Site icon Suddi Belthangady

ಮೈಸೂರು ಚಲೋ ಪಾದಯಾತ್ರೆಯಲ್ಲಿ ಪತ್ರಕರ್ತರ ಮೇಲೆ ಹರೀಶ್ ಪೂಂಜ ಬೆಂಬಲಿಗರಿಂದ ಹಲ್ಲೆ ಆರೋಪ

ಬೆಳ್ತಂಗಡಿ: ಬಿಜೆಪಿ-ಜೆಡಿಎಸ್‌ನ ಮೈಸೂರು ಚಲೋ ಪಾದಯಾತ್ರೆಯ ವರದಿಗಾಗಿ ತೆರಳಿದ್ದ ತನ್ನ ವರದಿಗಾರರು ಹಾಗೂ ಇತರ ಸಿಬ್ಬಂದಿಯ ಮೇಲೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹಾಗೂ ಅವರ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂದು ರಾಜ್ಯಮಟ್ಟದ ಕನ್ನಡ ಸುದ್ದಿವಾಹಿನಿ ನ್ಯೂಸ್ ಫಸ್ಟ್ ವರದಿ ಮಾಡಿದೆ.
ಚನ್ನಪಟ್ಟಣ ಬಳಿ ಆಗಮಿಸಿದ ಪಾದಯಾತ್ರೆಯ ವರದಿ ಮಾಡುತ್ತಿದ್ದ ನ್ಯೂಸ್ ಫಸ್ಟ್ ಸುದ್ದಿವಾಹಿನಿಯ ವರದಿಗಾರರಾದ ಮೋಹನ್, ಜಿ.ಮಂಜುನಾಥ, ಕ್ಯಾಮರಾಮ್ಯಾನ್ ಅವಿರಾಜ್ ಹಾಗೂ ಚಾಲಕ ಆನಂದ್ ಮೇಲೆ ಶಾಸಕ ಹರೀಶ್ ಪೂಂಜರ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ. ಹರೀಶ್ ಪೂಂಜ ಹಾಗೂ ಬೆಂಬಲಿಗರು ಪತ್ರಕರ್ತರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ನ್ಯೂಸ್ ಫಸ್ಟ್ ತಿಳಿಸಿದೆ.
ಹೆದ್ದಾರಿಯಲ್ಲಿ ಪಾದಯಾತ್ರೆಯಲ್ಲಿ ವರದಿಗಾರರು ತೆರಳುತ್ತಿದ್ದ ಕಾರನ್ನು ತಡೆದ ಹರೀಶ್ ಪೂಂಜರ ಬೆಂಬಲಿಗರು, ವಾಹನವನ್ನು ಮುಂದಕ್ಕೆ ಹೋಗಲು ಅವಕಾಶ ನೀಡಲಿಲ್ಲ. ವರದಿಗಾರಿಕೆ ಮಾಡುತ್ತಿzವೆ, ಯಾಕೆ ತಡೆಯುತ್ತಿದ್ದೀರಿ ಎಂದು ಪ್ರಶ್ನಿಸಿದಾಗ ಹರೀಶ್ ಪೂಂಜ, ನಾನು ಎಲ್ಲ ನೋಡಿದ್ದೀನಿ. ನೀವು ನಮ್ಮತ್ರ ಏನೂ ಮಾಡಲು ಆಗಲ್ಲ. ನೀವು ನಮ್ಮಂತೆಯೇ ಪಾದಯಾತ್ರೆ ಮಾಡಿ. ಕಾರು ಯಾಕೆ ತರುತ್ತೀರಿ ಎಂದು ಹೇಳಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅವರ ಕೆಲವು ಬೆಂಬಲಿಗರು, ನೀವು ಮಾಧ್ಯಮದವರೆಂದರೆ ಸ್ಪೆಷಲ್ಲಾ? ನೀವೇನು ಆಕಾಶದಿಂದ ಉದುರಿದ್ದೀರಾ? ವಾಹನದಲ್ಲಿ ಯಾಕೆ ಹೋಗುತ್ತೀರಿ? ನಮ್ಮೊಂದಿಗೆ ಪಾದಯಾತ್ರೆಯಲ್ಲೇ ಬನ್ನಿ ಎಂದು ಹೇಳಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ಬೂಟುಗಾಲಿನಿಂದ ಒದ್ದಿದ್ದಾರೆ, ನ್ಯೂಸ್ ಫಸ್ಟ್ ಚಾಲಕನ ಕತ್ತಿನ ಭಾಗಕ್ಕೆ ಗಾಯವಾಗಿದೆ ಎಂದು ನ್ಯೂಸ್ ಫಸ್ಟ್ ವರದಿಯಲ್ಲಿ ತಿಳಿಸಿದೆ.
ಯಡಿಯೂರಪ್ಪರಿಗೆ ದೂರು: ಹರೀಶ್ ಪೂಂಜ ಮತ್ತು ಬೆಂಬಲಿಗರು ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದು, ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮಾಧ್ಯಮದವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರಿಗೆ ದೂರು ನೀಡಿದ್ದಾರೆ. ಮಾಧ್ಯಮದವರ ಮೇಲೆ ಹಲ್ಲೆ ಅಕ್ಷಮ್ಯ ಅಪರಾಧ. ಖುದ್ದು ಹರೀಶ್ ಪೂಂಜರನ್ನು ಕರೆಸಿ ವಿಚಾರಿಸುತ್ತೇನೆ. ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎಂದು ನ್ಯೂಸ್ ಫಸ್ಟ್ ತಿಳಿಸಿದೆ.

