Site icon Suddi Belthangady

ಎಲ್ಲಾ ಸಂಘಟನೆಗಳ ಸಹಕಾರದಲ್ಲಿ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ಹೆದ್ದಾರಿಯ ಶ್ರಮದಾನ

ಬೆಳ್ತಂಗಡಿ: ಎಲ್ಲಾ ಸಂಘಟನೆಗಳ ಸಹಕಾರದಲ್ಲಿ ಆ.8ರಂದು ನಡೆದ ರಾಷ್ಟ್ರೀಯ ಹೆದ್ದಾರಿಯ ಶ್ರಮದಾನವು ಯಶಸ್ವಿಯಾಗಿದ್ದು ಸಾರ್ವಜನಿಕರಿಂದ ಪ್ರಶಂಸೆಗಳ ಮಹಾಪೂರವೇ ಹರಿದು ಬಂತು. ಅಲ್ಲಲ್ಲಿ ಉಂಟಾದ ದೊಡ್ಡ ದೊಡ್ಡ ಗಾತ್ರದ ಗುಂಡಿಗಳನ್ನು ಕಲ್ಲು ಮತ್ತು ಜಲ್ಲಿಗಳನ್ನು ಹಾಕಿ ಮುಚ್ಚಲಾಯಿತು. ತಾತ್ಕಾಲಿಕವಾಗಿ ಸಂಚಾರಕ್ಕೆ ಯೋಗ್ಯವೆನಿಸುವಂತಹ ಕಾಮಗಾರಿ ಮಾಡಿದ್ದು ಇದು ಮುಖ್ಯವಾಗಿ ಶಾಲಾ ಮಕ್ಕಳಿಗೆ ಪ್ರಯೋಜನವಾಗಲೆಂದು ಹಮ್ಮಿಕೊಂಡಿರುವ ಶ್ರಮದಾನವು ಆ ಎಲ್ಲಾ ವಾಹನ ಮಾಲಕರಿಗೆ ಮತ್ತು ಚಾಲಕರಿಗೆ ತಕ್ಕಮಟ್ಟಿಗೆ ನಿಟ್ಟುಸಿರು ಬಿಡುವಂತಾಯಿತು.

ಸುಮಾರು ನೂರಕ್ಕೂ ಮಿಕ್ಕಿ ಯುವಕ ಯುವತಿಯರು ಈ ಶ್ರಮದಾನದಲ್ಲಿ ಪಾಲ್ಗೊಂಡಿದ್ದು ಪ್ರಮುಖ ಸಂಘಟನೆಗಳ ಮುಖ್ಯಸ್ಥರು ಪದಾಧಿಕಾರಿಗಳೊಂದಿಗೆ ಹಾಜರಿದ್ದರು.ಹಿರಿಯ ವರ್ತಕ ವಿಷ್ಣು ದಾಸ್ ಬಾಳಿಗರವರು ಹಾರೆಯೊಂದಿಗೆ ಬಂದು ಅವ್ಯವಸ್ಥೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು ಮತ್ತು ರೂಪಾಯಿ ಒಂದು ಸಾವಿರವನ್ನು ನೀಡಿ, ಒಂದು ಪಿಕಪ್ ಜಲ್ಲಿ ತನ್ನದೆಂದು ತಿಳಿಸಿ ಸಹಕರಿಸಿದರು. ಅದರಂತೆ ಮಡಂತ್ಯಾರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ರವಿರಾಜ್ ಶೆಟ್ಟಿ ಪಾತಿಲ ರೂ.500, ರಾಜಶೇಖರ ಶೆಟ್ಟಿ ರೂ.500, ವಾಹನ ಮಾಲಕರು ರೂ.100ರಂತೆ ಇಬ್ಬರು ನೀಡಿ ಸಹಕರಿಸಿದರು.

ಸರಕಾರದಲ್ಲಿ ಹಣದ ಕೊರತೆಯಿರುವುದನ್ನು ಗಮನಿಸಿ ಸಾರ್ವಜನಿಕರಲ್ಲಿ ಒಂದು ರೂಪಾಯಿಯಾದರೂ ನೀಡಿ ಎಂದು ಬಟ್ಟೆ ಹಾಕಿ ಶೇಖರಣೆ ಮಾಡಲಾಯಿತು. ಸಾಂಕೇತಿಕವಾಗಿ ಶೇಖರಣೆಯಾದ ಮೊತ್ತವನ್ನು ತಹಶೀಲ್ದಾರರ ಮುಖಾಂತರ ಸರಕಾರಕ್ಕೆ ಪಾವತಿಸುವುದಾಗಿ ನಿರ್ಣಯಿಸಲಾಗಿದೆ.

ಈ ಸಂದರ್ಭದಲ್ಲಿ ಭಾಗವಹಿಸಿದ ಎಲ್ಲಾ ಸಾರ್ವಜನಿಕ ಬಂಧುಗಳಿಗೆ ಸಂಘಟನೆಯ ಮುಖ್ಯಸ್ಥರಿಗೆ ಪದಾಧಿಕಾರಿಗಳಿಗೆ ವಂದನೆಗಳನ್ನು ಸಲ್ಲಿಸಲಾಯಿತು. ಅದೇ ರೀತಿ ಪುಂಜಾಲಕಟ್ಟೆ ಆರಕ್ಷಕ ಠಾಣೆಯ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ, ಉಪಹಾರ ವ್ಯವಸ್ಥೆ ಮಾಡಿದ ವಿಜಯ ಚಂದ್ರ ಮಾಲಾಡಿಯವರಿಗೆ, ಸುದ್ದಿ ಬಿಡುಗಡೆಯ ಮಾಧ್ಯಮದವರಿಗೂ ಕೃತಜ್ಞತೆ ಸಲ್ಲಿಸಲಾಯಿತು.

Exit mobile version