Site icon Suddi Belthangady

ತಾಲೂಕು ಮರಾಟಿ‌ ಸಮಾಜ ಸೇವಾ ಸಂಘದ ಮಾಸಿಕ‌ ಸಭೆ- ಶೀಘ್ರದಲ್ಲಿ ಮಹಿಳಾ‌ ಹಾಗೂ ವಿದ್ಯಾರ್ಥಿ ವೇದಿಕೆ ರಚನೆ: ಅಧ್ಯಕ್ಷ ಸತೀಶ್ ಹೆಚ್.ಎಲ್ ಹೇಳಿಕೆ

ಬೆಳ್ತಂಗಡಿ: ತಾಲೂಕಿನಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಮರಾಟಿ ಸಮುದಾಯದವರಿದ್ದು, ಎಲ್ಲರೂ ಅಭಿವೃದ್ಧಿ ಹೊಂದುವ ದೃಷ್ಟಿಯಿಂದ ‌ಸಂಘಟನಾತ್ಮಕವಾಗಿ ಸಬಲರಾಗಬೇಕು. ಇದರಿಂದ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗುತ್ತದೆ. ತಾಲೂಕಿನಲ್ಲಿ ಮಹಿಳಾ ವೇದಿಕೆ ಹಾಗೂ ವಿದ್ಯಾರ್ಥಿ ವೇದಿಕೆಗಳು ರೂಪುಗೊಳ್ಳಲು ಯೋಜನೆ ರೂಪಿಸಲಾಗಿದ್ದು, ಸಮುದಾಯದ ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಸ್ವ- ಪ್ರೇರಿತರಾಗಿ ಮುಂದೆ ಬರಬೇಕಿದೆ ಎಂದು ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಸತೀಶ್ ಹೆಚ್. ಎಲ್. ಹೇಳಿದರು.

ಅವರು ರೇಷ್ಮೆ ರೋಡ್ ಬಳಿಯ ತಾರನಾಥ್ ನಾಯ್ಕ್ ಅವರ ನಿವಾಸದಲ್ಲಿ ಹಮ್ಮಿಕೊಂಡಿದ್ದ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೂಡಬಿದಿರೆಯಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಸಮ್ಮೇಳನದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಮುದಾಯದ ಸಹಕಾರ ಅಗತ್ಯ. ಈ ಮೂಲಕ ಸಮುದಾಯದ ವಿವಿಧ ಬೇಡಿಕೆಗಳನ್ನು ಮುಖ್ಯಮಂತ್ರಿಗಳು ಹಾಗೂ ರಾಜ್ಯ ಸರಕಾರದ ಮುಂದೆ ಇಡುವ ಕಾರ್ಯ ಮಾಡಲಾಗುವುದು. ಸರಕಾರದಿಂದ ಇನ್ನಷ್ಟು ಸಹಕಾರ ಲಭಿಸಿದಲ್ಲಿ ಸಮುದಾಯಕ್ಕೆ ಸಹಕಾರಿಯಾಗಲಿದೆ ಎಂದರು.

ತಾಲೂಕಿನಲ್ಲಿ ‌ನಡೆಯಲಿರುವ ಪ್ರತಿಭಾ ಪುರಸ್ಕಾರ ಹಾಗೂ ವಧು- ವರರ ಸಮಾವೇಶದ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಗೌರವ ಸಲಹೆಗಾರ ಕುಮಾರಯ್ಯ ನಾಯ್ಕ್, ಉಪಾಧ್ಯಕ್ಷ ಪ್ರಭಾಕರ್, ಕೋಶಾಧಿಕಾರಿ ಹರೀಶ್ ಪೆರಾಜೆ, ಪದಾಧಿಕಾರಿಗಳಾದ ರವಿ ಬಡಕೋಡಿ, ಸುರೇಶ್ ಹೆಚ್.ಎಲ್., ಚಂದ್ರಾವತಿ ಕೊಯ್ಯೂರು, ರಾಜೇಶ್ ನಾಯ್ಕ್, ಭಾಸ್ಕರ ನಾಯ್ಕ್, ರಜನೀಶ್, ವಿಶಾಲ ಹಾಗೂ ತಾರನಾಥ್ ಅವರ ಕುಟುಂಬಸ್ಥರು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ತಾರನಾಥ ನಾಯ್ಕ್ ಸ್ವಾಗತಿಸಿ, ಪತ್ರಿಕಾ ಮಾಧ್ಯಮ ಕಾರ್ಯದರ್ಶಿ ಹರ್ಷಿತ್ ಪಿಂಡಿವನ ವಂದಿಸಿದರು.

Exit mobile version