Site icon Suddi Belthangady

ಧರ್ಮಸ್ಥಳ ಸಮೀಪ ರಸ್ತೆಯಲ್ಲಿ ಎರಡು ಕಾಡಾನೆಗಳು ಪ್ರತ್ಯಕ್ಷ

ಬೆಳ್ತಂಗಡಿ: ಧರ್ಮಸ್ಥಳ ಸಮೀಪ ಪ್ರಮುಖ ರಸ್ತೆಯಲ್ಲಿ ಎರಡು ಕಾಡಾನೆಗಳು ಜು.31ರಂದು ರಾತ್ರಿ ಕಂಡುಬಂದಿವೆ.

ಉಜಿರೆ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಮಾನವ ಸಂಪನ್ಮೂಲ ಅಧಿಕಾರಿ ಅಜಯ್ ಕುಮಾರ್ ರಾತ್ರಿ 9.15ರ ಸುಮಾರಿಗೆ ಧರ್ಮಸ್ಥಳ ಮಾರ್ಗವಾಗಿ ಪುದುವೆಟ್ಟಿನತ್ತ ಕಾರಿನಲ್ಲಿ ಸಾಗುವಾಗ ಕಾಡಾನೆಗಳು ರಸ್ತೆ ಬದಿಯಲ್ಲಿದ್ದವು. ಕಲ್ಲೇರಿ ದಾಟಿದ ನಂತರ ಧರ್ಮಸ್ಥಳ-ಸುಬ್ರಹ್ಮಣ್ಯ ರಸ್ತೆಯ ಗೋಂಕ್ರಾರ್ ಎಂಬಲ್ಲಿ ಆನೆಗಳಿದ್ದು, ಕೆಲಹೊತ್ತಿನ ಬಳಿಕ ರಸ್ತೆ ದಾಟಿವೆ. ಕಾರು, ಬೈಕ್ ಮತ್ತಿತರ ವಾಹನಗಳು ಸ್ವಲ್ಪ ಹೊತ್ತು ರಸ್ತೆಯಲ್ಲಿ ನಿಂತಿದ್ದು, ಆನೆಗಳು ಯಾರಿಗೂ ತೊಂದರೆ ಮಾಡದೆ ಸಾಗಿವೆ. ಎರಡು ಆನೆಗಳ ಪೈಕಿ ಒಂದು ಮರಿಯಾನೆ ಎಂದು ಅಜಯ್ ಕುಮಾರ್ ಸುದ್ದಿ ಬಿಡುಗಡೆಗೆ ಮಾಹಿತಿ ನೀಡಿದ್ದಾರೆ.

ಕೆಲವಾರಗಳಿಂದ ಕಳೆಂಜ, ಪುದುವೆಟ್ಟು, ನೆರಿಯ ಭಾಗದಲ್ಲಿ‌ ಒಂಟಿ ಆನೆ ಸಂಚರಿಸುತ್ತಿದ್ದು, ಅಡಿಕೆ, ತೆಂಗಿನಮರ, ಬಾಳೆಗಿಡಗಳಿಗೆ ಹಾನಿ ಮಾಡುತ್ತಿದೆ. ಮನೆಗಳ ಸಮೀಪದವರೆಗೂ ಬಂದು ಹಲಸಿನ ಹಣ್ಣು ತಿನ್ನುತ್ತಿರುವ ಘಟನೆಗಳೂ ನಡೆದಿವೆ. ಈಗ ಮತ್ತೆರಡು ಆನೆಗಳು ಈ‌ ಕಡೆ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.

Exit mobile version