ಉಜಿರೆ: ಶ್ರೀ ಧ.ಮಂ. ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ‘ಸೈಬರ್ ಅಪರಾಧ ಮತ್ತು ಸುರಕ್ಷತೆ’ ಕುರಿತ ಜಾಗೃತಿ ಕಾರ್ಯಕ್ರಮವನ್ನು ಬೆಳ್ತಂಗಡಿಯ ರೋಟರಿ ಕ್ಲಬ್ ಹಾಗೂ ಮಂಗಳೂರಿನ ಸೈಬರ್ ಅಪರಾಧ ತಡೆ ದಳ ಸಹಯೋಗದಲ್ಲಿ ಜುಲೈ 20ರಂದು ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮಂಗಳೂರಿನ ಸೈಬರ್, ಎಕನಾಮಿಕ್ಸ್ ಆ್ಯಂಡ್ ನಾರ್ಕೋಟಿಕ್ ಕ್ರೈಮ್ಸ್ ಪೊಲೀಸ್ ಠಾಣಾ ಡಿವೈ.ಎಸ್.ಪಿ. ಮಂಜುನಾಥ ಮಾತಾಡುತ್ತಾ ಡಾಟಾ ಎಂಟ್ರಿ, ಅರೆಕಾಲಿಕ ಉದ್ಯೋಗ ಭರವಸೆ ನೀಡಿ ಹಣದ ವಂಚನೆ, ಪಾರ್ಸೆಲ್‌ನಲ್ಲಿ ಮಾದಕ ವಸ್ತು ಪತ್ತೆಯಾಗಿದೆ ಎನ್ನುತ್ತಾ ವಾಟ್ಸಾಪ್ ಕರೆಯಲ್ಲಿ ಪೊಲೀಸ್ ಸಮವಸ್ತ್ರದಲ್ಲಿ ಕಾಣಿಸಿಕೊಂಡು ಹಣಕ್ಕಾಗಿ ಪೀಡನೆ, ಯುವಕ-ಯುವತಿಯರ ಫೋಟೊಗಳನ್ನು ಡಿ.ಪಿ., ಫೇಸ್ಬುಕ್‌ಗಳಿಂದ ಸಂಗ್ರಹಿಸಿ ಅಶ್ಲೀಲವಾಗಿ ಬಳಸಿಕೊಳ್ಳುವ ಬೆದರಿಕೆಯೊಂದಿಗೆ ಸತತವಾಗಿ ಹಣ ಕೀಳುವಂತಹ ಅನೇಕ ವಂಚನೆಯ ಜಾಲಗಳು ಸಕ್ರಿಯವಾಗಿದ್ದು ಅದಕ್ಕೆ ಪ್ರತಿಯಾಗಿ ಜನರು ಜಾಗ್ರತರಾಬೇಕು. ಅಗತ್ಯ ಕಂಡುಬಂದಲ್ಲಿ ಸಮಯ ವ್ಯರ್ಥಮಾಡದೆ ಪೊಲೀಸ್ ಠಾಣೆಯನ್ನು ಅಥವಾ 1930ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕೆಂದು ತಿಳುವಳಿಕೆ ನೀಡಿದರು.
ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯ ಮಾಹಿತಿ ತಂತ್ರಜ್ಞಾನ ಮತ್ತು ವಿದ್ಯಾರ್ಥಿ ನಿಲಯಗಳ ಆಡಳಿತ ವಿಭಾಗದ ಸಿಇಒ ಪೂರನ್ ವರ್ಮ, ರೋಟರಿ ಕಾರ್ಯದರ್ಶಿ ರೊ. ಸಂದೇಶ್, ಬಂದರು ಪೊಲೀಸ್ ಠಾಣೆಯ ಉಪ ನಿರೀಕ್ಷಕ ಮಂಜುನಾಥ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ.ಅಶೋಕ್ ಕುಮಾರ್ ಸ್ವಾಗತಿಸಿ, ವಂದಿಸಿದರು.