Site icon Suddi Belthangady

ಆ.12: ಪ್ರಾಥಮಿಕ ಶಾಲಾ ಶಿಕ್ಷಕರಿಂದ ವಿವಿಧ ಬೇಡಿಕೆಗೆ ಬೆಂಗಳೂರು ಚಲೋ

ಬೆಳ್ತಂಗಡಿ: ಪದವಿ ಮುಗಿಸಿರುವ ಶಿಕ್ಷಕರನ್ನು ಪದವೀಧರ ಶಿಕ್ಷಕರೆಂದು ಘೋಷಿಸಬೇಕು.2017ರ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪೂರ್ವಾನ್ವಯಗೊಳಿಸಬಾರದು ಎಂಬುದು ಸೇರಿದಂತೆ ತಮ್ಮ ಅನೇಕ ಬೇಡಿಕೆಗಳನ್ನು ಮುಂದಿರಿಸಿಕೊಂಡು ಪ್ರಾಥಮಿಕ ಶಾಲಾ ಶಿಕ್ಷಕರು ರಾಜ್ಯಾದ್ಯಂತ ಬೀದಿಗಿಳಿಯಲು ಸಿದ್ಧರಾಗಿದ್ದಾರೆ. ಆಗಸ್ಟ್ 12 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಧರಣಿ ಸತ್ಯಾಗ್ರಹಕ್ಕೆ ತಯಾರಾಗಿದ್ದಾರೆ. ಹೋರಾಟದ ಮೊದಲ ಭಾಗವಾಗಿ ಬೆಳ್ತಂಗಡಿ ತಾಲೂಕು ಹಂತದಲ್ಲಿ ಆ.7ರಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಹಸೀಲ್ದಾರ್ ಮತ್ತು ಶಾಸಕರು, ವಿಧಾನಪರಿಷತ್ ಸದಸ್ಯರ ಮೂಲಕ ಸರಕಾರಕ್ಕೆ ಎಚ್ಚರಿಕೆ ಮನವಿ ನೀಡುವ ಮೂಲಕ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮನವಿ ಸಲ್ಲಿಸಿದ ಬೆಳ್ತಂಗಡಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕಿಶೋರ್ ಕುಮಾರ್ ಎಚ್.ಕೆ.ಮಾತನಾಡಿ, 2016 ರವರೆಗೆ 1-7 ತರಗತಿಗಳಿಗೆ ಪಾಠ ಮಾಡಲು ಅರ್ಹರಾಗಿದ್ದ ನಮ್ಮನ್ನು ಏಕಾಏಕಿ 1-5ಕ್ಕೆ ಪಾಠ ಮಾಡುವ ಶಿಕ್ಷಕರಾಗಿ, ಪಿ.ಎಸ್.ಟಿ.ಎಂಬ ಹೆಸರಲ್ಲಿ ಹಿಂಬಡ್ತಿ ಮಾಡಿ ಮಾನಸಿಕವಾಗಿ ಕುಗ್ಗಿಸಲಾಗಿದೆ. ಜೊತೆಗೆ ಮುಖ್ಯ ಶಿಕ್ಷಕರ ಬಡ್ತಿಗೂ ತೊಂದರೆಯಾಗಿದೆ.ಇದರ ಬಗ್ಗೆ ಈಗಾಗಲೇ ಸಾಕಷ್ಟು ಬಾರಿ ಮನವಿ ನೀಡಿದರೂ ಸರಕಾರಗಳು ಸ್ಪಂದಿಸಿಲ್ಲ.ಇದೀಗ ಶಿಕ್ಷಕರ ತಾಳ್ಮೆಯ ಕಟ್ಟೆ ಒಡೆದಿದೆ.ಆದ್ದರಿಂದ ಅನಿವಾರ್ಯವಾಗಿ ಬೀದಿಗೆ ಇಳಿದಿದ್ದೇವೆ. ಆ. 12 ರಂದು ‘ಬೆಂಗಳೂರು ಚಲೋ’ಗೆ ನಮ್ಮ ತಾಲೂಕಿನಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೋರಾಟ ಯಶಸ್ವಿಗೊಳಿಸಲಿದ್ದೇವೆ’ ಎಂದರು.

