ಉಜಿರೆ: ಪುಸ್ತಕಗಳು ಕೇವಲ ಮಾಹಿತಿಗಾಗಿರದೆ ಚಿಂತನೆಗಾಗಿ ಮಿದುಳಿಗೆ ಮೇವನ್ನು ನೀಡುವಂತಿರಬೇಕು. ಕೃತಿಗಳಿಂದ ಅಂತಹ ಸಂದೇಶ ತಿಳಿದುಕೊಂಡಾಗ ಓದುಗರಿಂದ ಮೆಚ್ಚುಗೆ ಪಡೆಯುತ್ತದೆ.ವೃತ್ತಿ ಮತ್ತು ಪ್ರವೃತ್ತಿಯಲ್ಲಿ ಹೊಂದಾಣಿಕೆಯಿದ್ದಾಗ ಅವರು ಕಾರ್ಯದಲ್ಲಿ ಯಶಸ್ವಿಯಾಗುತ್ತಾರೆ ಎಂದು ಉಜಿರೆ ಶ್ರೀ ಧ.ಮಂ.ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್. ನುಡಿದರು.
ಅವರು ಜು 31ರಂದು ಬೆಳಾಲು ಶ್ರೀ ಧ.ಮಂ.ಪ್ರೌಢ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ನಿವೃತ್ತರಾಗುತ್ತಿರುವ ರಾಮಕೃಷ್ಣ ಭಟ್ ಚೊಕ್ಕಾಡಿಯವರ “ಶಿಖರ” ಮತ್ತು “ಶಿಕ್ಷಣ ನೋಟ” ಕೃತಿಗಳನ್ನು ಅನಾವರಣಗೊಳಿಸಿ ಮಾತನಾಡಿದರು. ಕನ್ನಡ ಮಾಧ್ಯಮ ಶಾಲೆಗಳು ಅನೇಕ ಸವಾಲುಗಳನ್ನೆದುರಿಸಿ ಯಶಸ್ವಿಯಾಗಿ ನಡೆಯುತ್ತಿವೆ.ಮಾಧ್ಯಮವನ್ನು ಪರೀಕ್ಷೆಯ ದೃಷ್ಟಿಯಿಂದ ನೋಡದೆ ಪರಿಪೂರ್ಣ ವ್ಯಕ್ತಿತ್ವಕ್ಕೆಪೂರಕವಾದ ಜೀವನ ಶಿಕ್ಷಣ ಕಲಿಕೆಯಿಂದ ಯಶಸ್ವಿಯಾಗುತ್ತದೆ ಕನ್ನಡ ಮಾಧ್ಯಮವನ್ನು ಕೀಳಾಗಿ ಕಾಣದೆ ಮಾತೃಭಾಷೆಯ ಶಿಕ್ಷಣಕ್ಕೆ ಪ್ರಾಧಾನ್ಯತೆ ನೀಡಿದಾಗ ಯಶಸ್ವಿಯಾಗುವುದು.ರಾಮಕೃಷ್ಣ ಭಟ್ ಅವರು ಹೊಂದಾಣಿಕೆಯಿಂದ ಸಮತೋಲನ ಕಾಯ್ದುಕೊಂಡು ಬಂದಿದ್ದಾರೆ ಎಂದು ಅಭಿನಂದಿಸಿದರು.
ಮುಖ್ಯ ಅತಿಥಿ ಬೆಳಾಲು ಗ್ರಾ.ಪಂ.ಅಧ್ಯಕ್ಷೆ ವಿದ್ಯಾ ಶ್ರೀನಿವಾಸ ಗೌಡ ಅವರು ಮಾತನಾಡಿ ರಾಮಕೃಷ್ಣ ಭಟ್ ಅವರು ಚೊಕ್ಕಾಡಿಯಿಂದ ಬಂದು ಬೆಳಾಲಿನವರಾಗಿ ಹಳ್ಳಿ ಶಾಲೆಯ ಮಕ್ಕಳನ್ನು ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿ, ಸಾಹಿತಿಯಾಗಿ ಪರಿವರ್ತಿಸಿದವರು. ಮುಂದೆಯೂ ಅವರು ಬೆಳಾಲಿನವರಾಗಿಯೇ ಉಳಿದು ಸಲಹೆ, ಸೂಚನೆ, ಮಾರ್ಗದರ್ಶನ ನೀಡಲಿ ಎಂದು ನುಡಿದು ಸ್ವರಚಿತ ಕವನ ವಾಚಿಸಿದರು.ಶ್ರೀ ಅರಿಕೋಡಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಅರಿಕೋಡಿ ಅವರು ಬೆಳಾಲು ಗ್ರಾಮವನ್ನು ತನ್ನ ಶೈಕ್ಷಣಿಕ, ಸಾಹಿತ್ಯಿಕ, ಸಾಮಾಜಿಕ ಕೊಡುಗೆಯಿಂದ ರಾಮಕೃಷ್ಣ ಭಟ್ ಅವರು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ.ಅವರ ಮಾರ್ಗದರ್ಶನ ನಿರಂತರವಾಗಿರಲಿ ಎಂದು ಶುಭ ಹಾರೈಸಿದರು.
