Site icon Suddi Belthangady

ಬೆಳ್ತಂಗಡಿ: ವಾಣಿ ಕಾಲೇಜಿನಲ್ಲಿ ಆಟಿ ಒಂಜಿ ನೆಂಪು ಉಪನ್ಯಾಸ ಕಾರ್ಯಕ್ರಮ

ಬೆಳ್ತಂಗಡಿ: ವೈಚಾರಿಕ ಹಾಗೂ ವೈಜ್ಞಾನಿಕ ವಿಚಾರಗಳನ್ನು ಒಳಗೊಂಡ ತುಳುನಾಡಿನ ಆಚರಣೆಗಳು ಬಹು ವೈಶಿಷ್ಟ್ಯತೆಯಿಂದ ಕೂಡಿದೆ ಎಂದು ವಾಣಿ ಪದವಿಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಮೀನಾಕ್ಷಿ ಹೇಳಿದರು.

ಅವರು ವಾಣಿ ಪದವಿ ಪೂರ್ವ ಕಾಲೇಜಿನ ತುಳು ಸಂಘದ ಆಶ್ರಯದಲ್ಲಿ ಜರಗಿದ ಆಟಿ ಒಂಜಿ ನೆಂಪು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ತುಳು ನಾಡಿನ ಜನರು ಪ್ರಕೃತಿಗೆ ಪೂರಕವಾಗಿ ನಡೆದುಕೊಂಡಿದ್ದು ವರ್ಷದ ಎಲ್ಲಾ ಕಾಲದಲ್ಲೂ ಬದುಕುವ ಕಲೆಯನ್ನು ರೂಡಿಸಿಕೊಂಡಿದ್ದರು. ಆಷಾಢ ತಿಂಗಳಲ್ಲಿ ಆಹಾರದ ಕೊರತೆಯಾದಾಗ ಪರಿಸರದಲ್ಲಿ ದೊರೆಯುವ ಸೊಪ್ಪು, ಗೆಡ್ಡೆ, ಗೆಣಸುಗಳನ್ನು ತಿಂದು ಜೀವಿಸುವುದರೊಂದಿಗೆ ತಮ್ಮ ಆರೋಗ್ಯವನ್ನು ಕಾಪಾಡಿಕೊಂಡಿದ್ದರು. ಇದರಿಂದ ವರ್ಷವಿಡಿ ರೋಗ ಮುಕ್ತರಾಗಿರಲು ಸಾಧ್ಯವಾಗಿತ್ತು. ಇಂದಿನ ಕಾಲದ ಜನರು ತುಳುನಾಡಿನ ಆಚರಣೆಗಳ ಮಹತ್ವವನ್ನು ತಿಳಿದುಕೊಂಡು ಮುಂದಿನ ಪೀಳಿಗೆಗೆ ಹೇಳಿಕೊಡಬೇಕು ಎಂದರು.

ವಾಣಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ನಾರಾಯಣ ಗೌಡ ದೇವಸ್ಯ ಚೆನ್ನೆಮಣೆ ಆಟ ಆಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಇವತ್ತಿನ ಜನರು ಪ್ರಕೃತಿದತ್ತ ಆಹಾರದ ಬದಲು ಹೆಚ್ಚಾಗಿ ರೆಸ್ಟೋರೆಂಟ್ ಆಹಾರವನ್ನು ತಿನ್ನುತ್ತಾರೆ. ಹಾಗಾಗಿ ಬೇರೆ ಬೇರೆ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ. ಕಷ್ಟಪಟ್ಟು ದುಡಿದು ಉತ್ತಮವಾದ ಆಹಾರವನ್ನು ತಿಂದಾಗ ಮಾತ್ರ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಸಾಧ್ಯ ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಯದುಪತಿ ಗೌಡ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲ ವಿಷ್ಣು ಪ್ರಕಾಶ್ ಎಂ ಉಪಸಿದ್ಧರಿದ್ದರು.ತುಳು ಸಂಘದ ಸಂಯೋಜಕ ಮಹಾಬಲ ಗೌಡ ಸ್ವಾಗತಿಸಿದರು. ಉಪನ್ಯಾಸಕ ಬೆಳ್ಳಿಯಪ್ಪ.ಕೆ ವಂದಿಸಿದರು. ಕುಮಾರಿ ಅನುಕ್ಷಾ ಕಾರ್ಯಕ್ರಮ ನಿರೂಪಿಸಿದರು.

Exit mobile version