ಪುತ್ತೂರು: ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆ ವಿದ್ಯಾಮಾತಾ ಅಕಾಡೆಮಿಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆ.15 ರಂದು ಆಚರಿಸಲಾಯಿತು.ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ದಕ್ಷಿಣ ಕನ್ನಡ ಜಿಲ್ಲಾ ಧಾರ್ಮಿಕ ಪರಿಷತ್ ನ ಸದಸ್ಯರಾದ ಶಿವನಾಥ್ ರೈ ಮೇಗಿನಗುತ್ತು ಮಾತನಾಡಿ, ನಮಗಿರುವ ಸ್ವಾತಂತ್ರ್ಯದ ಮಹತ್ವದ ಕುರಿತು ಯುವ ಜನತೆ ತಿಳಿದುಕೊಳ್ಳುವ ಜೊತೆಗೆ ಸದೃಢ ದೇಶದ ಆಡಳಿತಾತ್ಮಕ ವ್ಯವಸ್ಥೆಯನ್ನು ಇನ್ನೂ ಗಟ್ಟಿಯಾಗಿ ಬಲಪಡಿಸಬೇಕು ಹಾಗೂ ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕೆಂದು” ಕಿವಿ ಮಾತು ಹೇಳಿದರು.
ಪುತ್ತೂರು ಲಯನ್ಸ್ ಕ್ಲಬ್ ನ ಪೂರ್ವಾಧ್ಯಕ್ಷ ರಾದ ರವೀಂದ್ರ ಪೈ ರವರು ಸ್ವಾತಂತ್ರ್ಯದ ಕುರಿತು ಶುಭ ನುಡಿದು ಪ್ರಸ್ತುತ ವಿದ್ಯಾಮಾತಾ ಅಕಾಡೆಮಿಯ ಕಾರ್ಯ ಚಟುವಟಿಕೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಅತಿಥಿಯಾಗಿ ಬಾಗವಹಿಸಿ ಮಾತನಾಡಿದ ಲಿಯೋ ಕ್ಲಬ್ ನ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ರಂಜಿತಾ ಶೆಟ್ಟಿ ರವರು ಮಾತನಾಡಿ ವಿವಿಧ ಆಯಾಮಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಿ ಗ್ರಾಮೀಣ ಯುವ ಜನತೆಯನ್ನು ಸರಕಾರಿ ಅಧಿಕಾರಿಯನ್ನಾಗಿಸುವ ಕಾಯಕದಲ್ಲಿ ತೊಡಗಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ ಆಚರಿಸುವ ಸ್ವಾತಂತ್ರ್ಯ ದಿನಾಚರಣೆಯು ಸ್ಫೂರ್ತಿದಾಯಕ ಎಂದರು.
ಸಾಧಕರಿಗೆ ಸನ್ಮಾನ: ವಿಶ್ವವಿದ್ಯಾಲಯದ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಅಕಾಡೆಮಿಯಲ್ಲಿ ತರಬೇತಿ ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಸೃಷ್ಠಿ ಪಿ ಎಸ್ ರವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅತಿಥಿವರ್ಯರನ್ನು ಸಂಸ್ಥೆಯ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈರವರು ಸ್ಮರಣಿಕೆ ನೀಡಿ ಗೌರವಿಸಿದರು. ಅಲ್ಲದೇ ವಿದ್ಯಾಮಾತಾ ಅಕಾಡೆಮಿಯ ತರಬೇತುದಾರರನ್ನು ಕೂಡ ಗೌರವಿಸಲಾಯಿತು.
ಪ್ರಮಾಣ ಪತ್ರ ವಿತರಣೆ: ವಿದ್ಯಾಮಾತಾ ಅಕಾಡೆಮಿಯಲ್ಲಿ ಕಂಪ್ಯೂಟರ್ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಕಾರ್ಯಕ್ರಮ ಅತಿಥಿಗಳಾದ ಶಿವನಾಥ್ ರೈ ರವರು ಪ್ರಮಾಣಪತ್ರವನ್ನು ವಿತರಿಸಿ ಅಭಿನಂದಿಸಿದರು.
ಮೆರುಗು ನೀಡಿದ ಸಾಂಸ್ಕೃತಿಕ ಕಾರ್ಯಕ್ರಮ: ಸ್ವಾತಂತ್ರ್ಯ ದಿನವನ್ನು ಸ್ಮರಣಿಯವಾಗಿಸುವ ನಿಟ್ಟಿನಲ್ಲಿ ಸಂಸ್ಥೆಯಲ್ಲಿ ತರಬೇತಿಯಾರ್ಥಿಗಳಾಗಿರುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನು ಪಡೆಯುತ್ತಿರುವ ವಿದ್ಯಾರ್ಥಿಗಳು ದೇಶ ಭಕ್ತಿ ಸಾರುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.ಸಭಾ ಕಾರ್ಯಕ್ರಮದಲ್ಲಿ ವಿದ್ಯಾಮಾತಾ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈ ಸ್ವಾಗತಿಸಿ ಪ್ರಸ್ತಾವನೆಗೈದರು.ತರಬೇತುದಾರ ಚೇತನ ಸತೀಶ್ ರವರು ಧನ್ಯವಾದ ಅರ್ಪಿಸಿ, ತರಬೇತುದಾರರಾದ ಚಂದ್ರಕಾಂತ್ ರವರು ನಿರೂಪಿಸಿದರು.ಕಾರ್ಯಕ್ರಮದಲ್ಲಿ ವಿದ್ಯಾಮಾತಾ ಅಕಾಡೆಮಿಯ ತರಬೇತುದಾರರರು, ಸಿಬ್ಬಂದಿಗಳು.ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ವೃತ್ತಿಪರ ಕೋರ್ಸ್ ಗಳ ತರಬೇತಿಯನ್ನು ಪಡೆಯುತ್ತಿರುವ ವಿ. ಅಕಾಡೆಮಿಯ ಪುತ್ತೂರು ಕೇಂದ್ರದ ವಿದ್ಯಾರ್ಥಿಗಳು ಹಾಗೂ ಸುಳ್ಯ ಶಾಖೆಯ ವಿದ್ಯಾರ್ಥಿಗಳು ಹಾಜರಿದ್ದರು, ಸಿಬ್ಬಂದಿ ಮಿಥುನ್ ರೈ ಸಹಕರಿಸಿದರು.