ದ.ಕ.ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ರಾಮಕೃಷ್ಣ ಭಟ್ ತಾಲೂಕಿಗೆ ಸೀಮಿತರಾಗದೆ ಜಿಲ್ಲೆಯಲ್ಲೂ ಜನಪ್ರಿಯರಾದವರು.ರಾಷ್ಟ್ರೀಯ ಶಿಕ್ಷಣ ನೀತಿಯ ಜ್ಞಾನವನ್ನು ವಿ.ವಿ.ಗಳಿಗೆ ಪಾಠ ಮಾಡುವಷ್ಟು ಪರಿಪೂರ್ಣರು.ಸಾಹಿತ್ಯ ಪರಿಷತ್ ಗೆ ಅವರ ಕೊಡುಗೆ ಅಪೂರ್ವವಾದುದು ಎಂದರು.
ವಿಶೇಷ ದತ್ತಿ ನಿಧಿ ಹಸ್ತಾಂತರ: ಉಷಾ ಎನ್.ಉಡುಪ ಅವರ ನೆನಪಿನ ರೂ.5ಲಕ್ಷ ಮೊತ್ತದ ಶಾಶ್ವತ ದತ್ತಿನಿಧಿಯನ್ನು ಎಚ್ ನಾಗರಾಜ ಉಡುಪರು ಶಿಕ್ಷಣ ಸಂಸ್ಥೆಗೆ ಡಾ.ಸತೀಶ್ಚಂದ್ರ ಅವರ ಮೂಲಕ ಹಸ್ತಾಂತರಿಸಿದರು.ದತ್ತಿನಿಧಿ ನೀಡಿದ ನಾಗರಾಜ ಉಡುಪ, ಕೃತಿ ಪ್ರಕಟಣೆಗೆ ನೆರವಾದ ಹರೀಶ್ ಅರಿಕೋಡಿ ಮತ್ತು ಹಳೆ ವಿದ್ಯಾರ್ಥಿ ಸಂಘದ ಗಣೇಶ್ ಕುಕ್ಕಿಲ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಬೆಳ್ತಂಗಡಿ ತಾಲೂಕಿನ ಎಲ್ಲ ಪ್ರೌಢ ಶಾಲೆಗಳಿಗೆ “ಶಿಖರ” ಕೃತಿಯನ್ನು ರಮೇಶ್ ಮಯ್ಯ ಅವರಿಗೆ, ಜಿಲ್ಲೆಯ ಎಲ್ಲ ಪ್ರೌಢ ಶಾಲೆಗಳಿಗೆ “ಶಿಕ್ಷಣದ ನೋಟ” ಕೃತಿಯನ್ನು ಮುರಳಿಕೃಷ್ಣ ಆಚಾರ್ ಅವರಿಗೆ, ಎಸ್ ಡಿ.ಎಂ ಶಿಕ್ಷಣ ಸಂಸ್ಥೆಯ 15 ಶಾಲೆಗಳಿಗೆ ತಲಾ 2 ಪ್ರತಿಗಳಂತೆ ಮನಮೋಹನ್ ನಾಯಕ್ ಅವರಿಗೆ ಹಾಗು ತಾಲೂಕಿನ 200 ಪ್ರೈಮರಿ ಶಾಲೆಗಳಿಗೆ “ಶಿಖರ” ಕೃತಿಯನ್ನು ಉಚಿತವಾಗಿ ವಿತರಿಸಲಾಯಿತು.
ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ, ಶಾಲೆಯ ನಿಯೋಜಿತ ಮುಖ್ಯ ಶಿಕ್ಷಕ ಜಯರಾಮ ಮಯ್ಯ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ್ ಕುಕ್ಕಿಲ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕೃತಿಕಾರ ರಾಮಕೃಷ್ಣ ಭಟ್ ಚೊಕ್ಕಾಡಿ ಸ್ವಾಗತಿಸಿ, ಕಳೆದ 23 ವರ್ಷಗಳಿಂದ ಶಾಲೆಯ ಮುಖ್ಯ ಶಿಕ್ಷಕನಾಗಿ ಶಾಲೆಯ ಅಭಿವೃದ್ಧಿಯ ಜತೆಗೆ 7 ಕೃತಿಗಳ ಪ್ರಕಟಣೆಗೆ ಎಲ್ಲರ ಪ್ರೋತ್ಸಾಹ, ಸಹಕಾರ ದೊರೆತಿದೆ ಎಂದರು.
ಬೆಳ್ತಂಗಡಿ ತಾಲೂಕು ಕ.ಸಾ.ಪ.ಅಧ್ಯಕ್ಷ ಯದುಪತಿ ಗೌಡ ಪ್ರಸ್ತಾವಿಸಿ, ಶಿಕ್ಷಕ, ಸಾಹಿತಿ ಅರವಿಂದ ಚೊಕ್ಕಾಡಿ ಕೃತಿಗಳನ್ನು ಪರಿಚಯಿಸಿದರು.ಶಿಕ್ಷಕ ಸುಮಂತ್ ನಿರೂಪಿಸಿ, ರಾಜಶ್ರೀ ಕಾರ್ಯಕ್ರಮ ವಂದಿಸಿದರು.