Site icon Suddi Belthangady

ಹದಗೆಟ್ಟ ಇಂದಬೆಟ್ಟು ಶ್ರೀ ಅರ್ಧನಾರೀಶ್ವರಿ ದೇವಸ್ಥಾನಕ್ಕೆ ಹೋಗುವ ರಸ್ತೆ- ಬ್ಯಾನರ್ ಅಳವಡಿಸಿ ಆಕ್ರೋಶ ವ್ಯಕ್ತಪಡಿಸಿದ ಮಾಜಿ ಗ್ರಾ.ಪಂ. ಸದಸ್ಯ ವೆಂಕಪ್ಪ ಕೋಟ್ಯಾನ್

ಇಂದಬೆಟ್ಟು: ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಅರ್ಧನಾರೀಶ್ವರಿ ದೇವಸ್ಥಾನದ ರಸ್ತೆ ತೀರಾ ಹದಗೆಟ್ಟಿದೆ. ಇದರಿಂದಾಗಿ ಬೆಸೆತ್ತ ಮಾಜಿ ಗ್ರಾಮ ಪಂಚಾಯತ್ ಸದಸ್ಯ, ಸಾಮಾಜಿಕ ಹೋರಾಟಗಾರ ವಿಶಿಷ್ಟವಾಗಿ ತನ್ನ ಆಕ್ರೋಶ ವ್ಯಕ್ತಪಡಿಸಿ ಬ್ಯಾನರ್ ಅಳವಡಿಸಿದ್ದು, ಈ ಬ್ಯಾನರ್ ಸಾಕಷ್ಟು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಚರ್ಚೆಗೆ ಗ್ರಾಸವಾಗಿದೆ.

ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಶ್ರೀ ಅರ್ಧನಾರೀಶ್ವರಿ ದೇವಸ್ಥಾನ ಅತ್ಯಂತ ಪುರಾತನವಾಗಿದ್ದು, ಇತಿಹಾಸ ಪ್ರಸಿದ್ಧವಾಗಿದೆ. ದಿನನಿತ್ಯ ನೂರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಇಲ್ಲಿ ಭಕ್ತರು ಕಾಲ್ನಡಿಗೆ, ವಾಹನಗಳಲ್ಲಿ ಸಂಚರಿಸಲು ಅಸಾಧ್ಯವಾದ ಸ್ಥಿತಿಯಲ್ಲಿ ರಸ್ತೆ ಅವ್ಯವಸ್ಥೆಯಾಗಿದೆ. ಈ ಬಗ್ಗೆ ಶಾಸಕ ಹರೀಶ್ ಪೂಂಜಾ ಸೇರಿದಂತೆ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ನಾಲ್ಕೈದು ವರ್ಷಗಳಿಂದ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇಂದಬೆಟ್ಟು ಗ್ರಾಮಸಭೆಯಲ್ಲೂ ಈ ಬಗ್ಗೆ ವ್ಯಾಪಕ ಚರ್ಚೆಯಾಗಿದೆ, ಆದರೂ ಪರಿಹಾರ ಶೂನ್ಯವಾಗಿದೆ.

ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಬೇಜಾವಬ್ದಾರಿಯಿಂದ ಬೆಸೆತ್ತ ಮಾಜಿ ಗ್ರಾಮ ಪಂಚಾಯತ್ ಸದಸ್ಯ , ಸಾಮಾಜಿಕ ಹೋರಾಟಗಾರ ವೆಂಕಪ್ಪ ಕೋಟ್ಯಾನ್ ರವರು ದೇವಸ್ಥಾನಕ್ಕೆ ತೆರಳುವ ರಸ್ತೆ ಬದಿಯಲ್ಲಿ “ಶ್ರೀ ಅರ್ಧನಾರೀಶ್ವರಿ ದೇವಸ್ಥಾನಕ್ಕೆ ಹೋಗುವ ರಸ್ತೆಯ ಕಾಮಗಾರಿ ಮಾಡಲು ತಮ್ಮಿಂದ 1 ರೂಪಾಯಿ ಸಹಾಯಧನ ನೀಡಬೇಕಾಗಿ ವಿನಂಬ್ರ ವಿನಂತಿ” ಎಂದು ಕೈ ಬರಹದ ಬ್ಯಾನರ್ ಅಳವಡಿಸಿದ್ದು , ಅದರ ಕೆಳಗೆ ಬಕೆಟ್ ನ್ನು ಇಟ್ಟು ತನ್ನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬ್ಯಾನರ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದು, ಚರ್ಚೆಗೂ ಗ್ರಾಸವಾಗಿದೆ‌.

Exit mobile version