೆ ವರ್ಕ್ ಆರ್ಡರ್: ವಿಧಾನಸಭಾ ಚುನಾವಣೆ ಹತ್ತಿರ ಬರುವಾಗ ೨೦೨೩ರ ಮಾ.೨೮ರಂದು ತರಾತುರಿಯಲ್ಲಿ ನಿರೀಕ್ಷಣಾ ಮಂದಿರವನ್ನು ಉದ್ಘಾಟಿಸಲಾಗಿತ್ತು. ಇದರ ಕೆಲವೇ ದಿನಗಳ ಮುಂಚೆ, ಕಾಮಗಾರಿ ಪೂರ್ಣಗೊಂಡ ನಂತರ ವರ್ಕ್ ಆರ್ಡರ್ ಸಿಕ್ಕಿತ್ತು. ಎಲ್ಲ ಕೆಲಸ ಮುಗಿದ ನಂತರ ೨ ಕೋಟಿ ರೂ. ಮೊತ್ತದ ಇನ್ನೊಂದು ಟೆಂಡರ್ ಕರೆಯಲಾಗಿತ್ತು. ಹಳೇ ಟೆಂಡರಿನಲ್ಲಿ ಲಿಫ್ಟ್ ಮರೆತು ಹೋಗಿದೆ, ಗ್ಲಾಸ್, ಫರ್ನೀಚರ್, ಸೋಫಾ, ಬೆಡ್ ಬೇಕೆಂದು ಬೇಡಿಕೆ ಇಡಲಾಗಿತ್ತು. ಆದರೆ, ಆ ಟೆಂಡರ್ ಕರೆದಾಗ ಯಾವುದೇ ನಿಯಮ ಪಾಲಿಸಿರಲಿಲ್ಲ. ಕ್ವಾಲಿಟಿ ಕಂಟ್ರೋಲ್ ಸರ್ಟಿಫಿಕೇಟ್, ಕಟ್ಟಡ ನಕ್ಷೆ, ಸ್ಟ್ರಕ್ಚರಲ್ ಡಿಸೈನ್ ಯಾವುದೂ ಇರಲಿಲ್ಲ. ನಿಯಮಗಳ ಉಲ್ಲಂಘನೆ, ಅಕ್ರಮಗಳ ಕುರಿತು ಸಾಕಷ್ಟು ದಾಖಲೆಗಳಿವೆ, ಇಂಜಿನಿಯರ್‌ಗಳು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಬರೆದಿರುವ ಸಾಲುಸಾಲು ಪತ್ರಗಳಿವೆ. ಇಂಥ ಅನಾಚಾರದ ಕಾರಣಗಳಿಂದಾಗಿಯೇ ಹೊಸದಾಗಿ ಬರುವ ಇಂಜಿನಿಯರ್‌ಗಳು ಇಲ್ಲಿ ನಿಲ್ಲದೆ ಓಡಿ ಹೋಗುತ್ತಾರೆ ಎಂದು ರಕ್ಷಿತ್ ಆಪಾದಿಸಿದರು. ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ವಂದನಾ ಭಂಡಾರಿ, ನಮಿತಾ ತೋಟತ್ತಾಡಿ, ಜಿ.ಪಂ ಮಾಜಿ ಸದಸ್ಯರಾದ ಶೇಖರ್ ಕುಕ್ಕೇಡಿ, ಧರಣೇಂದ್ರ ಕುಮಾರ್ ಹಾಗೂ ಪಕ್ಷದ ಪ್ರಮುಖರಾದ ಸಂತೋಷ್ ಕುಮಾರ್ ಲಾಯಿಲ, ಅಬ್ದುಲ್ ಕರೀಂ, ಆಯಿಬು ಬಿ.ಕೆ, ಇಸ್ಮಾಯಿಲ್ ಪೆರಿಂಜೆ, ಹಕೀಂ ಕೊಕ್ಕಡ ಪತ್ರಿಕಾಗೋಷ್ಠಿಯಲ್ಲಿದ್ದರು.
