Site icon Suddi Belthangady

ಧರ್ಮಸ್ಥಳದ ಬೋಳಿಯಾರ್‌ನಲ್ಲಿ ಕಾಡಾನೆಗಳ ಹಾವಳಿ- ಆನೆಗಳನ್ನು ಓಡಿಸಿ ಎಂದವರಿಗೆ ಗರ್ನಾಲ್ ಕೊಟ್ಟ ಅರಣ್ಯ ಇಲಾಖೆ

ಬೆಳ್ತಂಗಡಿ: ಧರ್ಮಸ್ಥಳ ಸಮೀಪ ಮುಖ್ಯರಸ್ತೆಯಲ್ಲೇ ಜು.31ರಂದು ಕಂಡುಬಂದಿದ್ದ ಎರಡು ಕಾಡಾನೆಗಳು ಕೆಲವು ದಿನಗಳಿಂದ ಬೋಳಿಯಾರು ಭಾಗದಲ್ಲಿ ಬೀಡಿಬಿಟ್ಟಿದ್ದು, ಪ್ರತಿದಿನ ರಾತ್ರಿ ತೋಟಗಳಿಗೆ ನುಗ್ಗಿ ಹಾನಿ ಎಸಗುತ್ತಿವೆ.

ಸಂಜೆ 6 ಗಂಟೆಯಾಗುತ್ತಿದ್ದಂತೆ ಕಾಡಿನಿಂದ ಹೊರಬಂದು ಜನವಸತಿ ಪ್ರದೇಶಕ್ಕೆ ನುಗ್ಗುವ ಆನೆಗಳು, ಮನೆಯ ಸಮೀಪದವರೆಗೂ ಯಾವುದೇ ಹೆದರಿಕೆಯಿಲ್ಲದೆ ಬರುತ್ತಿವೆ. ತೋಟದಲ್ಲಿ ಅಡಿಕೆ, ತೆಂಗು, ಬಾಳೆಗಿಡಗಳನ್ನು ಧ್ವಂಸ ಮಾಡುತ್ತಿವೆ. ಮರಗೆಣಸು, ತರಕಾರಿ ಗಿಡಗಳನ್ನೂ ಬಿಡದೆ ನಾಶ ಮಾಡುತ್ತಿವೆ.

ಪ್ರಾಣಭಯದಲ್ಲೇ ಬದುಕು: ಎರಡು ಆನೆಗಳ ಪೈಕಿ ಒಂದು ಹೆಣ್ಣಾನೆ, ಇನ್ನೊಂದು ಅದರ ಆಳೆತ್ತರದ ಗಂಡು ಮರಿ. ಕೆಲದಿನಗಳ ಹಿಂದೆ ಆನೆ ಬಂತೆಂದು ನೋಡಲು ಹೋದ ಸ್ಥಳೀಯರೊಬ್ಬರನ್ನು ಆನೆಗಳು ಅಟ್ಟಿಸಿಕೊಂಡು ಬಂದಿವೆ. ರಾತ್ರಿಯಾಗುತ್ತಿದ್ದಂತೆ ಪ್ರತಿದಿನ ಆನೆಗಳು ಬರುತ್ತಿರುವುದರಿಂದ ಕೆಲಸ ಕಾರ್ಯಗಳಿಗೆ ಹೊರಗೆ ಹೋದವರು ಸಂಜೆಯೊಳಗೆ ಮನೆ ಸೇರಬೇಕಿದ್ದು, ರಾತ್ರಿ ಅನಾರೋಗ್ಯ ಸಹಿತ ಯಾವುದೇ ತುರ್ತು ಸಂದರ್ಭ ಎದುರಾದರೂ ಹೊರಗೆ ಹೋಗುವಂತಿಲ್ಲ. ಮನೆಯ ಹತ್ತಿರವೇ ಆನೆಗಳು ಬರುತ್ತಿರುವುದರಿಂದ ರಾತ್ರಿ ನಿದ್ದೆ ಮಾಡಲಾಗುತ್ತಿಲ್ಲ ಎಂದು ಬೋಳಿಯಾರು ಪ್ರದೇಶದವರು ಸುದ್ದಿ ಬಿಡುಗಡೆಯೊಂದಿಗೆ ಅಳಲು ತೋಡಿಕೊಂಡಿದ್ದಾರೆ.

ಗರ್ನಾಲ್ ಕೊಟ್ಟ ಇಲಾಖೆ: ಕಾಡಾನೆಗಳನ್ನು ಇಲ್ಲಿಂದ ಓಡಿಸಬೇಕೆಂಬುದು ಸ್ಥಳೀಯರ ಬೇಡಿಕೆ. ಇದನ್ನೇ ಅರಣ್ಯ ಇಲಾಖೆ ಹಾಗೂ ಧರ್ಮಸ್ಥಳ ಗ್ರಾಮ ಪಂಚಾಯತ್ ಗಮನಕ್ಕೂ ತಂದಿದ್ದಾರೆ. ಜು.5ರಂದು ಬೋಳಿಯಾರು ಪ್ರದೇಶಕ್ಕೆ ಭೇಟಿ ನೀಡಿರುವ ಅರಣ್ಯ ಇಲಾಖೆಯ ಸಿಬ್ಬಂದಿ, ಆನೆಗಳನ್ನು ಓಡಿಸಲು ಪ್ರಯತ್ನ ಮಾಡುವ ಕುರಿತು ಕೈಚೆಲ್ಲಿದ್ದಾರೆ. ಅದರ ಬದಲಿಗೆ, ಸ್ಥಳೀಯರ ಮನೆಗಳಿಗೆ ತೆರಳಿ ತಲಾ 5ರಂತೆ ಗರ್ನಾಲ್‌ಗಳನ್ನು ನೀಡಿದ್ದಾರೆ. ಆನೆಗಳು ಬಂದರೆ ಗರ್ನಾಲ್ ಎಸೆಯುವಂತೆ ಸೂಚಿಸಿದ್ದಾರೆ. ಅಲ್ಲದೆ, ಕಾಡಾನೆಗಳಿಂದ ಬೆಳೆಹಾನಿಯಾಗಿರುವ ಕುರಿತು ಪಹಣಿ ಪತ್ರ ಸಹಿತ ಅರ್ಜಿ ಸಲ್ಲಿಸುವಂತೆಯೂ ತಿಳಿಸಿದ್ದಾರೆ.

Exit mobile version