ಪೂಂಜರದ್ದು ಗೂಂಡಾಗಿರಿ: ಕರ್ನಾಟಕ ಕಾಂಗ್ರೆಸ್ ಟೀಕೆ: ಪಾದಯಾತ್ರೆಯಲ್ಲಿ ಬಿಜೆಪಿಯ ರೌಡಿ ಮೋರ್ಚಾ ಮತ್ತೊಮ್ಮೆ ಕಾರ್ಯಾಚರಣೆಗೆ ಇಳಿದಿದೆ. ರೌಡಿ ಮೋರ್ಚಾದ ಗೂಂಡಾಗಿರಿಯ ನೇತೃತ್ವವನ್ನು ಶಾಸಕ ಹರೀಶ್ ಪೂಂಜ ವಹಿಸಿಕೊಂಡಿದ್ದಾರೆಯೇ? ಪಾದಯಾತ್ರೆಯಲ್ಲಿ ರೌಡಿ ಮೋರ್ಚಾದ ಕಾರ್ಯಕರ್ತರು ಮಾಧ್ಯಮದವರ ಮೇಲೆ ಹಲ್ಲೆ ಮಾಡಿದ್ದು ಬಿಜೆಪಿಯ ಗೂಂಡಾ ಸಂಸ್ಕೃತಿಯ ಪ್ರತೀಕ. ಮೊದಲು ಅರಣ್ಯ ಅಧಿಕಾರಿಗಳ ಮೇಲೆ ಹಲ್ಲೆ, ನಂತರ ಪೊಲೀಸರ ಮೇಲೆ ಹಲ್ಲೆ, ಈಗ ಮಾಧ್ಯಮದವರ ಮೇಲೆ ಹಲ್ಲೆ. ಇದು ಹರೀಶ್ ಪೂಂಜನ ಗೂಂಡಾಗಿರಿಯ ಇತಿಹಾಸವೇ? ಶಾಸಕ ಹರೀಶ್ ಪೂಂಜನನ್ನು ಗೂಂಡಾಗಿರಿಗಾಗಿಯೇ ಬೆಳಸುತ್ತಿದ್ದೀರಾ ಎಂದು ಕರ್ನಾಟಕ ಕಾಂಗ್ರೆಸ್ ತನ್ನ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪ್ರಶ್ನಿಸಿದೆ.

Exit mobile version