Site icon Suddi Belthangady

ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಮತ್ತು ಟೆಬಲ್ ಟೆನ್ನಿಸ್ ಪಂದ್ಯಾಟ

ಮೂಡುಬಿದಿರೆ: ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ-ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಮೂಡುಬಿದಿರೆ ತಾಲ್ಲೂಕು, ದ.ಕ ಮತ್ತು ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ- ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಬಾಲಕಿಯರ 2024-25ನೇ ಸಾಲಿನ ಮೂಡಬಿದಿರೆ ತಾಲೂಕು ಮಟ್ಟದ- ಶಟಲ್ ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನ್ಸಿಸ್ ಪಂದ್ಯಾಟ ಆಗಸ್ಟ್ 3ರಂದು ನಡೆಯಿತು.

ಪಂದ್ಯಾಟಗಳನ್ನು ಉದ್ಘಾಟಿಸಿ ಮಾತನಾಡಿದ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಯುವರಾಜ್ ಜೈನ್- “ಮಕ್ಕಳೇ, ವಿದ್ಯಾರ್ಥಿ ಜೀವನ ಬಹು ಅಮೂಲ್ಯವಾದದ್ದು, ಇಲ್ಲಿ ನಿಮಗೆ ದೊರೆಯುವ ಎಲ್ಲಾ ರೀತಿಯ ಅವಕಾಶಗಳನ್ನು ಬಳಸಿಕೊಳ್ಳಿ, ಗುರಿಯಿಟ್ಟು ಛಲಬಿಡದೇ, ನಿರಂತರವಾಗಿ ಯಶಸ್ಸಿಗಾಗಿ ಶ್ರಮಿಸಿ, ಗೆದ್ದಾಗ ಅತೀಯಾಗಿ ಹಿಗ್ಗದೇ, ಸೋತಾಗ ಕುಗ್ಗದೇ, ಸೋಲನ್ನು ಗೆಲುವಿನ ಮೆಟ್ಟಿಲುಗಳನ್ನಾಗಿ ಬಳಸಿಕೊಂಡು ನಿಮ್ಮ ಗುರಿಯತ್ತ ಮುನ್ನಡೆಯಿರಿ. ಬೇರೆಯವರು ಗೆದ್ದಾಗ ಅಸೂಯೆ ಪಡದೇ, ಅವರಿಂದ ಪಾಠ ಕಲಿಯಿರಿ- ನನ್ನಿಂದಾಗದು ಎಂಬ ಕೆಟ್ಟ ಯೋಚನೆಯನ್ನು ಮನಸ್ಸಿನಿಂದ ತೆಗೆದುಹಾಕಿ. ಮುಂದಿನ ದಿನಗಳಲ್ಲಿ ಒಲಿಂಪಿಕ್ಸ್‌ನಂತಹ ಶ್ರೇಷ್ಠ ಮಟ್ಟದ ಕ್ರೀಡಾಕೂಟಗಳಲ್ಲಿ ಭಾರತಮಾತೆಯನ್ನು ಪ್ರತಿನಿಧಿಸಿ-ಪದಕ ಗೆಲ್ಲುವ ಸಾಧಕರು ನೀವಾಗಿ. ಇದಕ್ಕೆ ಬೇಕಾಗುವ ಎಲ್ಲಾ ರೀತಿಯ ಸಹಕಾರವನ್ನು ಅರ್ಹ ವಿದ್ಯಾರ್ಥಿಗಳಿಗೆ ಒದಗಿಸಿಕೊಡಲು ಎಕ್ಸಲೆಂಟ್ ವಿದ್ಯಾಸಂಸ್ಥೆ ಸದಾ ಸಿದ್ಧವಿದೆ” ಎನ್ನುತ್ತಾ ಎಲ್ಲ ಮಕ್ಕಳಿಗೂ ಶುಭಹಾರೈಸಿದರು.