ಎಲ್ಲಾ ಶಿಕ್ಷಕರು ಒಗ್ಗೂಡಿ ಹೋರಾಡೋಣ:ರಾಜೇಶ್ ನೆಲ್ಯಾಡಿ: ಈ ಸಂದರ್ಭದಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಖಜಾಂಚಿ ರಾಜೇಶ್ ನೆಲ್ಯಾಡಿ ಮಾತನಾಡಿ,’ರಾಜ್ಯ ಸಂಘ ನೀಡಿದ ನಿರ್ದೇಶನದಂತೆ,ನಾವು ಇಂದು ತಾಲೂಕು ಹಂತ,ಜಿಲ್ಲಾಹಂತದಲ್ಲಿ ಎಚ್ಚರಿಕೆ ಮನವಿ ಸಲ್ಲಿಸುತ್ತಿದ್ದೇವೆ. ಸರಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು.ಇದಕ್ಕಾಗಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಡೋಣ.ಎಲ್ಲರೂ ‘ಬೆಂಗಳೂರು ಚಲೋ’ಗೆ ಬೆಂಬಲ ನೀಡೋಣ.ಅನಿವಾರ್ಯವಾಗಿ ಬರಲಾಗದವರು ಕರ್ತವ್ಯಕ್ಕೆ ಗೈರಾಗುವ ಮೂಲಕ ಬೆಂಬಲ ನೀಡಬೇಕೆಂದರು. ಸಂಘದ ತಾಲೂಕು ಹಂತದ ಪದಾಧಿಕಾರಿಗಳು, ಶಿಕ್ಷಕರು ಉಪಸ್ಥಿತರಿದ್ದರು.ಮನವಿ ಸ್ವೀಕರಿಸಿದ ಬಿ.ಇ.ಓ., ತಹಸೀಲ್ದಾರ್ ಸರಕಾರಕ್ಕೆ ನಿಮ್ಮ ಬೇಡಿಕೆಗಳನ್ನು ಕಳುಹಿಸಲಾಗುವುದು ಎಂದರು.ಶಾಸಕರ ಕಚೇರಿಯಲ್ಲಿ ಅವರ ಅನುಪಸ್ಥಿಯಲ್ಲಿ ಆಪ್ತ ಸಹಾಯಕರ ಮೂಲಕ ಮನವಿ ನೀಡಲಾಯಿತು.

ಶಿಕ್ಷಕರ ಪ್ರಮುಖ ಹಕ್ಕೊತ್ತಾಯಗಳು: 2017ರ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು 2016ಕ್ಕಿಂತ ಮೊದಲು ನೇಮಕಾತಿಯಾದವರಿಗೆ ಪೂರ್ವಾನ್ವಯಗೊಳಿಸಬಾರದು ಹಾಗೂ ಇದರಿಂದ ಪ್ರಾಥಮಿಕ ಶಾಲಾ ಸೇವಾನಿರತ ಶಿಕ್ಷಕರಿಗಾಗಿರುವ ಅನ್ಯಾಯವನ್ನು ಸರಿಪಡಿಸಿ, ಪದವಿ ಪೂರ್ಣಗೊಳಿಸಿರುವ ಶಿಕ್ಷಕರನ್ನು ಸೇವಾ ಜೇಷ್ಠತೆಯೊಂದಿಗೆ “ಪದವೀಧರ ಶಿಕ್ಷಕರೆಂದು ಪದನಾಮೀಕರಿಸುವುದು.ಅರ್ಹ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 2016ರ ಪೂರ್ವದಂತೆ ಪ್ರೌಢಶಾಲೆಗೆ ಬಡ್ತಿ ನೀಡಬೇಕು.ಪ್ರಾಥಮಿಕ ಶಾಲಾ ಶಿಕ್ಷಕರಿಗೆ 2016 ರ ಪೂರ್ವದಂತೆ ಮುಖ್ಯಗುರುಗಳ ಹಾಗೂ ಹಿರಿಯ ಮುಖ್ಯಗುರುಗಳ ಹುದ್ದೆಗೆ ಸೇವಾ ಜೇಷ್ಠತೆಯ ಆಧಾರದ ಮೇಲೆ ಭಡ್ತಿ ನೀಡಬೇಕು.

Exit mobile version