Site icon Suddi Belthangady

ಮಂಗಳೂರಿನಲ್ಲಿ ಅಕ್ರಮವಾಗಿ ಸಿಮ್ ಕಾರ್ಡ್ ಮಾರಾಟ- ಬೆಳ್ತಂಗಡಿಯ ಇಬ್ಬರು ಯುವಕರನ್ನು ಬಂಧಿಸಿದ ಮಂಗಳೂರಿನ ಸೈಬರ್ ಪೊಲೀಸರು

ಬೆಳ್ತಂಗಡಿ: ಅಕ್ರಮವಾಗಿ ಸಿಮ್ ಕಾರ್ಡ್ ಗಳನ್ನು ಸಂಗ್ರಹಿಸಿ ಸೈಬ‌ರ್ ವಂಚಕರಿಗೆ ಒದಗಿಸುತ್ತಿದ್ದ ಇಬ್ಬರು ಯುವಕರನ್ನು ಮಂಗಳೂರಿನ ಸೈಬರ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇವರಿಂದ 86 ಸಿಮ್ ಕಾರ್ಡ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಳ್ತಂಗಡಿ ನಿವಾಸಿಗಳಾದ ಶಹಾದ್ ಮಹಮ್ಮದ್ ಸಮರ್ (21ವ) ಮತ್ತು ಮೊಹಮ್ಮದ್ ಅಜೀಮ್ (19ವ) ಬಂಧಿತರು. ಶಹಾದ್ ಮಂಗಳೂರಿನ ಯೆನಪೋಯ ಮೆಡಿಕಲ್ ಕಾಲೇಜಿನಲ್ಲಿ ಕೊನೆಯ ವರ್ಷದ ಬಿಬಿಎ ಓದುತ್ತಿದ್ದ. ಅಜೀಮ್ ಹತ್ತನೇ ಕ್ಲಾಸಿನಲ್ಲಿ ಶಿಕ್ಷಣ ಕೊನೆಗೊಳಿಸಿದ್ದು, ಮೊಬೈಲ್‌ ಅಂಗಡಿ, ಸಿಮ್ ಸಂಗ್ರಹ ಕೆಲಸದಲ್ಲಿ ತೊಡಗಿದ್ದನು. ಇವರು ತಮ್ಮ ಸ್ನೇಹಿತರು, ಪರಿಚಿತರ ಮೂಲಕ ಸಿಮ್ ಗಳನ್ನು ಮಾಡಿಸಿ, ಅವರಿಂದ 200 ರೂ.ಗೆ ಖರೀದಿಸುತ್ತಿದ್ದರು. ಅದನ್ನು ಬಳಿಕ ಮಡಂತ್ಯಾರಿನ ಸಾಜಿದ್ ಮತ್ತು ಬೆಳ್ತಂಗಡಿಯ ಮುಸ್ತಫಾ ಎಂಬವರಿಗೆ ಒದಗಿಸುತ್ತಿದ್ದರು.

ಮುಸ್ತಫಾ ಮತ್ತು ಸಾಜಿದ್ ವಿದೇಶಿ ನೆಟ್ವರ್ಕ್ ಹೊಂದಿದ್ದು, ಸಿಮ್ ಗಳನ್ನು ಅಕ್ರಮವಾಗಿ ಸೈಬರ್ ವಂಚಕರಿಗೆ ಪೂರೈಸುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಈ ರೀತಿಯ ಸಿಮ್ ಗಳನ್ನು ಪಡೆದು ಸೈಬರ್ ವಂಚಕರು ಅವುಗಳನ್ನು ವಾಟ್ಸಪ್ ಜಾಲತಾಣ ಬಳಕೆ ಉದ್ದೇಶಕ್ಕೆ ಬಳಸುತ್ತಿದ್ದರು. ಯಾರದ್ದೋ ಹೆಸರಿನಲ್ಲಿರುವ ಈ ಸಿಮ್ ಬಳಸಿ, ವಾಟ್ಸಪ್ ಮೂಲಕ ಗ್ರಾಹಕರನ್ನು ಸಂಪರ್ಕಿಸುವುದು, ಮೆಸೇಜ್ ಫಾರ್ವರ್ಡ್ ಮಾಡುವುದಕ್ಕೆ ಬಳಸುತ್ತಿದ್ದರು. ಈ ಸಿಮ್ ಭಯೋತ್ಪಾದಕ ಕೃತ್ಯಗಳಿಗೆ ಬಳಕೆ ಆಗುತ್ತಿತ್ತಾ ಎನ್ನುವ ಬಗ್ಗೆ ತನಿಖೆ ಮುಂದುವರಿದಿದೆ. ಮುಸ್ತಫಾ ಮತ್ತು ಸಾಜಿದ್ ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡಿದ್ದಾರೆ.

Exit mobile version