ಪ್ರಸ್ತಾವಿಕವಾಗಿ ಮಾತನಾಡಿದ ಮೂಡುಬಿದಿರೆಯ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿಯವರು, ಈ ಆಟಗಳ ರೂಪುರೇಷೆಗಳನ್ನು ವಿವರಿಸಿ, ಅತ್ಯಂತ ಅಚ್ಚುಕಟ್ಟಾದ ಒಳಾಂಗಣ ಕ್ರೀಡಾಂಗಣದಲ್ಲಿ ಸುಂದರ ರೀತಿಯಲ್ಲಿ ಇಂದಿನ ಆಟಗಳಿಗೆ ಮಾಡಿದ ವ್ಯವಸ್ಥೆಗಳಿಗಾಗಿ ಇಲಾಖೆಯ ವತಿಯಿಂದ ಎಕ್ಸಲೆಂಟ್ ವಿದ್ಯಾಸಂಸ್ಥೆಗೆ ಅಭಿನಂದನೆಗಳನ್ನು ಸಲ್ಲಿಸಿದರು. ಮಕ್ಕಳು ಇದರ ಪ್ರಯೋಜನಗಳನ್ನು ಪಡೆದುಕೊಂಡು ಕ್ರೀಡಾಸ್ಪೂರ್ತಿಯಿಂದ ಭಾಗವಹಿಸಿ, ಮುಂದಿನ ದಿನಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಕ್ರೀಡೆಯಲ್ಲಿ ಪ್ರತಿನಿಧಿಸುವಂತಹ ಮಕ್ಕಳಾಗಿ ಬೆಳೆಯಿರಿ ಎಂಬ ಶುಭಹಾರೈಕೆಯನ್ನಿತ್ತರು.
ಈ ಸಂದರ್ಭದಲ್ಲಿ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಕಾರ‍್ಯದರ್ಶಿಗಳಾದ- ರಶ್ಮಿತಾ ಜೈನ್, ಮೂಡಬಿದಿರೆ ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ನವೀನ್ ಪುತ್ರನ್ ಹಾಗೂ ಎಕ್ಸಲೆಂಟ್ ಕ್ರೀಡಾ ತರಬೇತುದಾರ ಯಸ್.ಯಸ್ ಪಾಟೀಲ್‌ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ತಾಲೂಕಿನ ಬೇರೆ ಬೇರೆ ಶಾಲೆಗಳಿಂದ ಸುಮಾರು 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ಪಂದ್ಯಾಟಗಳಲ್ಲಿ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯ ಹದಿನೇಳು ವರ್ಷದೊಳಗಿನ ಬಾಲಕಿಯರ ಶಟಲ್ ಬ್ಯಾಡ್ಮಿಂಟನ್ ಹದಿನಾಲ್ಕು ವರ್ಷದೊಳಗಿನ ಬಾಲಕರ ಶಟಲ್ ಬ್ಯಾಡ್ಮಿಂಟನ್ ಮತ್ತು ಬಾಲಕಿಯರ ಟೇಬಲ್ ಟೆನ್ನೀಸ್ ಹದಿನೇಳು ವರ್ಷದೊಳಗಿನ ಬಾಲಕರ ಟೇಬಲ್ ಟೆನ್ನೀಸ್ ತಂಡಗಳು ಜಯಗಳಿಸಿ ಜಿಲ್ಲಾ ಹಂತಕ್ಕೆ ಪ್ರವೇಶ ಪಡೆದವು.

ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕರಾದ ಶಿವಪ್ರಸಾದ್ ಭಟ್ ಅತಿಥಿಗಳನ್ನು ಸ್ವಾಗತಿಸಿದರು, ಸಂಸ್ಥೆಯ ವಿಜ್ಞಾನ ಶಿಕ್ಷಕ ಪ್ರಜ್ವಲ್ ಶೆಟ್ಟಿಯವರು ಕಾರ‍್ಯಕ್ರಮ ನಿರೂಪಿಸಿ, ವಂದನಾರ್ಪಣೆಗೈದರು.

Exit mobile version