ಪೆರಾಡಿ: ಭಾರತದ ಸಮಗ್ರತೆಮ ಭಾವೈಕ್ಯತೆಯನ್ನು ಸ್ವಾತಂತ್ರ್ಯ ಆಚರಣೆಯ ಮೂಲಕ ಕಂಡುಕೊಂಡ ಭಾರತೀಯರಿಗೆ ಸ್ವಾತಂತ್ರ್ಯ ದಿನವೆಂಬುವುದು ಪರಮ ಪವಿತ್ರ. ನಮ್ಮ ಪೂರ್ವಿಕರ ರಾಷ್ಟ್ರೀಯ ಏಕತಾಭಾವ ಮತ್ತು ತ್ಯಾಗೋಜ್ವಲ ಹೋರಾಟದ ಫಲವಾಗಿದೆ ಸ್ವಾತಂತ್ರ್ಯ ದಿನಾಚರಣೆ. ಇದರಲ್ಲಿ ಮುಸಲ್ಮಾನರ ಕೊಡುಗೆ ಅವರ್ಣನೀಯ. ಮುಸ್ಲಿಂ ಸಮುದಾಯ ಇತಿಹಾಸವನ್ನು ಮುಖ್ಯವಾಹಿನಿಯಿಂದ ಪ್ರತ್ಯೇಕಿಸಿ, ಮರೆಮಾಚಲು ಪ್ರಯತ್ನಿಸುತ್ತಿರುವ ಕೆಲ ವ್ಯವಸ್ಥಿತ ಕುತಂತ್ರ ಖಂಡನೀಯ. ಇದರ ಬಗ್ಗೆ ನಾವು ಜಾಗರೂಕತೆ ವಹಿಸಬೇಕು ಎಂದು ಪೆರಾಡಿ ಜುಮಾ ಮಸೀದಿ ಖತೀಬರಾದ ಬಹು.ಸಪ್ವಾನ್ ಬಾಖವಿ ಮಾಪಾಲ್ ಪೆರಾಡಿ ಮಸೀದಿ ವಠಾರದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಸಂದೇಶ ಭಾಷಣ ನಡೆಸಿದರು.
ಬದ್ರಿಯಾ ಜುಮಾ ಮಸೀದಿ ಹಾಗೂ ಖುವ್ವತುಲ್ ಇಸ್ಲಾಂ ಮದ್ರಸ ಪೆರಾಡಿ ಇದರ ವತಿಯಿಂದ ಸ್ವಾತಂತ್ರ್ಯೋತ್ಸವ ದಿನಾಚರಣೆ ನಡೆಯಿತು.
ಕಾರ್ಯಕ್ರಮದಲ್ಲಿ ಬದ್ರಿಯಾ ಜುಮಾ ಮಸೀದಿ ಪೆರಾಡಿ ಇದರ ಅಧ್ಯಕ್ಷರಾದ ಜ. ಅಬ್ದುಲ್ ಸಲಾಂ ಮರೋಡಿ ಸಭಾಧ್ಯಕ್ಷತೆ ವಹಿಸಿ ಧ್ವಜಾರೋಹಣ ನೆರವೇರಿಸಿ “ಸ್ವಾತಂತ್ರ್ಯ ದಿನಾಚರಣೆಯು ನಮ್ಮೆಲ್ಲರ ಕರ್ತವ್ಯ. ಇದಕ್ಕಾಗಿ ಶ್ರಮಿಸುವುದು, ಧ್ವನಿ ಎತ್ತುವುದು ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿಯಾಗಿದೆ. ಯುವ ಸಮೂಹ ಇದರ ಬಗ್ಗೆ ಇನ್ನಷ್ಟು ಕಾಳಜಿ ವಹಿಸಿ ಮುಂದಿನ ಪೀಳಿಗೆಗೆ ಮಾದರಿಯಾಗಬೇಕು” ಎಂದು ಅಧ್ಯಕ್ಷೀಯ ಭಾಷಣ ನಡೆಸಿದರು.
ಮದ್ರಸ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಗೂ ದೇಶಭಕ್ತಿ ಗೀತೆ ಆಲಾಪನೆ ಮಾಡಿದರು. ಎಸ್.ಕೆ.ಎಸ್.ಬಿ.ವೈ ಖವ್ವತುಲ್ ಇಸ್ಲಾಂ ಮದ್ರಸ ಪೆರಾಡಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಆಶಿಕ್ ಪ್ರತಿಜ್ಞಾವಿಧಿ ಬೋಧಿಸಿದರು. ಮದ್ರಸ ಅಧ್ಯಾಪಕರಾದ ಬಹು.ಅಬ್ದುರ್ರಹ್ಮಾನ್ ಫೈಝಿ ನಂದಾವರ ಪ್ರಾರ್ಥನೆಗೆ ನೇತೃತ್ವ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಜಮಾಅತ್ ಸಮಿತಿ ಉಪಾಧ್ಯಕ್ಷ ಹಾಜಿ ಹಸನಬ್ಬ ನೆಲ್ಲಿಂಗೇರಿ, ಕಾರ್ಯದರ್ಶಿಗಳಾದ ಮುಹಮ್ಮದ್ ತಸ್ಲಿಂ, ಮುನವ್ವರ್ ರಾಝಿಕ್, ರಾಹಿಬ್ ಯು.ಕೆ. ಕೋಶಾಧಿಕಾರಿ ಇಸುಬ್ ಟಿ, ಮುಹಮ್ಮದ್ ಶರೀಫ್ ದುಗನೊಟ್ಟು, ಹಮೀದ್ ನೆಲ್ಲಿಗುಡ್ಡೆ ಅಬ್ದುಲ್ ಕರೀಂ ತವಕ್ಕಲ್, ಸ್ವಲಾತ್ ಕಮಿಟಿಯ ಕಾರ್ಯದರ್ಶಿ ಸಲೀಂ ಪೆರಾಡಿ, ಮಾಝಿನ್ ಪೆರಾಡಿ ಸೇರಿದಂತೆ ಜಮಾಅತ್ ಪದಾಧಿಕಾರಿಗಳು, ಸ್ವಲಾತ್ ಕಮಿಟಿ, ಎಸ್.ಕೆ.ಎಸ್.ಬಿ.ವೈ ಸಮಿತಿಯ ಸದಸ್ಯರು, ಊರಿನ ಯುವಕರು ಸೇರಿದಂತೆ ಮದ್ರಸ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.