ಬಿಮಲ್ ದಾಖಲೆಗಳು ಬೋಗಸ್:
ನಮ್ಮ ಜನಪ್ರತಿನಿಧಿಗಳಿಗೆ ಬಿಮಲ್ ಕಂಪನಿಯ ಮೇಲೆ ಯಾಕೆ ಇಷ್ಟು ಪ್ರೀತಿ ಎಂದು ಶೋಧಿಸಿದಾಗ ಅನೇಕ ವಿಚಾರಗಳು ಬೆಳಕಿಗೆ ಬಂದಿವೆ. ಬಿಮಲ್ ಕಂಪನಿ ಗುತ್ತಿಗೆದಾರ ಕ್ಷೇತ್ರದಲ್ಲಿ ಬಹಳ ವರ್ಷ ಕೆಲಸ ಮಾಡಿದವರಲ್ಲ. ಮೆಸ್ಕಾಂನಲ್ಲಿ ವರ್ಕ್ ಡನ್ ಸರ್ಟಿಫಿಕೇಟ್ ಸಿಕ್ಕಿದೆ. ಆದರೆ, ಐಬಿ ಕಾಮಗಾರಿ ನಡೆಸುವ ಅರ್ಹತೆ ಅವರಿಗಿಲ್ಲ. ವರ್ಕ್ ಡನ್ ಸರ್ಟಿಫಿಕೇಟ್‌ಗೆ ಸಹಿ ಹಾಕಿದ ಇಂಜಿನಿಯರ್ ಮೆಸ್ಕಾಂನಲ್ಲಿ ಯಾರೂ ಇಲ್ಲ. ಅದು ಬೋಗಸ್ ಸರ್ಟಿಫಿಕೇಟ್. ಗುತ್ತಿಗೆದಾರರ ಚಾರ್ಟರ್ಡ್ ಅಕೌಂಟ್ಸ್ ಬ್ಯಾಲನ್ಸ್ ಶೀಟ್ ಪರಿಶೀಲಿಸಿದಾಗ, ಅದರಲ್ಲಿರುವ ಸಿಎ ನಿವೃತ್ತಿಯಾಗಿ ಎಷ್ಟೋ ವರ್ಷಗಳಾಗಿವೆ ಎಂದು ತಿಳಿಯಿತು. ಗುತ್ತಿಗೆದಾರರು ನೋಂದಣಿಗಾಗಿ ಶಿವಮೊಗ್ಗ ಅಥವಾ ಬೆಂಗಳೂರಿಗೆ ಹೋಗುತ್ತಾರೆ. ಆದರೆ, ಈ ಗುತ್ತಿಗೆದಾರ ಧಾರವಾಡದಲ್ಲಿ ನೋಂದಣಿ ಮಾಡಿಸಿದ್ದಾರೆ. ಇಂಥ ವ್ಯಕ್ತಿಗೆ ೨೦೧೮ರ ನಂತರ ತಾಲೂಕಿನಲ್ಲಿ ಕಾಮಗಾರಿ ಸಿಗಲು ಆರಂಭವಾಗಿದೆ. ಉಜಿರೆಯಲ್ಲಿ ಅವರ ರೆಡಿಮಿಕ್ಸ್ ಪ್ಲಾಂಟನ್ನು ಶಾಸಕರೇ ಉದ್ಘಾಟಿಸಿದ್ದರು. ಕೋರೆ ಗುತ್ತಿಗೆ ಪಡೆಯುತ್ತಾರೆ. ಮರಳು ಪೂರೈಕೆಗೆ ವ್ಯವಸ್ಥೆಯಾಗುತ್ತದೆ. ನಂತರ ಕೆ.ಎಸ್.ಆರ್.ಟಿ.ಸಿ. ಬಸ್‌ಗಿಂತ ಬಿಮಲ್ ಲಾರಿಗಳ ಓಡಾಟವೇ ಹೆಚ್ಚಾಗಿತ್ತು. ಐಬಿ, ಅಣೆಕಟ್ಟುಗಳು, ರಸ್ತೆ ಹೀಗೆ ಎಲ್ಲ ಕೆಲಸಗಳ ಗುತ್ತಿಗೆಯೂ ಬಿಮಲ್‌ಗೆ ಹೋಗುತ್ತಿತ್ತು. ಅಂಥ ಬಿಮಲ್ ಈಗ ಎಲ್ಲಿ ಮಾಯವಾಗಿದೆ? ಉಜಿರೆಯ ಪ್ಲಾಂಟ್ ಯಾಕೆ ಮುಚ್ಚಿದೆ ಎಂದು ರಕ್ಷಿತ್ ಪ್ರಶ್ನಿಸಿದರು.
ಶಾಸಕರಲ್ಲದೆ ಮತ್ಯಾರ ಪಾತ್ರ?:
ಇಷ್ಟು ದೊಡ್ಡ ಭ್ರಷ್ಟಾಚಾರ ನಡೆಯುವಾಗ ಕೇವಲ ಅಧಿಕಾರಿಗಳು ಮಾಡಲು ಸಾಧ್ಯವಿಲ್ಲ. ೨ ಕೋಟಿ ರೂ. ಚುನಾವಣೆಯ ೧೫ ದಿನಗಳ ಮುಂಚೆ ಕಾಮಗಾರಿ ನಡೆದಿರುವ ಕಟ್ಟಡಕ್ಕೆ ಹೆಚ್ಚುವರಿ ೨ ಕೋಟಿ ರೂ. ತಂದು ಎಲ್ಲ ಕೆಲಸ ಆದ ಮೇಲೆ ವರ್ಕ್ ಡನ್ ತೆಗೆದುಕೊಳ್ಳುತ್ತಾರೆ ಅಂದರೆ ಇದರಲ್ಲಿ ಶಾಸಕರ ಪಾತ್ರ ಅಲ್ಲದೆ ಬೇರೆ ಯಾರ ಪಾತ್ರವಿದೆ ಎಂದು ರಕ್ಷಿತ್ ಶಿವರಾಮ್ ಪ್ರಶ್ನಿಸಿದರು.
