Site icon Suddi Belthangady

ಲಾಯಿಲ: ಗುರಿಂಗಾನದಲ್ಲಿ ನದಿ ಒತ್ತುವರಿ ಅಕ್ರಮ ತಡೆಗೋಡೆ ತೆರವು

ಲಾಯಿಲ: ಗುರಿಂಗಾನ ಎಂಬಲ್ಲಿ ಕೃತಕ ನೆರೆಗೆ ಕಾರಣವಾಗಿದ್ದ ನದಿ ಒತ್ತುವರಿ ಅಕ್ರಮ ತಡೆಗೋಡೆ ಕೊನೆಗೂ ತೆರವುಗೊಳಿಸಲಾಗಿದೆ.

ಇತ್ತೀಚೆಗೆ ಸುರಿದ ಬಾರಿ ಮಳೆಗೆ ಗುರಿಂಗಾನ ಎಂಬಲ್ಲಿ ನೆರೆ ಬಂದು ಸ್ಥಳೀಯ 14 ಕುಟುಂಬಗಳನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿತ್ತು. ಸ್ಥಳೀಯ ವ್ಯಕ್ತಿಯೊಬ್ಬ ನದಿ ಸೇರಿದಂತೆ ಪರಂಬೋಕು ಸ್ಥಳವನ್ನು ಅತಿಕ್ರಮಣ ಮಾಡಿ ಅದಕ್ಕೆ ಅಕ್ರಮವಾಗಿ ತಡೆಗೋಡೆ ನಿರ್ಮಾಣ ಮಾಡಲಾಗಿತ್ತು. ಈ ಬಗ್ಗೆ ಲಾಯಿಲ ಗ್ರಾಮ ಪಂಚಾಯತ್ ಸೇರಿದಂತೆ ಕಂದಾಯ ಇಲಾಖೆಗೆ ಸ್ಥಳೀಯರು ದೂರು ನೀಡಿದ್ದರು.

ಇತ್ತೀಚೆಗೆ ನೆರೆ ಪೀಡಿತ ಗುರಿಂಗಾನ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿದಾಗ ಸ್ಥಳೀಯರು ಈ ಅಕ್ರಮ ತಡೆಗೋಡೆ ಬಗ್ಗೆ ದೂರು ನೀಡಿದ್ದಾರೆ.

ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ ಹಾಗೂ ಬೆಳ್ತಂಗಡಿ ತಹಶೀಲ್ದಾರ್ ಅವರಿಗೆ ಜೆಸಿಬಿ ಮೂಲಕ ತಡೆಗೋಡೆ ಒಡೆದು ಹಾಕಲು ಸೂಚಿಸಿದ್ದರು. ಬಳಿಕ ತಹಶೀಲ್ದಾರ್ ಅವರ ನೇತೃತ್ವದಲ್ಲಿ ತಾಲೂಕು ಸರ್ವೆಯವರು ಅಳತೆ ನಡೆಸಿದಾಗ ಅಕ್ರಮ ಬಯಲಾಗಿತ್ತು.

ಸ್ಥಳದಲ್ಲಿದ್ದ ಅಕ್ರಮದಾರ ಬಿಜೆಪಿ ಎಸ್ಸಿ ಮೋರ್ಚಾದ ತಾಲೂಕು ಅಧ್ಯಕ್ಷ ಈಶ್ವರ ಬೈರ ಅವರಿಗೆ ಒಂದು ವಾರದೊಳಗೆ ಅಕ್ರಮ ತಡೆಗೋಡೆ ತೆರವುಗೊಳಿಸಲು ಸೂಚಿಸಿದರು. ಇದೀಗ ಅಕ್ರಮದಾರರೆ ಜೆಸಿಬಿ ಮೂಲಕ ತಡೆಗೋಡೆಯನ್ನು ತೆರವುಗೊಳಿಸಿದ್ದಾರೆ.

Exit mobile version