Site icon Suddi Belthangady

ಬೆಳ್ತಂಗಡಿ ಪ.ಪಂ. ಅಧ್ಯಕ್ಷಗಾದಿ ಯಾರಿಗೆ ?- ಜಯಾನಂದ ಗೌಡ, ಶರತ್ ಕುಮಾರ್ ಅಧ್ಯಕ್ಷ ಸ್ಥಾನಕ್ಕೆ, ತುಳಸಿ, ಗೌರಿ ಉಪಾಧ್ಯಕ್ಷ ಸ್ಥಾನಕ್ಕೆ ಚರ್ಚೆ

ಬೆಳ್ತಂಗಡಿ: ಪಟ್ಟಣ ಪಂಚಾಯತ್ ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯರಿಗೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾತಿ ಪ್ರಕಟಗೊಂಡಿದೆ. ಇದರೊಂದಿಗೆ ಅಧ್ಯಕ್ಷ-ಉಪಾಧ್ಯಕ್ಷರಾಗಿ ಯಾರು ಆಯ್ಕೆಯಾಗುತ್ತಾರೆ ಎಂಬ ಕುತೂಹಲವೂ ಗರಿಗೆದರಿದೆ.
ಬೆಳ್ತಂಗಡಿ ಪಟ್ಟಣ ಪಂಚಾಯತ್‌ನಲ್ಲಿ ಒಟ್ಟು ೧೧ ಸದಸ್ಯರಿದ್ದು, ಬಿಜೆಪಿ ಬೆಂಬಲಿತ ೭ ಹಾಗೂ ಕಾಂಗ್ರೆಸ್ ಬೆಂಬಲಿತ ೪ ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯರಿಗೆ ಮೀಸಲಾಗಿದ್ದು ಸದಸ್ಯರಾದ ರಾಜಶ್ರೀ ವಿ. ರಮಣ್, ಅಂಬರೀಶ್, ಶರತ್ ಕುಮಾರ್, ರಜನಿ ಕುಡ್ವ, ಜನಾರ್ದನ, ಮುಸ್ತರ್ ಜಾನ್ ಮೆಹಬೂಬ್, ಲೋಕೇಶ್, ಡಿ.ಜಗದೀಶ್, ತುಳಸಿ, ಗೌರಿ ಹಾಗೂ ಜಯಾನಂದ ಗೌಡ ಟಿ.ಯವರಿಗೆ ಅವಕಾಶ ಇದೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾತಿ ಬಂದಿದ್ದು, ಸದಸ್ಯರಾದ ತುಳಸಿ, ರಾಜಶ್ರೀ ವಿ.ರಮಣ್, ಗೌರಿ, ರಜನಿ ಕುಡ್ವ ಹಾಗೂ ಮುಸ್ತರ್ ಜಾನ್ ಮೆಹಬೂಬ್‌ಗೆ ಅವಕಾಶಗಳಿವೆ.
ಈ ಪೈಕಿ ಅಧ್ಯಕ್ಷ ಸ್ಥಾನಕ್ಕೆ ಜಯಾನಂದ ಗೌಡ ಹಾಗೂ ಶರತ್ ಕುಮಾರ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತುಳಸಿ ಮತ್ತು ಗೌರಿಯವರ ಹೆಸರು ಬಿಜೆಪಿ ಪಾಳಯದಲ್ಲಿ ಕೇಳಿಬರುತ್ತಿದ್ದು, ಅಧ್ಯಕ್ಷರಾಗಿ ಜಯಾನಂದ ಗೌಡ ಟಿ. ಮತ್ತು ಉಪಾಧ್ಯಕ್ಷರಾಗಿ ತುಳಸಿ ಆಯ್ಕೆಯಾಗುವ ಸಾಧ್ಯತೆ ಇದೆ. ಜಯಾನಂದ ಗೌಡ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.
ವರ್ಷದಿಂದ ಖಾಲಿ: ಮೀಸಲಾತಿ ಪ್ರಕಟಗೊಳ್ಳದ ಕಾರಣ ಕಳೆದ ಒಂದು ವರ್ಷ ಎರಡು ತಿಂಗಳಿನಿಂದ ಅಧ್ಯಕ್ಷ -ಉಪಾಧ್ಯಕ್ಷ ಸ್ಥಾನಗಳು ಖಾಲಿಯಾಗಿದ್ದವು. ಬಿಜೆಪಿ ಬೆಂಬಲಿತ ಸದಸ್ಯರಾದ ರಜನಿ ಕುಡ್ವ ಅಧ್ಯಕ್ಷರಾಗಿ ಹಾಗೂ ಜಯಾನಂದ ಗೌಡ ಉಪಾಧ್ಯಕ್ಷರಾಗಿ ಪ್ರಥಮ ಅವಧಿಯಲ್ಲಿ ಆಯ್ಕೆಯಾಗಿದ್ದರು. ಅವಧಿ ಮುಗಿದ ಬಳಿಕ ತಾಲೂಕು ದಂಡಾಧಿಕಾರಿ ಪ.ಪಂ. ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
೩೦ ತಿಂಗಳು ಆಡಳಿತಾವಧಿ: ಎರಡನೇ ಅವಧಿಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ೩೦ ತಿಂಗಳು ಕಾರ್ಯನಿರ್ವಹಿಸಲು ಅವಕಾಶವಿದೆ. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಐದು ವರ್ಷಗಳ ಅವಧಿಯಲ್ಲಿ ಮೊದಲ ೩೦ ತಿಂಗಳ ಅವಧಿ ಮುಗಿದ ಬಳಿಕ ಎರಡನೇ ಅವಧಿಯ ೩೦ ತಿಂಗಳಿಗೆ ಮೀಸಲಾತಿ ನಿಗದಿಪಡಿಸಬೇಕಿತ್ತು. ಆದರೆ ಮೀಸಲಾತಿ ವಿಚಾರ ನ್ಯಾಯಾಲಯದಲ್ಲಿ ಇದ್ದ ಕಾರಣ ಬಾಕಿ ಉಳಿದಿತ್ತು. ಇದರ ನಡುವೆ ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿ ವರ್ಗಗಳಿಗೆ ರಾಜಕೀಯ ಮೀಸಲಾತಿ ನೀಡುವ ಬಗ್ಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ನ್ಯಾ. ಭಕ್ತವತ್ಸಲ ಆಯೋಗವನ್ನು ರಚಿಸಿತ್ತು. ಅದರ ವರದಿ ಸಲ್ಲಿಕೆಯಾಗಬೇಕಾದ ಹಿನ್ನೆಲೆಯಲ್ಲಿ ಮೀಸಲಾತಿ ಮತ್ತೆ ಬಾಕಿ ಉಳಿಯಿತು. ಇದೀಗ ಅಂತಿಮವಾಗಿ ಸರಕಾರ ಅಧಿಸೂಚನೆ ಹೊರಡಿಸಿದೆ. ಸರಕಾರ ೨೦೧೨ ಸೆ.೧೨ರಂದು ಸುಪ್ರೀಂ ಕೋರ್ಟ್‌ಲ್ಲಿ ಸಲ್ಲಿಸಿದ್ದ ಮೀಸಲಾತಿ ಪಟ್ಟಿಯನ್ನೇ ಅಂತಿಮಗೊಳಿಸಲು ನಿರ್ಧರಿಸಿದ್ದು, ಅದರಂತೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್‌ಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಿ ಅಧಿಸೂಚನೆ ಹೊರಡಿಸಲಾಗಿದೆ.

Exit mobile version