ಹೆದ್ದಾರಿ ಕಾಮಗಾರಿಯಲ್ಲಿ ಶಾಸಕರಿಗೆ
೩ ಕೋಟಿ ರೂಪಾಯಿ ಕಿಕ್ ಬ್ಯಾಕ್:
ಪುಂಜಾಲಕಟ್ಟೆ-ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಗುತ್ತಿಗೆದಾರರಿಂದ ಶಾಸಕರು ೩ ಕೋಟಿ ರೂಪಾಯಿ ಕಿಕ್ ಬ್ಯಾಕ್ ಪಡೆದುಕೊಂಡಿದ್ದಾರೆ ಎಂದು ರಕ್ಷಿತ್ ಶಿವರಾಂ ಗಂಭೀರ ಆರೋಪ ಮಾಡಿದ್ದಾರೆ. ಈಗಾಗಲೇ ಬಿಮಲ್‌ನ ಪ್ರವೀಣ್ ಕುಮಾರ್ ಎಸ್ಕೇಪ್ ಆಗಿದ್ದಾರೆ. ಈಗ ಡಿ.ಪಿ.ಜೈನ್ ಕೆಲವೇ ದಿನಗಳಲ್ಲಿ ಬೆಳ್ತಂಗಡಿಯಿಂದ ಪರಾರಿಯಾಗುತ್ತಾರೆ. ಈ ಕಾಮಗಾರಿಯಲ್ಲಿ ಚುನಾವಣಾ ಪೂರ್ವದಲ್ಲಿ ಇಲ್ಲಿನ ಶಾಸಕರು ೩ ಕೋಟಿ ರೂ. ಪಡೆದಿದ್ದಾರೆ. ಇಷ್ಟೆಲ್ಲ ದುಡ್ಡು ಕೊಟ್ಟು ಅವರಿಗೆ ಕಾಮಗಾರಿ ನಡೆಸಲು ಸಾಧ್ಯವಿಲ್ಲ ಎಂದರು. ಶಾಸಕರು ೨ ವರ್ಷ ಈ ಕಾಮಗಾರಿ ಬಗ್ಗೆ ಮಾತನಾಡಬೇಡಿ ಎಂದು ಹೇಳುತ್ತಿದ್ದರು. ಆದರೆ, ೫ ವರ್ಷ ಮಾತನಾಡಬೇಡಿ ಎಂದು ಅವರ ಮನಸ್ಸಿನಲ್ಲಿದೆ. ೫ ವರ್ಷವಾದರೂ ಈ ಕಾಮಗಾರಿ ಮುಗಿಯುವುದಿಲ್ಲ. ಈ ಕುರಿತು ಪಕ್ಷಾತೀತ ಹೋರಾಟ ನಡೆಸಲು ಚಿಂತಿಸಲಾಗಿದೆ ಎಂದು ಹೇಳಿದರು.
ಬೆಳ್ತಂಗಡಿಯಲ್ಲಿ ನಲ್ವತ್ತಲ್ಲ, ೬೦ ಪರ್ಸೆಂಟ್!
ಬೆಳ್ತಂಗಡಿಯಲ್ಲಿ ೪೦ ಪರ್ಸೆಂಟ್ ವಾಸನೆ ಇದೆ ಎಂದು ಚುನಾವಣೆ ಪೂರ್ವದಲ್ಲೇ ಹೇಳಿದ್ದೆವು. ಈಗ ಐಬಿ ಪ್ರಕರಣದಲ್ಲಿ ೪೦ ಅಲ್ಲ, ೬೦ ಪರ್ಸೆಂಟ್ ಭ್ರಷ್ಟಾಚಾರವಾಗಿದೆಯೆಂದು ಹೇಳುತ್ತೇನೆ ಎಂದು ರಕ್ಷಿತ್ ಶಿವರಾಂ ಆರೋಪಿಸಿದರು. ೨ ಕೋಟಿ ರೂ. ಹೆಚ್ಚುವರಿ ಪಡೆದು ೭ ಕೋಟಿ ವ್ಯಯಿಸಿದರೂ ಐಬಿಯ ಬಾಗಿಲನ್ನು ಇದುವರೆಗೂ ತೆರೆದಿಲ್ಲ. ಅಧಿಕಾರಿಗಳು, ಸಾರ್ವಜನಿಕರಿಗೆ ಉಪಯೋಗಕ್ಕೆ ಲಭಿಸಿಲ್ಲ. ಆದರೆ, ಕಚೇರಿಗೆ ಅಧಿಕಾರಿಗಳನ್ನು ಕರೆಸಿ ಮಾತನಾಡಲು ಸಾಧ್ಯವಾಗದ ವಿಚಾರಗಳನ್ನು ಅಲ್ಲಿ ರಾತ್ರಿ ಏಳೆಂಟು ಗಂಟೆಯವರೆಗೂ ಚರ್ಚಿಸಲಾಗುತ್ತದೆ, ಗುಪ್ತ ಸಭೆಗಳು ನಡೆಯುತ್ತಿವೆ ಎಂದು ಆಪಾದಿಸಿದರು.